ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತಾಗಬೇಕು ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ವರ್ಗಾವಣೆ ವಿಭಾಗದ ಸದಸ್ಯ ಕಾರ್ಯದರ್ಶಿ ರವೀಂದ್ರ ಗೌರ್ ಆಶಿಸಿದ್ದಾರೆ.
ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಮುಕ್ತಾಯಗೊಂಡ 41ನೇ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಯೋಜನೆಗಳ ಪ್ರದರ್ಶನ ಮತ್ತು ಸೆಮಿನಾರ್‌ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಂತರಿಕ ಉತ್ಪನ್ನದ ಶೇ.0.8ರಷ್ಟು ಅನುದಾನ ಮಾತ್ರ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ. ಇಸ್ರೇಲ್‌ನಲ್ಲಿ ಶೇ. 4ರಷ್ಟು ಅನುದಾನ ನೀಡಲಾಗುತ್ತದೆ. ಇಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತಾಗಬೇಕು ಎಂದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಡಾ| ಎಚ್. ಹೊನ್ನೇಗೌಡ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲೇ ಪ್ರಾಜೆಕ್ಟ್, ಸಂಶೋಧನೆಗೆ ಹೆಚ್ಚಿನ ಗಮನ ನೀಡಬೇಕು. ಇಂಜಿನಿಯರಿಂಗ್ ಪೂರೈಸಿದ ನಂತರ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅನುಕೂಲ ಆಗುತ್ತದೆ. ಸಿಲಿಕಾನ್ ವ್ಯಾಲಿ…ಎಂದೇ ಗುರುತಿಸಲ್ಪಡುವ ಬೆಂಗಳೂರಿನ 3,500 ಐಟಿ, 750 ಎಂಎನ್‌ಸಿಗಳ ಮೂಲಕ 2.2 ಲಕ್ಷ ಕೋಟಿ ಗಳಿಕೆ ಆಗುತ್ತಿದೆ. 10 ಲಕ್ಷ ಜನರು ನೇರವಾಗಿ ಉದ್ಯೋಗ, 30 ಲಕ್ಷ ಜನರು ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿಸಿದರು. ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಮಾತನಾಡಿ, ಈಚೆಗೆ ಹಲವಾರು ಕಾರಣದಿಂದ ಇಂಜಿನಿಯರಿಂಗ್ ಕೋರ್ಸ್‌ಗೆ ಸೇರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆ ಕಾರಣಕ್ಕಾಗಿ ಅನೇಕ ಕಾಲೇಜಿನಲ್ಲಿ ಸೀಟು ಖಾಲಿ ಉಳಿಯುತ್ತಿವೆ ಎಂದು ತಿಳಿಸಿದರು. ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿ ಎ.ಸಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಎಸ್. ಸುಬ್ರಹ್ಮಣಿಯನ್, ಪ್ರಾಚಾರ್ಯ ಡಾ|ಸುಬ್ರಹ್ಮಣ್ಯಸ್ವಾಮಿ, ಕೆ.ಎನ್. ವೆಂಕಟೇಶ್, ಎಸ್.ಎನ್. ಸಂಡೂರ್, ಡಾ|ಬಿ.ಇ. ರಂಗಸ್ವಾಮಿ, ಡಾ|ಕೆ. ಮುರುಗೇಶಬಾಬು, ಡಾ| ಶ್ರೀಕಂಠೇಶ್ವರಸ್ವಾಮಿ ಇತರರು ಇದ್ದರು. ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. 286 ಪ್ರಾಜೆಕ್ಟ್ ಪ್ರದರ್ಶಿಸಲ್ಪಟ್ಟವು. 98 ಪ್ರಬಂಧ ಮಂಡಿಸಲಾಯಿತು. 630 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.