Advertisement

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗದೆ ಸಿಂದಗಿಯಲ್ಲಿ ಸೋಲು: ಸಿದ್ದರಾಮಯ್ಯ

03:05 PM Nov 02, 2021 | Team Udayavani |

ಬೆಂಗಳೂರು: ಸಿಂದಗಿಯಲ್ಲಿ ನಮ್ಮ‌ನಿರೀಕ್ಷೆ ಹುಸಿಯಾಗಿದೆ. ಅಲ್ಲಿ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಿದ್ದೆವು. ಆದರೆ ದೊಡ್ಡ ಅಂತರದಲ್ಲಿ‌ಸೋತಿದ್ದೇವೆ. ಆದರೆ ಕಳೆದ ಬಾರಿ ನಾವು ‌ಮೂರನೇ ಸ್ಥಾನದಲ್ಲಿದ್ದೆವು, ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಸೋಲನ್ನು ಒಪ್ಪಿಕೊಳ್ಳಬೇಕು. ನಮ್ಮ ಅಭ್ಯರ್ಥಿ ಅಶೋಕ್ ಮನಗೂಳಿ ಜೆಡಿಎಸ್ ನಿಂದ ಬಂದವರು. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. ಆದರೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆಯಾಗಿಲ್ಲ, ಅವರ ಜೊತೆ ಬಂದ ಜೆಡಿಎಸ್ ಕಾರ್ಯಕರ್ತರ ಜೊತೆ ಹೊಂದಾಣಿಕೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. 10 ರಿಂದ 13 ಸಾವಿರದಲ್ಲಿ‌ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ನಮ್ಮ ಅಭ್ಯರ್ಥಿ ಮಾನೆ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿತ್ತು ಎಂದರು.

ಹಾನಗಲ್ ನಲ್ಲಿ ಬೊಮ್ಮಾಯಿ ಒಂದು ವಾರ ಪ್ರಚಾರ ಮಾಡಿದ್ದರು. ಅವರದ್ದು ಶಿಗ್ಗಾಂವ್, ಅದರ ಪಕ್ಕದಲ್ಲಿ ಹಾನಗಲ್. ಅಧಿಕಾರ ದುರುಪಯೋಗ, ಹಣ ಹಂಚಿದರು. ಆದರೂ ಅವರು ಅಲ್ಲಿ ಸೋತಿದ್ದಾರೆ. ಜನ ಇವತ್ತು ಬದಲಾವಣೆ ಬಯಸಿದ್ದಾರೆ. ಇದು ಮುಂದಿನ ಚುನಾವಣೆ ದಿಕ್ಸೂಚಿಯೆಂದು ನಾನು ಹೇಳಲ್ಲ ಆದರೆ ಜನರ ಎಚ್ಚರಿಕೆಯ ಗಂಟೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಸಿಂದಗಿಯಲ್ಲಿ ಅಭ್ಯರ್ಥಿ ಪ್ರಬಲರಿದ್ದರು. ಆದರೆ ಕಾರ್ಯಕರ್ತರ ಹೊಂದಾಣಿಕೆ ಇರಲಿಲ್ಲ. ಹಾಗಂತ ಅಲ್ಲಿ ಕಾರ್ಯಕರ್ತರು ಹೇಳುತ್ತಿದ್ದರು ಎಂದರು.

ಇದನ್ನೂ ಓದಿ:ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸುತ್ತೇವೆ: ಉಪಚುನಾವಣೆ ಫಲಿತಾಂಶದ ಬಳಿಕ ಬಿಎಸ್ ವೈ

Advertisement

ದೇಶದ 30 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ನಡೆದಿದೆ. ಎಂಟರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದ ಕಡೆ ಬೇರೆಯವರು ಗೆದ್ದಿದ್ದಾರೆ. ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ಠೇವಣಿ ಕಳೆದುಕೊಂಡ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕೋಮುವಾದಿ ಪಕ್ಷದ ಜೊತೆ ಸೇರಿದ್ದಾರೆಂದು ನಾನು ಮೊದಲೇ ಹೇಳಿದ್ದೆ. ಈಗ ಎರಡೂ ಕಡೆ ಠೇವಣಿ ಕಳೆದುಕೊಂಡಿದ್ದಾರೆ. ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಮುಂದಿನ ಚುನಾವಣೆಯಲ್ಲೂ ಇದೇ ಆಗಲಿದೆ ಎಂದು ಹೇಳಿದರು.

ಬಿಜೆಪಿ ಅವನತಿ ಶುರುವಾಗಿದೆ. 2023 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಸಿಎಂ ಆಗುವ ಆಕಾಂಕ್ಷೆ ಬಿಟ್ಟುಬಿಟ್ಟಿದ್ದೇನೆ ಎಂದಲ್ಲ, ಆದರೆ ಶಾಸಕರು ಒಪ್ಪಬೇಕಲ್ಲ ಎಂದು ಪರೋಕ್ಷ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next