Advertisement

ಚರಂಡಿ ಕಾಮಗಾರಿ ಸ್ಥಗಿತ: ಸ್ಲ್ಯಾಬ್‌ ಗಳು ಅಪಾಯಕಾರಿ ಸ್ಥಿತಿಯಲ್ಲಿ

02:00 AM Jul 26, 2018 | Karthik A |

ಈಶ್ವರಮಂಗಲ: ನೆಟ್ಟಣಿಗೆ ಮುಟ್ನೂರು ಗ್ರಾಮದ ಈಶ್ವರಮಂಗಲ ಪೇಟೆ ಬೆಳೆಯುತ್ತಿದೆ. ಆದರೆ, ಪೇಟೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ರಸ್ತೆ ಬದಿ ಮಣ್ಣು ತುಂಬಿಸಿರುವುದರಿಂದ ಕೆಸರುಮಯವಾಗಿದೆ. ಕೆಲವು ದಿನಗಳ ಹಿಂದಷ್ಟೇ ಯಂತ್ರದ ಮೂಲಕ ಚರಂಡಿಯ ಹೂಳೆತ್ತುವ ಕಾಮಗಾರಿ ಆರಂಭಿಸಿ ಅರ್ಧದಲ್ಲೇ ನಿಲ್ಲಿಸಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ಈಶ್ವರಮಂಗಲದಲ್ಲಿರುವ ಪೊಲೀಸ್‌ ಚೆಕ್‌ ಪೋಸ್ಟ್‌ನಿಂದ ವಿಜಯ ಬ್ಯಾಂಕ್‌ ವರೆಗೆ ಇರುವ ಚರಂಡಿ ಮೇಲಿರುವ ಸ್ಲ್ಯಾಬ್‌ ತೆಗೆಯುವ ಕೆಲಸ ಜೆಸಿಬಿ ಮೂಲಕ ನಡೆದಿತ್ತು. ಹನುಮಗಿರಿ ಕ್ಷೇತ್ರದ ದ್ವಾರದ ಸಮೀಪ ಮಳೆ ನೀರು ಮೋರಿ ಬದಲು ರಸ್ತೆಯ ಮೇಲೆ ಹರಿಯುತ್ತಿದೆ. ಉಳಿದ ಕಡೆಗಳಲ್ಲಿ ತೆಗೆದಿರುವ ಸ್ಲ್ಯಾಬ್‌ ಗಳನ್ನು ರಸ್ತೆ ಅಂಚಿನಲ್ಲಿ ಮತ್ತು ಚರಂಡಿ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಲಾಗಿದೆ. ಇದರಿಂದ ರಾತ್ರಿ ವೇಳೆ ದ್ವಿಚಕ್ರವಾಹನ ಗಳು, ಪಾದಚಾರಿಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಚರಂಡಿಯ ಮೇಲ್ಗಡೆಯೂ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಇಲಾಖೆ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಅರೆಬರೆಯಾಗಿದೆ. ಸಂಬಂಧ ಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement


ವರ್ತಕರಿಗೆ ನೋಟಿಸ್‌

ಲೋಕೋಪಯೋಗಿ ಇಲಾಖೆಯ ಕಾಮಗಾರಿ ವಿಳಂಬ ಮತ್ತು ವರ್ತಕರು ಚರಂಡಿಗೆ ತ್ಯಾಜ್ಯವನ್ನು ಸುರಿದು ಸಂಜೆ ಹೊತ್ತಿಗೆ ಬೆಂಕಿ ಹಚ್ಚುವ ಬಗ್ಗೆ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಮಳೆಗಾಲದ ಪೂರ್ವದಲ್ಲಿ ಮಾಡಬೇಕಾದ ಚರಂಡಿ ವ್ಯವಸ್ಥೆ ಮಾಡದೆ ಮಳೆಗಾಲದಲ್ಲಿ ಮಾಡಿ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಕೂಡಲೇ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚರಂಡಿಯಲ್ಲಿಯೇ ನೀರು ಹರಿಯುವಂತೆ ವ್ಯವಸ್ಥೆ ಮಾಡುವಂತೆ ನಿರ್ಣಯಿಸಲಾಯಿತು. ವರ್ತಕರು ಅರೆಬರೆ ಸುಟ್ಟ ತ್ಯಾಜ್ಯ ಚರಂಡಿಯಲ್ಲಿ ಬಾಕಿಯಾಗಿ ನೀರು ಸರಾಗವಾಗಿ ಸಾಧ್ಯವಾಗುತ್ತಿಲ್ಲ. ಇಂತಹ ವರ್ತಕರಿಗೆ ನೆಟ್ಟಣಿಗೆಮುಟ್ನೂರು ಗ್ರಾಮ ಪಂಚಾಯತ್‌ ನೋಟಿಸ್‌ ಜಾರಿಗೊಳಿಸುವ ಮತ್ತು ಗ್ರಾಮಸಭೆಯ ಮೊದಲು ವರ್ತಕ ಸಭೆಯನ್ನು ಕರೆಯುವ ಬಗ್ಗೆ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಪೇಟೆ ಹೃದಯ ಭಾಗದ ರಸ್ತೆಯಲ್ಲಿ ವಾಹನಗಳ ನಿಲುಗಡೆ.

ರಸ್ತೆಯಲ್ಲಿಯೇ ಬಸ್‌ ನಿಲುಗಡೆ, ಟ್ರಾಫಿಕ್‌ ಜಾಮ್‌!!!
ಈಶ್ವರಮಂಗಲ ಪೇಟೆಯಲ್ಲಿ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದು ಮತ್ತು ರಸ್ತೆಯ ಅಂಚಿನಲ್ಲಿರುವ ಚರಂಡಿಯ ಕಾಮಗಾರಿಯನ್ನು ಅಸಮರ್ಪಕವಾಗಿ ನಡೆಸುವುದರಿಂದ ಸರಕಾರಿ ಮತ್ತು ಖಾಸಗಿ ಬಸ್‌ ಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವ, ಹತ್ತಿಸುವುದರಿಂದ ಈಶ್ವರಮಂಗಲ ಪೇಟೆಯಲ್ಲಿ  ಟ್ರಾಫಿಕ್‌ ಜಾಮ್‌ ಆಗುತ್ತಿರುವುದು ಸಾಮಾನ್ಯವಾಗಿದೆ.ಇತರ ವಾಹನಗಳಿಗೆ ಅಪಘಾತವಾಗುವ ಸಂಭವ ಜಾಸ್ತಿಯಾಗಿದೆ.ಪ್ರಯಾಣಿಕರು ವಾಹನಗಳಿಂದ ಇಳಿಯುವಾಗ ಆಯ ತಪ್ಪಿದರೆ ಚರಂಡಿಗೆ ಬೀಳುವ ಮತ್ತು ರಸ್ತೆಯಲ್ಲಿಯೇ ಸಾರ್ವಜನಿಕರು ಸಂಚರಿಸುವುದರಿಂದ ಅನಾಹುತಗಳು ನಡೆಯುವ ಸಾಧ್ಯತೆಯೂ ಇದೆ.

ಮೋರಿಯಿಂದ ಸಮಸ್ಯೆ
ಚರಂಡಿಯ ಸ್ಲ್ಯಾಬ್‌ ಗಳನ್ನು ತೆರವುಗೊಳಿಸುವ ಕಾರ್ಯ ಮಾತ್ರ ಮಾಡಲಾಗಿದೆ. ಚರಂಡಿ ದುರಸ್ತಿಗೆ ಹೆಚ್ಚು ಅನುದಾನ ಬೇಕು. ಹನುಮಗಿರಿ ದ್ವಾರದ ಬಳಿ ಚಿಕ್ಕ ಮೋರಿ ಹಾಕಲಾಗಿದೆ. ಇದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮೋರಿಯಿಂದ ಸಮಸ್ಯೆಯಾಗಿದೆ. ಎಸ್ಟಿಮೇಟ್‌ ಮಾಡಿ ಅನುದಾನ ತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
– ಸಿಕ್ವೇರ, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಪುತ್ತೂರು

ಸರಕಾರಕ್ಕೆ ಪ್ರಸ್ತಾವನೆ
ಪೇಟೆಯಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದಿದ್ದರೆ ಜನರಿಗೆ, ವರ್ತಕರಿಗೆ ತೊಂದರೆಯಾಗುತ್ತದೆ. ಲೋಕೋಪಯೋಗಿ ಇಲಾಖೆ ಚರಂಡಿಗಳಿಗೆ ಹೆಚ್ಚು ಗಮನಹರಿಸಿ ದುರಸ್ತಿಗೊಳಿಸಬೇಕು. ಪೇಟೆಯ ಅಭಿವೃದ್ಧಿಗೆ ಚರಂಡಿ ವ್ಯವಸ್ಥೆಗೆ ಹೆಚ್ಚು ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚರಂಡಿ ದುರಸ್ತಿಗೊಳಿಸುವಂತೆ ಪಂಚಾಯತ್‌ ನಿರ್ಣಯ ಮಾಡಿದ್ದು, ಲೋಕೋಪಯೋಗಿ ಇಲಾಖೆಗೆ ಕಳಿಸಲಾಗುತ್ತದೆ.
– ಶ್ರೀರಾಮ್‌ ಪಕ್ಕಳ, ಉಪಾಧ್ಯಕ್ಷ, ನೆಟ್ಟಣಿಗೆಮುಟ್ನೂರು ಗ್ರಾ.ಪಂ.

Advertisement

— ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next