Advertisement

ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ

05:59 AM Feb 03, 2019 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು.

Advertisement

ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಯೋಜನೆಗಳ ಜಿಲ್ಲಾಮಟ್ಟದ ಸಮನ್ವಯ ಸಭೆ ಹಾಗೂ ಮಕ್ಕಳ ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಡೆಹಿಡಿಯಲಾದ ಎಲ್ಲಾ ಬಾಲ್ಯ ವಿವಾಹ ಪ್ರಕರಣಗಳ ಎಫ್‌ಐಆರ್‌ ಆಗಬೇಕು. ಬಾಲ್ಯವಿವಾಹ ನಿಷೇಧ ಕುರಿತು ಸಾಮೂಹಿಕ ವಿವಾಹ ಆಯೋಜಕರಿಗೆ, ಪೂಜಾರಿಗಳಿಗೆ, ಸಾರ್ವಜನಿಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಬಾಲ್ಯವಿವಾಹ ಹೆಚ್ಚಾಗಿ ನಡೆಯುವ ಸಮುದಾಯಗಳು, ಇತರೆ ಸ್ಥಳಗಳಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಜಿಲ್ಲೆಯಲ್ಲಿ 64 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದ್ದು, 51 ವಿವಾಹಗಳನ್ನು ತಡೆಯಲಾಗಿದೆ. 2 ಬಾಲ್ಯ ವಿವಾಹ ನಡೆದಿದ್ದು, ಇದರಲ್ಲಿ 1 ಪ್ರಕರಣಕ್ಕೆ ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ 51 ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ. ಈ ಪೈಕಿ 19 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ, 2 ಮಕ್ಕಳು ಸಂಸ್ಥೆಯ ಆಶ್ರಯದಲ್ಲಿ ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್‌ಕುಮಾರ್‌ ಮಾಹಿತಿ ನೀಡಿದರು.

ಮಹಿಳಾ ವಿಶೇಷ ಚಿಕಿತ್ಸಾ ಘಟಕದಡಿ ಲೈಂಗಿಕ ಅಪರಾಧ, ಅಪಹರಣ, ಇತರೆ ಒಟ್ಟು 42 ಪ್ರಕರಣ ದಾಖಲಾಗಿದ್ದು ಸಂತ್ರಸ್ತರಿಗೆ ವೈದ್ಯಕೀಯ, ಕಾನೂನು ಮತ್ತು ಪೊಲೀಸ್‌ ಇಲಾಖೆ ನೆರವು ನೀಡಲಾಗಿದೆ ಎಂದರು.

Advertisement

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಮಹಿಳಾ ವಿಶೇಷ ಘಟಕದಡಿ ಸಖೀ ಎಂಬ ವಿನೂತನ ಯೋಜನೆ ವಿಲೀನಗೊಂಡು ಈ ಯೋಜನೆಯಡಿ ಒಂದೇ ಸೂರಿನಡಿ ಎಎಸ್‌ಐ, ವಕೀಲರು, ವೈದ್ಯರು ದೊರಕುವಂತೆ ವ್ಯವಸ್ಥೆ ಮಾಡಲಾಗುವುದು. ಈ ಯೋಜನೆ ಮೊದಲನೇ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಜಾರಿಗೊಂಡಿದ್ದು, ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳ್ಳಲಿದೆ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣಗಳನ್ನು ಪ್ರತ್ಯೇಕ ನ್ಯಾಯಾಲಯದಲ್ಲಿ ವಿಚಾರಣೆ ಮಾಡುವ ಯೋಜನೆ 10 ಜಿಲ್ಲೆಯಲ್ಲಿ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜಾಗೃತ ಮಹಿಳಾ ಸಂಘ ಮತ್ತು ಶುಭೋದಯ ಸ್ವಯಂ ಸೇವಾ ಸಂಸ್ಥೆಗಳಿಗೆ ಸ್ವಾಧಾರ ಸಂಸ್ಥೆ ನಡೆಸಲು ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಲಾಗುತ್ತಿದೆ. ಪ್ರಸ್ತುತ ಜಾಗೃತಿ ಸಂಸ್ಥೆಯಲ್ಲಿ 23 ಮಹಿಳೆಯರು, 11 ಮಕ್ಕಳು ಹಾಗೂ ಶುಭೋದಯ ಸಂಸ್ಥೆಯಲ್ಲಿ 25 ಮಹಿಳೆಯರು, 7 ಮಕ್ಕಳಿದ್ದು, ಇವರಿಗೆ ಟೈಲರಿಂಗ್‌, ಬ್ಯಾಗ್‌ ತಯಾರಿಕೆ, ಊದುಬತ್ತಿ, ಎಂಬ್ರಾಯಿಡರಿ, ವಿವಿಧ ಆಹಾರ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಮಕ್ಕಳ ಸಹಾಯವಾಣಿ 1098 ನ ಸಂಯೋಜಕ ಕೊಟ್ರೇಶ್‌ ಮಾತನಾಡಿ, 1098 ಮಕ್ಕಳ ಸಹಾಯವಾಣಿ ಮೂಲಕ 2018ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 3118 ಕರೆಗಳನ್ನು ಸ್ವೀಕರಿಸಿ ಕ್ರಮ ಜರುಗಿಸಲಾಗಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸಿಜೆಎಂ. ಸಾಬಪ್ಪ, ಎಎಸ್ಪಿ ಟಿ.ಜೆ. ಉದೇಶ್‌ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಿಡಿಪಿಓ, ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next