ನವ ದೆಹಲಿ : ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಂದು(ಗುರುವಾರ, ಜುಲೈ 22) ದೈನಿಕ್ ಭಾಸ್ಕರ್ ಸಮೂಹ ಸಂಸ್ಥೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಇದನ್ನೂ ಓದಿ : ಅಶ್ಲೀಲ ಚಿತ್ರ ನಿರ್ಮಾಣದಿಂದ ರಾಜ್ ಕುಂದ್ರಾಗೆ ದಿನಕ್ಕೆ 7 ಲಕ್ಷ ರೂ. ಆದಾಯ!
ಪ್ರವರ್ತಕರ ನಿವಾಸಗಳು ಮತ್ತು ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ದೈನಿಕ್ ಭಾಸ್ಕರ್ ಸಮೂಹ ಸಂಸ್ಥೆಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಯುತ್ತಿವೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ದೈನಿಕ್ ಭಾಸ್ಕರ್ ಭೋಪಾಲ್ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇಂದು (ಗುರುವಾರ, ಜುಲೈ 22) ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ಉತ್ತರ ಪ್ರದೇಶದ ದೃಶ್ಯ ಮಾಧ್ಯಮ ಭಾರತ್ ಸಮಾಚಾರ್, ನ ಲಕ್ನೋ ಕಚೇರಿಯ ಮೇಲೂ ಕೂಡ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಹಾಗೂ ಭಾರತ್ ಸಮಾಚಾರ್ ಮಾಧ್ಯಮದ ಸಂಪಾದಕರ ಮನೆಯ ಮೇಲೂ ಕೂಡ ದಾಳಿ ನಡೆಸಿದ್ದು, ಆದಾಯ ತೆರಿಗೆಗೆ ಸಂಬಂಧ ಪಟ್ಟಂತಹ ದಾಖಲೆಗಳನ್ನ ಪರಿಶೀಲಿಸಲಾಗಿದೆ ಎಂದು ತಿಳಿದು ಬಂದಿದೆ.
ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿಯ ಮೇಲೆ ಹಾಗೂ ದೃಶ್ಯ ಮಾಧ್ಯಮ ಭಾರತ್ ಸಮಾಚಾರ್ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕೋವಿಡ್ ಸಾಂಕ್ರಾಮಕದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಸಮರ್ಪಕ ನಿರ್ವಹಣೆಯ ಬಗ್ಗೆ ನಿರಂತರವಾಗಿ ಸುದ್ದಿ ಮಾಡಿರುವುದಕ್ಕೆ ಕೇಂದ್ರ ಪ್ರತಿಕಾರ ತೀರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆಯ ಆರ್ಭಟ: ತುಂಬಿ ಹರಿಯುತ್ತಿರುವ ನದಿಗಳು