Advertisement

ಹುತಾತ್ಮ ಕುಟುಂಬಕ್ಕೆ ಪರಿಹಾರ ಮೊತ್ತ ಏರಿಕೆ

11:04 PM Sep 11, 2019 | Lakshmi GovindaRaju |

ಬೆಂಗಳೂರು: “ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಅಥವಾ ಕಾವಲುಗಾರ, ಉಪವಲಯ ಅರಣ್ಯಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು ಮರಣ ಹೊಂದಿದರೆ ಸರ್ಕಾರದಿಂದ ಅವರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು 20 ಲಕ್ಷ ರೂ.ಗಳಿಂದ 30ಲಕ್ಷ ರೂ.ಗೆ ಏರಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ನಗರದ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಹೂಗುಚ್ಛ ನಮನ ಸಲ್ಲಿಸಿ ಅವರು ಮಾತನಾಡಿದರು.

Advertisement

“ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿ ಕರ್ತವ್ಯದ ವೇಳೆ ಮರಣ ಹೊಂದಿದರೆ ಅವರ ಕುಟುಂಬಕ್ಕೆ 30 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿ ಕರ್ತವ್ಯದ ವೇಳೆ ಮರಣ ಹೊಂದಿದರೆ ಅವರ ಕುಟುಂಬಕ್ಕೆ 20 ಲಕ್ಷ ರೂ.ಬದಲಿಗೆ 30 ಲಕ್ಷ ರೂ. ಪರಿಹಾರ ನೀಡುವ ಸಂಬಂಧ ಬುಧವಾರವೇ ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸುತ್ತೇನೆ. ಶೀಘ್ರವೇ ಆದೇಶ ಹೊರಡಿಸಲು ಕ್ರಮ ತೆಗೆದುಕೊಳ್ಳಲಿದ್ದೇನೆ’ ಎಂದು ಹೇಳಿದರು.

ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರ ಸಮಸ್ಯೆಯನ್ನು ಪರಿಹರಿಸುವ ಸಂಬಂಧ ಪರಿಶೀಲನೆ ನಡೆಸಲಾಗುತ್ತದೆ. ಕರ್ತವ್ಯದಲ್ಲಿದ್ದಾಗ ಮರಣ ಹೊಂದಿರುವ ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಅಥವಾ ಕಾವಲುಗಾರ, ಉಪವಲಯ ಅರಣ್ಯಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾರ್ಥಿ ವೇತನದ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಕ್ರಮ: ರಾಜ್ಯದಲ್ಲಿ 43,38,276 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.23.62ರಷ್ಟು ಅರಣ್ಯ ಭೂಮಿ ಇರುವುದು ಸಮಾಧಾನಕರ ವಿಷಯ. ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಪ್ಪಿಸುವುದೇ ದೊಡ್ಡ ಸವಾಲಾಗಿದೆ. ಮಾನವ ಮತ್ತು ಆನೆ ನಡುವಿನ ಸಂಘರ್ಷ ತಪ್ಪಿಸಲು ಹಲವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಹಸಿರು ಪರಿಸರವನ್ನು ಉಳಿಸಿ, ಬೆಳೆಸುವುದರ ಜತೆಗೆ ನಮ್ಮ ಮುಂದಿನ ಪೀಳಿಗೆಗೂ ಅದನ್ನು ಕೊಡುಗೆಯಾಗಿ ನೀಡುವಂತೆ ನಾವೆಲ್ಲರೂ ಕಾಡುಗಳ ಸಂರಕ್ಷಣೆ ಮಾಡಬೇಕು. ಕಾಡಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಹಾಗೂ ಕಳ್ಳ ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಆಧುನಿಕ ಪರಿಕರಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇಲಾಖೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಲು ಸಿಬ್ಬಂದಿ ನೇಮಕ ಪ್ರಕ್ರಿಯೆಯನ್ನು ನಡೆಸಲಿದ್ದೇವೆ ಎಂದು ಹೇಳಿದರು.

Advertisement

ವಿವಿಧ ಪ್ರಕರಣಗಳಲ್ಲಿ ಹುತಾತ್ಮರಾದ ರಾಜ್ಯದ 47 ಅಧಿಕಾರಿ, ಸಿಬ್ಬಂದಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್‌ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್‌ ಮೊದಲಾದವರು ಉಪಸ್ಥಿತರಿದ್ದರು.

ವೇದಿಕೆಯ ಕಂಬ ಹಿಡಿದು ನಿಂತ ಪೊಲೀಸರು!: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮಕ್ಕಾಗಿ ಮಲ್ಲೇಶ್ವರದ ಅರಣ್ಯ ಭವನದ ಎದುರಿನಲ್ಲಿ ಶಾಮಿಯಾನ ಹಾಕಿ ವೇದಿಕೆ ನಿರ್ಮಿಸಲಾಗಿತ್ತು. ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಗಮಿಸಿದರು. ಹುತಾತ್ಮರಿಗೆ ನಮನ ಸಲ್ಲಿಸಿ, ವೇದಿಕೆಗೆ ಮುಖ್ಯಮಂತ್ರಿಗಳು ವಾಪಸ್ಸಾಗುತ್ತಿದ್ದಂತೆ ಜೋರಾಗಿ ಗಾಳಿ ಬೀಸಲಾರಂಭಿಸಿತು.

ವೇದಿಕೆಗೆ ಸೂಕ್ತವಾದ ಅಡಿಪಾಯ ಇಲ್ಲದೇ ಇರುವುದರಿಂದ ಹಿಂಭಾಗದಿಂದ ಬೀಸುತ್ತಿದ್ದ ಗಾಳಿಗೆ ವೇದಿಕೆ ಒಂದೇ ಸಮನೆ ವಾಲುತಿತ್ತು. ವೇದಿಕೆಯ ಒಳಭಾಗದಲ್ಲಿ ಮುಖ್ಯಮಂತ್ರಿ ಸಹಿತ ಹಿರಿಯ ಅಧಿಕಾರಿಗಳು ಇರುವುದರಿಂದ ತಕ್ಷಣವೇ ಪೊಲೀಸ್‌ ಸಿಬ್ಬಂದಿ ವೇದಿಕೆಯ ಹಿಂಭಾಗಕ್ಕೆ ಬಂದು ಎರಡು ಕಬ್ಬಿಣದ ಕಂಬವನ್ನು ಕಾರ್ಯಕ್ರಮ ಮುಗಿಯುವವರೆಗೂ ಬಿಗಿಯಾಗಿ ಹಿಡಿದು ನಿಂತಿದ್ದರು. ಅಧಿಕಾರಿಗಳು ಇದನ್ನು ಗಮನಿಸದೆ ಇದ್ದಿದ್ದರೆ ಮುಖ್ಯಮಂತ್ರಿಗಳು ಇದ್ದ ವೇದಿಕೆಯಲ್ಲಿ ದೊಡ್ಡ ಅವಘಡವೇ ನಡೆದು ಹೋಗುತ್ತಿತ್ತು.

ಮರಳು ಮಾಫಿಯಾಗೆ ಕಡಿವಾಣ ಹಾಕಿ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಮರಳು ಮಾಫಿಯಾ ದೊಡ್ಡ ಪ್ರಮಾಣದಲ್ಲಿದ್ದು, ಮುಲಾಜಿಲ್ಲದೆ ಇದರ ವಿರುದ್ಧ ಕ್ರಮ ಕೈಗೊಂಡು ಸಾಮಾನ್ಯ ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲಿ ಮರಳಿನ ಜ್ವಲಂತ ಸಮಸ್ಯೆ ಇದೆ. ಮರಳು ಮಾಫಿಯಾ ದೊಡ್ಡ ಪ್ರಮಾಣದಲ್ಲಿದ್ದು, ಅದಕ್ಕೆ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಬೆಂಬಲ ನೀಡುತ್ತಿರು ವುದರಿಂದ ಸಾಮಾನ್ಯರಿಗೆ ಸರಿಯಾದ ರೀತಿಯಲ್ಲಿ ಮರಳು ಸಿಗದಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಂಡು ಕಡಿಮೆ ಬೆಲೆಗೆ ಮರಳು ಸಿಗುವಂತಹ ಸ್ಥಿತಿ ನಿರ್ಮಾಣ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಇದು ದೊಡ್ಡ ದಂಧೆಯಾಗಿದ್ದು, ಹಲವು ವರ್ಷಗಳಿಂದ ನಡೆದು ಬಂದಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ 15 ದಿನದ ಹಿಂದೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದೀಗ ಮತ್ತೂಮ್ಮೆ ಸ್ಪಷ್ಟ ಸೂಚನೆ ನೀಡಲಾಗಿದ್ದು, ಸುಲಭವಾಗಿ ಕಡಿಮೆ ಬೆಲೆಗೆ ಮರಳು ದೊರೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ ಎಂದು ಹೇಳಿದರು.

ಮಲೇಷ್ಯಾ ಮರಳಿನ ಅಗತ್ಯವಿಲ್ಲ. ನಮ್ಮಲ್ಲೇ ಸಾಕಷ್ಟು ಮರಳಿನ ಲಭ್ಯತೆ ಇದೆ. ಹಿಂದೆ ಅನಗತ್ಯವಾಗಿ ಮಲೇಷ್ಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿತ್ತು. ಆ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ. ಇಲ್ಲಿರುವ ಮರಳನ್ನೇ ಸದುಪಯೋಗಪಡಿಸಿಕೊಂಡು, ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next