Advertisement

ಮೂಲ ಸೌಕರ್ಯ ಸಿಕ್ಕರೆ ಸರಕಾರಿ ಶಾಲೆಗಳಲ್ಲಿ ಪ್ರವೇಶ ಹೆಚ್ಚಳ: ಶೆಟ್ಟರ

03:41 PM Jun 01, 2017 | Team Udayavani |

ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ  ಮೂಲ ಸೌಲಭ್ಯಗಳನ್ನು ಸರಕಾರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲೂ ಕಲ್ಪಿಸಿದರೆ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚುತ್ತದೆ. ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಸರಕಾರ ಮುಂದಾಗಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. 

Advertisement

ಇಲ್ಲಿನ ದುರ್ಗದ ಬಯಲು ಗವಳಿ ಗಲ್ಲಿಯ ಶೇಜವಾಡಕರ ಮತ್ತು ಗಾಯಕವಾಡ ಕಟ್ಟಡ ಬಳಿ ಬುಧವಾರ ಸ್ಥಳೀಯ ದೈವಜ್ಞ ಬ್ರಾಹ್ಮಣ ಸಂಘ ಸಹಕಾರದೊಂದಿಗೆ ಉಚಿತ ಹೊಲಿಗೆ ಯಂತ್ರ ಮತ್ತು ನೋಟ್‌ಬುಕ್‌, ಕಂಪಾಸ್‌ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಎಲ್ಲ ಸಮಾಜದಲ್ಲೂ ಬಡವರು, ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರಿಗೆ ಶಿಕ್ಷಣ ಹಕ್ಕು (ಆರ್‌ಟಿಇ) ಉಪಯುಕ್ತವಾಗಿದೆ. ಈ ಕಾಯ್ದೆಯಿಂದಾಗಿ ಎಲ್ಲ ಸಮಾಜದ ಹಿಂದುಳಿದ, ಬಡ ವಿದ್ಯಾರ್ಥಿಗಳು ಆದಾಯ ತರುವಂತಹ ಖಾಸಗಿ ಶಿಕ್ಷಣ ಸಂಸ್ಥೆ ಗಳಲ್ಲೂ ಪ್ರವೇಶ ಪಡೆಯುವಂತಾಗಿದೆ.

ಆ ಮೂಲಕ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಆರ್‌ಟಿಇಯಿಂದಾಗಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪ್ರವೇಶಾತಿ ಕಡಿಮೆಯಾಗಿದೆ. ಆದ್ದರಿಂದ ಸರಕಾರವು ಸರಕಾರಿ ಶಾಲೆಗಳ ಪುನಃಶ್ಚೇತನಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವಂತಹ ಮೂಲ ಸೌಕರ್ಯ ಒದಗಿಸಬೇಕು.

ಸರಕಾರಿ ಶಾಲೆಗಳು ಶಿಕ್ಷಣ ಕೇಂದ್ರಗಳಾಗಿ ಹೊರಹೊಮ್ಮುವಂತೆ ಮಾಡಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಬಹಳಷ್ಟು ಜನರು ತಮ್ಮ ಮದುವೆ ವಾರ್ಷಿಕೋತ್ಸವ, ಸಮಾರಂಭ ಸೇರಿದಂತೆ ಇನ್ನಿತರೆ ವೈಯಕ್ತಿಕ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡುತ್ತಾರೆ.

Advertisement

ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಬೆಲೆಬಾಳುವ ಉಡುಗೊರೆ ನೀಡುವ ಮೂಲಕ ದುಂದುವೆಚ್ಚ ಮಾಡುತ್ತಾರೆ. ಆದರೆ ಬಡವರಿಗಾಗಿ ಹಾಗೂ ಇನ್ನಿತರೆ ಸಮಾಜಮುಖೀ ಕಾರ್ಯಗಳಿಗೆ ಹಣ ಕೊಡಲು, ವೆಚ್ಚ ಮಾಡಲು ಹಿಂದೇಟು ಹಾಕುತ್ತಿರುವುದು ಖೇದಕರ ಸಂಗತಿ ಎಂದರು. 

ನಮ್ಮ ಸಂಸ್ಥೆ ಹಾಗೂ ವಿವಿಧ ಕಂಪನಿಗಳ ಸಹಕಾರದೊಂದಿಗೆ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ 9 ಕ್ಲಾಸ್‌ಗಳನ್ನು ಸ್ಮಾರ್ಟ್‌ ಕ್ಲಾಸ್‌ಗಳನ್ನಾಗಿ ನಿರ್ಮಿಸಲಾಗಿದೆ. 36ಕ್ಕೂ ಅಧಿಕ ಶಾಲೆಗಳಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ. ಧಾರವಾಡ ತಾಲೂಕನಲ್ಲಿ ಸರಕಾರಿ ಶಾಲೆಗಳಿಗೆ 750 ಡೆಸ್ಕ್ ವಿತರಿಸಲಾಗಿದೆ. ಸಂಸ್ಥೆಯಿಂದ ಹು-ಧಾ ಕೇಂದ್ರ ಕ್ಷೇತ್ರದಲ್ಲಿ ಆರಂಭದಲ್ಲಿ ಸರಕಾರಿ ಶಾಲೆಗಳಿಗೆ 250 ಡೆಸ್ಕ್ ವಿತರಿಸಲಾಗುವುದು.

ಆಯ್ಕೆ ಮಾಡಿದಂತಹ ಸರಕಾರಿ ಶಾಲೆಗಳಲ್ಲಿ ಸ್ಮಾಟ್‌ ಕ್ಲಾಸ್‌ ಮಾಡಲಾಗುವುದು ಎಂದರು. ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಮಹಾಪೌರ ಡಿ.ಕೆ. ಚವ್ಹಾಣ, ಬಿಜೆಪಿ ಮುಖಂಡ ಮಹೇಶ ಟೆಂಗಿನಕಾಯಿ ಮೊದಲಾದವರು ಮಾತನಾಡಿದರು. ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಸಂದೀಪ ಅಣವೇಕರ ಅಧ್ಯಕ್ಷತೆ ವಹಿಸಿದ್ದರು.

ಪಾಲಿಕೆ ಸದಸ್ಯರಾದ ಸುಧೀರ ಸರಾಫ, ಶಿವು ಮೆಣಸಿನಕಾಯಿ, ದೈವಜ್ಞ ಮಹಿಳಾ ಮಂಡಳದ ಅಧ್ಯಕ್ಷೆ ಯಶೋಧಾ ರೇವಣಕರ ಮೊದಲಾದವರಿದ್ದರು. ಸದಾನಂದ ಶೇಜವಾಡಕರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಹಾಗೂ ಲೇಖನಿ ಸಾಮಗ್ರಿ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಚಂದ್ರಕಾಂತ ವೇರ್ಣೇಕರ ಸ್ವಾಗತಿಸಿದರು. ದೀಪಕ ಮೆಹರವಾಡೆ ನಿರೂಪಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next