Advertisement

ಶೇ.25ರಷ್ಟು ಕಂಪ್ಯೂಟರ್‌ ಸೈನ್ಸ್‌ ಸೀಟು ಹೆಚ್ಚಳ; ಸಚಿವ ಅಶ್ವತ್ಥನಾರಾಯಣ

09:08 PM Oct 07, 2022 | Team Udayavani |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಲ್ಲಿ ವರ್ಷದಿಂದ ವರ್ಷಕ್ಕೆ ಟ್ರೆಂಡ್‌ ಬದಲಾಗುತ್ತಿದ್ದು, ಅದರಂತೆ ಶಿಕ್ಷಣ ಇಲಾಖೆ ಕೂಡ ತನ್ನ ಟ್ರೆಂಡ್‌ ಬದಲಿಸುತ್ತಿದೆ. ಈ ಬಾರಿ ಎಂಜಿನಿಯರಿಂಗ್‌ನಲ್ಲಿ ಹೆಚ್ಚು ಬೇಡಿಕೆ ಇರುವ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗಳಿಗೆ ಶೇ.25ರಷ್ಟು ಸೀಟುಗಳನ್ನು ಹೆಚ್ಚಳ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

Advertisement

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಮೂಲಕ ಭರ್ತಿ ಮಾಡುವ ಸರ್ಕಾರಿ ಕಾಲೇಜುಗಳಲ್ಲಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಶೇ.40ರಷ್ಟು ಸಿಇಟಿ ಕೋಟಾ ಸೀಟುಗಳಿಗೆ ಹೆಚ್ಚುವರಿ ಸೀಟುಗಳು ಲಭ್ಯವಾಗಲಿವೆ. ಕೆಇಎನಲ್ಲಿ 2021-22ರಲ್ಲಿ ಒಟ್ಟಾರೆ 21,804 ಸೀಟುಗಳು ಲಭ್ಯವಾಗಿದ್ದವು. ಈ ಬಾರಿ ಅದನ್ನು 27,193ಕ್ಕೆ ಹೆಚ್ಚಳ ಮಾಡಿದೆ. ಅಂದರೆ ಶೇ.25ರಷ್ಟು ಸೀಟುಗಳು ಹೆಚ್ಚಳವಾದಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಿವಿಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಮೆಕಾನಿಕಲ್‌ ಕೋರ್ಸ್‌ಗಳಿಗೆ ಹೋಲಿಸಿಕೊಂಡರೆ ಕಂಪ್ಯೂಟರ್‌ ಸೈನ್ಸ್‌ಗೆ ಕೋರ್ಸ್‌ಗೆ ಎಲ್ಲ ಕಡೆ ತುಂಬಾ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕೋಟಾ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್‌ ಸೈನ್ಸ್‌ ಹಾಗೂ ಈ ಕೋರ್ಸ್‌ಗೆ ಸಂಬಂಧಿಸಿದ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

4 ಹೊಸ ಕಾಲೇಜುಗಳು:
ಇನ್ನು ಕಳೆದ ವರ್ಷ ರಾಜ್ಯಾದ್ಯಂತ ಒಟ್ಟಾರೆ 18 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿದ್ದವು. ಈ ಬಾರಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಮೈಸೂರು ಮತ್ತು ಕಲಬುರಗಿ ಪ್ರಾದೇಶಿಕ ಕೇಂದ್ರಗಳು, ಬೀದರ್‌ ಮತ್ತು ನರಗುಂದ ಸೇರಿ 4 ಕಡೆ ಕಾಲೇಜುಗಳನ್ನು ಆರಂಭಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಳೆದ ವರ್ಷ 4,841 ಸೀಟುಗಳು ಲಭ್ಯವಾಗಿದ್ದವು. ಈ ಬಾರಿ ಅವುಗಳ ಸಂಖ್ಯೆಯನ್ನು 5,397ಕ್ಕೆ ಹೆಚ್ಚಳ ಮಾಡಲಾಗಿದೆ.

908 ಸೀಟು ಹೆಚ್ಚಳ:
ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಅಲ್ಪಸಂಖ್ಯಾತ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಸೀಟುಗಳ ಸಂಪೂರ್ಣ ಮಾಹಿತಿ (ಸೀಟ್‌ ಮ್ಯಾಟ್ರಿಕ್ಸ್‌)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಶುಕ್ರವಾರ ಬಿಡುಗಡೆ ಮಾಡಿದೆ. ಆ ಪ್ರಕಾರ ಕಳೆದ ವರ್ಷ 56,947 ಸರ್ಕಾರಿ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಾಗಿದ್ದವು. ಈ ಬಾರಿ ಅವುಗಳನ್ನು 57,855ಕ್ಕೆ ಹೆಚ್ಚಳ ಮಾಡಿದೆ. ಕಳೆದ ವರ್ಷಕ್ಕಿಂತ 908 ಸೀಟುಗಳು ಹೆಚ್ಚಳವಾಗಿವೆ ಎಂದು ತಿಳಿಸಿದ್ದಾರೆ.

Advertisement

ಮುಂದಿನ ವರ್ಷದಿಂದ ಶೇ.75 ಮಾತ್ರ ಯುವಿಸಿಇ ಸೀಟು
ಯವಿಸಿಇ ಅನ್ನು ರಾಜ್ಯ ಸರ್ಕಾರವು ಐಐಟಿ ಮಾದರಿಯಲ್ಲಿ ಉನ್ನತೀಕರಿಸಿದೆ. ರಾಜ್ಯದ ಮೊದಲ ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ. ಹೀಗಾಗಿ, ಇಲ್ಲಿ ಸೀಟುಗಳ ಹಂಚಿಕೆಯಲ್ಲಿಯೂ ಹೊಸ ನಿಯಮಗಳು ಅನ್ವಯವಾಗಲಿವೆ. ಮುಂದಿನ ವರ್ಷದಿಂದ (2023-24) ಶೇ.75ರಷ್ಟು ಸೀಟುಗಳು ಕೆಇಎ ಮೂಲಕ ಹಾಗೂ ಉಳಿದ ಶೇ.25ರಷ್ಟು ಸೀಟುಗಳನ್ನು ಅಖೀಲ ಭಾರತ ಮಟ್ಟದಲ್ಲಿ ಐಐಟಿ ಸೀಟುಗಳಾಗಿ ಭರ್ತಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ವರ್ಷ ಯುವಿಸಿಇ ನಲ್ಲಿ ಲಭ್ಯವಿರುವ 703 ಸೀಟುಗಳು ಕೂಡ ಕೆಇಎ ಮೂಲಕವೇ ಭರ್ತಿ ಮಾಡಲಾಗುತ್ತದೆ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳ ಆತಂಕ ದೂರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next