Advertisement

ಕೋವಿಡ್ ಸಾವಿನ ಪ್ರಕರಣ ಹೆಚ್ಚಳ; ವಿದ್ಯುತ್‌ ಚಿತಾಗಾರದ ಕೊರತೆ ನೀಗಿಸಲು ಪಾಲಿಕೆ ವ್ಯವಸ್ಥೆ

10:59 AM Jul 28, 2020 | mahesh |

ಮಹಾನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶವಗಳ ಅಂತ್ಯಸಂಸ್ಕಾರ ನೆರವೇರಿಸಲು ಸೂಕ್ತ ಚಿತಾಗಾರದ ಕೊರತೆ ಉಂಟಾಗಿದ್ದು, ಈ ಸಮಸ್ಯೆ ನಿವಾರಿಸಲು ಮನಪಾ ತುರ್ತು ಕ್ರಮಕ್ಕೆ ಮುಂದಾಗಿದೆ. ಪ್ರಸ್ತುತ ಜಿಲ್ಲೆಯ ಯಾವುದೇ ಪ್ರದೇಶದವರು ಕೂಡ ಕೊರೊನಾದಿಂದಾಗಿ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಹಿಂದೂ ಧರ್ಮದ ವಿಧಿ-ವಿಧಾನದಂತೆ ನಡೆಯುವುದಾದರೆ ಬೋಳೂರಿನಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿಯೇ ನಡೆಸಲಾಗುತ್ತಿದೆ. ಹೆಚ್ಚು ಸುರಕ್ಷಿತ ಎಂಬ ಕಾರಣಕ್ಕೆ ವಿದ್ಯುತ್‌ ಚಿತಾಗಾರವನ್ನೇ ಬಳಸಲಾಗುತ್ತಿದೆ. ಆದರೆ ಒಂದು ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾದಿಂದಾಗಿ ಸರಾಸರಿ 4-5 ಮಂದಿ ಮೃತಪಡುತ್ತಿದ್ದಾರೆ. ನಗರದಲ್ಲಿ ಇರುವುದು ಒಂದೇ ವಿದ್ಯುತ್‌ ಚಿತಾಗಾರ. ವಿದ್ಯುತ್‌ ಚಿತಾಗಾರದಲ್ಲಿ ಒಂದು ಶವ ಸುಟ್ಟ ಅನಂತರ ಇನ್ನೊಂದು ಶವ ಸುಡಲು ಕನಿಷ್ಠ 2 ಗಂಟೆಗಳ ಕಾಲ ಕಾಯಬೇಕು. ಅಲ್ಲಿನ ಶಾಖದಿಂದಾಗಿ ಕೂಡಲೇ ಇನ್ನೊಂದು ಶವ ಸುಡಲು ಹತ್ತಿರ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಮಸ್ಯೆಯಾಗಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಬೋಳೂರಿನಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಏಕಕಾಲದಲ್ಲೇ ಅಥವಾ ಕಡಿಮೆ ಸಮಯದ ಅಂತರದಲ್ಲಿ 2 ಶವ ಗಳನ್ನು ಸುಡಲು ಸಾಧ್ಯವಾಗುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

Advertisement

ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ
ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಅಂತಿಮ ದರ್ಶನ ಪಡೆಯಲು ಕುಟುಂಬಿಕರಿಗೆ ಅವಕಾಶವಿದೆ. ಸಾಮಾನ್ಯ ವಾಗಿ ಮೃತದೇಹವನ್ನು ಚಿತಾಗಾರ ಅಥವಾ ದಫ‌ನ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಮೊದಲು ಆ್ಯಂಬುಲೆನ್ಸ್‌ ಗೆ ಹಾಕುವ ಸಂದರ್ಭ ಕುಟುಂಬಿಕರು ಅಂತಿಮ ದರ್ಶನ ಪಡೆಯಬಹುದು. 1ರಿಂದ 2 ಮೀ. ದೂರದಲ್ಲಿ ನಿಂತು ದರ್ಶನ ಪಡೆಯಬಹುದು. ಆದರೆ ಮಾಸ್ಕ್ ಧರಿಸಿರಬೇಕು. ಪಿಪಿಇ ಕಿಟ್‌ ಧರಿಸಬೇಕಾಗಿಲ್ಲ. ಮೃತದೇಹದ ಮುಖದ ಭಾಗವನ್ನು ಪಾರದರ್ಶಕವಾದ ಪ್ಲಾಸ್ಟಿಕ್‌ನಿಂದ ಕವರ್‌ ಮಾಡಲಾಗಿರುತ್ತದೆ. ಹಾಗಾಗಿ, ಮುಖ ನೋಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಚಂದ್ರ ಬಾಯರಿ ಅವರು “ಸುದಿನ’ಕ್ಕೆ ತಿಳಿಸಿದ್ದಾರೆ.

ಬೋಳೂರು ಚಿತಾಗಾರಕ್ಕೆ ಅಗತ್ಯ ವ್ಯವಸ್ಥೆ
ಬೋಳೂರಿನ ವಿದ್ಯುತ್‌ ಚಿತಾಗಾರದಲ್ಲಿ ಏಕ ಕಾಲಕ್ಕೆ 2 ಶವಗಳನ್ನು ದಹನ ಮಾಡಲು ಬೇಕಾದ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡಲಾಗುವುದು. ಇದಕ್ಕೆ 65 ಲ.ರೂ. ವೆಚ್ಚದ ಕಾಮಗಾರಿ ನಡೆಸಲು ಟೆಂಡರ್‌ ಪ್ರಕ್ರಿಯೆ ನಡೆದಿದೆ. ಅಲ್ಲದೆ ನಂದಿಗುಡ್ಡೆಯಲ್ಲಿ ಸುಮಾರು 1.15 ಕೋ.ರೂ. ವೆಚ್ಚದಲ್ಲಿ ಇನ್ನೊಂದು ಹೊಸ ವಿದ್ಯುತ್‌ ಚಿತಾಗಾರವನ್ನು ನಿರ್ಮಿಸಲಾಗುವುದು. ಇದಕ್ಕೆ ಪ್ರತ್ಯೇಕ ಕಟ್ಟಡವೂ ನಿರ್ಮಾಣವಾಗಬೇಕಿರುವುದರಿಂದ ಈ ಯೋಜನೆ ಪೂರ್ಣಗೊಳ್ಳಲು ಹೆಚ್ಚು ಕಾಲಾವಧಿಬೇಕಾಗುತ್ತದೆ.
– ದಿವಾಕರ್‌ ಪಾಂಡೇಶ್ವರ, ಮೇಯರ್‌, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next