ಕಲಬುರಗಿ: ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮೇ 6 ಕೊನೆ ದಿನವಾಗಿದೆ ಎಂದು ಸಿಯುಕೆ ಕುಲಪತಿ ಪ್ರೊ| ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆಯಲ್ಲಿ ರಾಜ್ಯದವರ ಪ್ರವೇಶಾತಿ ಕಡಿಮೆಯಾಗುತ್ತಿದೆ. ಹೀಗಾಗಿ ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾತಿ ಪಡೆಯುವಂತಾಗಲು ಸಿಇಟಿ ಪರೀಕ್ಷೆ ಕುಳಿತುಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವವಿದ್ಯಾಲಯವು ಸಿಯುಇಟಿ(ಯುಜಿ) ಒಕ್ಕೂಟಕ್ಕೆ ಸೇರಿದ್ದು, ಪಿಯುಸಿ ತರಗತಿಯಲ್ಲಿ ಉತ್ತೀರ್ಣರಾದ ಅಥವಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿ ಪದವಿ ಕೋರ್ಸ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಬಿಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ), ಬಿಎಸ್ಸಿ (ಜೀವ ವಿಜ್ಞಾನ ಮತ್ತು ಭೂವಿಜ್ಞಾನ), ಬಿಎಸ್ಸಿ(ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ), ಬಿಎಸ್ಸಿ-ಬಿಎ (ಮನೋವಿಜ್ಞಾನ ಮತ್ತು ಇಂಗ್ಲಿಷ್),ಬಿಎಸ್ಸಿ-ಬಿ.ಎ(ಭೂಗೋಳ-ಇತಿಹಾಸ), ಬಿ.ಎ (ಅರ್ಥಶಾಸ-ಸಮಾಜಕಾರ್ಯ), ಬಿ.ಟೆಕ್ (ಎಲೆಕ್ಟ್ರಾನಿಕ್ಸ್-ಕಮ್ಯುನಿಕೇಷನ್), ಬಿ-ಟೆಕ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್), ಬಿಬಿಎ ಕೋರ್ಸ್ ಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿದೆ. ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಪಡೆದು ಮಾಹಿತಿ ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಬೇಸಿಗೆಯಲ್ಲಿ ವಿಶೇಷ ತರಗತಿಗಳು, ಕೌಶಲ್ಯ ಆಧಾರಿತ ತರಬೇತಿ, ಉದ್ಯೋಗಾವಕಾಶಗಳ ಬಗ್ಗೆ ಬೋಧಿಸಲಾಗುತ್ತಿದ್ದು, ಇನ್ನು ಕೋರ್ಸ್ ಪೂರ್ಣಗೊಳಿಸುವ ಇಂಟರರ್ನ್ಶಿಪ್‌ಗೆ ಆರು ಅಂಕ ಕ್ರೆಡಿಟ್ ನೀಡಲಾಗುತ್ತದೆ. ಸಿಯುಕೆನಲ್ಲಿ 9 ವಿಷಯಗಳ ಸಂಯೋಜನೆ ಹಾಗೂ 15 ವಿಷಯಗಳಾಧರಿತ ಕೋರ್ಸ್‌ಗಳಿವೆ ಎಂದರು.
ಪ್ರವೇಶಾತಿಯ ಸಿಐಟಿ ಪರೀಕ್ಷೆಯ ತದನಂತರ ದಿನಾಂಕ ತಿಳಿಸಲಾಗುವುದು. ಕಳೆದ ವರ್ಷ ರಾಜ್ಯದ 8 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯುದಿತ್ತು. ಈ ವರ್ಷ ಸಿಇಟಿ ದಿನಾಂಕ ಹಾಗೂ ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ| ಆರ್. ಎಂ.ಚನ್ನವೀರ, ಸಹಾಯಕ ಪರೀಕ್ಷಾನಿಯಂತ್ರಣಾಧಿಕಾರಿ ಡಾ| ಭರತಕುಮಾರ, ಅಡ್ಮೀಷನ್ ಕಮಿಟಿ ಅಧ್ಯಕ್ಷ ಡಾ| ಹನುಮೇಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ದೀಪ್ತಿ ಇದ್ದರು.