ಹನೂರು: ಆಯುಧಪೂಜೆಯ ಖರ್ಚಿಗೆಂದು 5,000 ರೂ. ಡ್ರಾ ಮಾಡಿರುವುದು ಸರಿಯಲ್ಲ. ಆ ಖರ್ಚಿಗೆ ಪ್ರತ್ಯೇಕ ವೋಚರ್‌ಗಳನ್ನಿಟ್ಟು ಹಣ ಪಾವತಿಸಿದ ಬಳಿಕ ಸ್ವೀಕೃತಿ ಪತ್ರಗಳನ್ನು ಕಡ್ಡಾಯವಾಗಿ ಪಡೆಯಬೇಕೆಂದು ಶಾಸಕ ಆರ್.ನರೇಂದ್ರ ಪಪಂ ಅಧಿಕಾರಿಗಳಿಗೆ ಸೂಚಿಸಿದರು. ಹನೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕರೆದಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಆಯವ್ಯಯಗಳನ್ನು ಪರಿಶೀಲಿಸಿ ಕೆಲವು ಲೋಪದೋಷಗಳನ್ನು ಗುರುತಿಸಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ, ಸಾಮಾನ್ಯ ನಿಧಿ ಮತ್ತು ಬಾಡಿಗೆ ರೂಪದಲ್ಲಿ ಬಂದಿರುವ ಆದಾಯದ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಸಂಗ್ರಹವಾದ ಮೊತ್ತದ ಜೊತೆಗೆ ಆಯಾ ಮಾಸಿಕ ಗುರಿ, ಸಂಗ್ರಹಣೆ ಎಲ್ಲವನ್ನೂ ಮಂಡಿಸಬೇಕು. ಗುರಿ ತಲುಪದಿದ್ದಲ್ಲಿ ಕಾರಣ ಅರಿತು ಕ್ರಮಕ್ಕೆ ಸೂಚಿಸಬೇಕೆಂದು ತಿಳಿಸಿದರು.
ಮರು ಕ್ರಿಯಾಯೋಜನೆ ಬೇಡ: ಪಟ್ಟಣ ಪಂಚಾಯಿತಿಯ ಶೇ.24.10 ಯೋಜನೆಯಡಿ 2010-11 ರಿಂದ 2015-16ನೇ ಸಾಲಿನವರೆಗೆ 3.06 ಲಕ್ಷ ರೂ. ಅನುದಾನ ಖರ್ಚಾಗದೆ ಉಳಿದಿದೆ. ಆ ಅನುದಾನದಲ್ಲಿ ಪಟ್ಟಣದ ಬಾಬು ಜಗಜೀವನ ರಾಂ ಸಮುದಾಯ ಭವನಕ್ಕೆ 1.86 ಲಕ್ಷ ಮತ್ತು ಅಂಬೇಡ್ಕರ್ ಸಮುದಾಯ ಭನಕ್ಕೆ 1.20 ಲಕ್ಷ ರೂ. ವೆಚ್ಚದಲ್ಲಿ ಪಾತ್ರೆ ಸಾಮಗ್ರಿ ಖರೀದಿಸುವ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಅನುಮೋದನೆಗೆ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಇದಕ್ಕೆ ಅನುಮೋದನೆ ನೀಡದೆ ವಾಪಸ್ ಕಳುಹಿಸಿದ್ದಾರೆ.
ಸಿಸಿ ರಸ್ತೆ ಅಥವಾ ಚರಂಡಿಗೆ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದ್ದಾರೆಂದು ಸಭೆಯಲ್ಲಿ ಮಂಡಿಸಲಾಯಿತು. ಆದರೆ ಇದಕ್ಕೆ ಒಪ್ಪದ ಶಾಸಕರು ರಸ್ತೆ ಚರಂಡಿ ಕಾಮಗಾರಿಯನ್ನು ಶಾಸಕರ ನಿಧಿ, ಎಸ್‌ಸಿಪಿ, ಟಿಎಸ್‌ಪಿ ಇನ್ನಿತರ ಯೋಜನೆಗಳಿಂದ ಮಾಡಲಾಗುವುದು. ಆದ್ದರಿಂದ ಮರುಕ್ರಿಯಾಯೋಜನೆ ಮಾಡದೆ ಸಮುದಾಯ ಭವನಗಳಿಗೆ ಪಾತ್ರೆಗಳನ್ನೇ ವಿತರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
3 ಕೋಟಿ ರೂ.ಗೆ ಡಿಪಿಆರ್: ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಯೋಜನೆಗೆ ಮೂರು ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಿ ಸಲ್ಲಿಸಲಾಗಿದೆ. ಅದರಲ್ಲಿ ಶೇ.50 ಅನುದಾನವನ್ನು ಪಟ್ಟಣ ಪಂಚಾಯಿತಿ ಅನುದಾನದಿಂದ ಭರಿಸಲು ಕೋರಲಾಗಿದೆ ಎಂದು ಕಿರಿಯ ಅಭಿಯಂತರ ಮಿಥುನಾ ಸಭೆಯಲ್ಲಿ ಮಂಡಿಸಿದರು. ಆಗ ಪಟ್ಟಣ ಪಂಚಾಯಿತಿಯ ಶೇ.50ರ 1.5 ಕೋಟಿ ರೂ. ಅನುದಾನವನ್ನು ಯೋಜನೆ ಪ್ರಾರಂಭವಾದ ಬಳಿಕ ಹಂತಹಂತವಾಗಿ ನೀಡಲು ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಳಿಗೆ ಮರುಹರಾಜಿಗೆ ಸೂಚನೆ: ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಪಡೆದು ಇನ್ನೂ ಮುಂಗಡ ಹಣ ಪಾವತಿಸದವರಿಗೆ ನೋಟಿಸ್ ನೀಡಬೇಕು. ಬಳಿಕ ಮರು ಹರಾಜು ನಡೆಸಲು ಕ್ರಮ ಕೈಗೊಳ್ಳುವಂತೆ ಶಾಸಕ ನರೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಆರಂಭಿಸಲು ಅನುದಾನ ನೀಡಲಾಗಿದೆ. ಇನ್ನೂ ಅದರ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಇದರ ಬಗ್ಗೆ ಆರು ಬಾರಿ ತಮ್ಮ ಬಳಿ ವಿಚಾರಿಸಿದ್ದರೂ ಇನ್ನೂ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ ಎಂದು ಎಂಜಿನಿಯರ್ ವಿರುದ್ಧ ಶಾಸಕರು ಕಿಡಿಕಾರಿದರು.
ಬೇಸಿಗೆ ಪ್ರಾರಂಭವಾಗುವ ಮುನ್ನ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಕಾರ್ಯಾರಂಭಿಸಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪ್ರಾರಂಭಿಸುವ ಘಟಕಕ್ಕೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಮುಖ್ಯಾಧಿಕಾರಿ ಮೋಹನ್‌ಕೃಷ್ಣ, ಸದಸ್ಯರಾದ ಬಾಲರಾಜ್ ನಾಯ್ಡು, ರಾಜೂಗೌಡ, ಸುಮತಿ ಮಾದೇಶ್, ಶೋಭಾ, ಮಹದೇವಮ್ಮ, ಪ್ರತಿಮಾ ರವೀಂದ್ರ, ಯೋಗಶ್ರೀ, ನಾಗಣ್ಣ, ಜಯಪ್ರಕಾಶ್ ಗುಪ್ತ, ಅಕ್ರಂವುಲ್ಲಾ, ವೆಂಕಟೇಶ್, ಬಸವರಾಜು, ಸಮುದಾಯ ಸಂಘಟನಾಧಿಕಾರಿ ಭೈರಪ್ಪ, ರಮೇಶ್, ನಂಜುಂಡ ಶೆಟ್ಟಿ ಸಿಬ್ಬಂದಿ ಇದ್ದರು.