Advertisement

8ನೇ ಪರಿಚ್ಛೇದದಲ್ಲಿ ಸೇರ್ಪಡೆ ಪ್ರಸ್ತಾವ: ಸದ್ಯ ತುಳು ಭಾಷೆಗೆ ಸ್ಥಾನ ಸಿಗದು

01:09 AM Dec 15, 2021 | Team Udayavani |

ಹೊಸದಿಲ್ಲಿ: ತುಳು ಭಾಷೆ ಸದ್ಯ ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರ್ಪಡೆಗೊಳ್ಳುವ ಸಾಧ್ಯತೆಗಳಿಲ್ಲ.
ಮಂಗಳವಾರ ಲೋಕ ಸಭೆ ಯಲ್ಲಿ ಚುಕ್ಕಿರಹಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಸದ್ಯ ಇದಕ್ಕೆ ಅವಕಾಶ ಇಲ್ಲ ಎಂದು ಉತ್ತರಿಸಿದ್ದಾರೆ.

Advertisement

ಲೋಕಸಭೆಯ ಮಂಗಳವಾರದ ಕಲಾಪ ಸಂದರ್ಭ ಸಂಸದ ರಾಜಮೋಹನ್‌ ಉಣ್ಣಿತ್ತಾನ್‌ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಯೋಜನೆ ಸರಕಾರಕ್ಕಿದೆಯೇ, ಇಲ್ಲವಾದರೆ ಕಾರಣ ವೇನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ನಿತ್ಯಾನಂದ ರಾಯ್‌, ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಆಗ್ರಹ ಇರುವುದು ಸರಕಾರದ ಗಮನದಲ್ಲಿದೆ. ಆದರೆ ಭಾಷೆಗಳು ಮತ್ತು ಉಪಭಾಷೆಗಳ ವಿಕಾಸ ಒಂದು ಸತತ ಪ್ರಕ್ರಿಯೆಯಾಗಿದ್ದು, ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗುತ್ತದೆ. ಆದ್ದರಿಂದ ಭಾಷೆಗಳನ್ನು ಉಪಭಾಷೆಗಳಿಂದ ಪ್ರತ್ಯೇಕವಾಗಿ ಗುರುತಿ ಸಲು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸಲು ಮಾನದಂಡಗಳನ್ನು ನಿರ್ದಿಷ್ಟವಾಗಿ ರೂಪಿಸುವುದು ಕಷ್ಟ ಎಂದಿದ್ದಾರೆ.

ಈ ಸಂಬಂಧ ಮಾನದಂಡಗಳನ್ನು ರೂಪಿಸುವ ಪಹ್ವಾ (1996) ಮತ್ತು ಸೀತಾಕಾಂತ್‌ ಮೊಹಾಪಾತ್ರ (2003) ಸಮಿತಿಗಳ ಪ್ರಯತ್ನಗಳು ಸಂಪೂರ್ಣ ಯಶಸ್ವಿಯಾಗಿಲ್ಲ. ಹೀಗಾಗಿ ಸದ್ಯ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ. ಡಾ| ಸೀತಾಕಾಂತ ಮೊಹಾಪಾತ್ರ ಸಮಿತಿಯು ಎಂಟನೇ ಪರಿಚ್ಛೇದದಲ್ಲಿರುವ ಅಧಿಕೃತ ಭಾಷೆಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಶಿಫಾರಸು ಮಾಡಿದೆ.

ಅಧಿಕೃತ ಭಾಷೆಗಳ ಸಂಖ್ಯೆಯನ್ನು ಪ್ರಸ್ತುತ ಹೆಚ್ಚಿಸುವುದು ಆಡಳಿತಾತ್ಮಕ ವಾಗಿ ಕಾರ್ಯಸಾಧ್ಯವಲ್ಲ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:ಸಿದ್ಧ ಆಹಾರಕ್ಕೆ ಬಳಸಿದ ಸಾಮಗ್ರಿ ವಿವರ ಕಡ್ಡಾಯ; ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು

Advertisement

ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳ ತುಳು ಭಾಷಿಕರು ಹಲವಾರು ದಶಕಗಳಿಂದ ಆಗ್ರಹಿಸುತ್ತ ಬಂದಿದ್ದಾರೆ. ಈ ಸಂಬಂಧ ಕಳೆದ ಜೂನ್‌ನಲ್ಲಿ ನಡೆದ ಟ್ವೀಟ್‌ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ತುಳು ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಇನ್ನುಳಿದ ನಾಲ್ಕು ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿದ್ದರೂ ತುಳುವಿಗೆ ಈ ಭಾಗ್ಯ ಒದಗಿಬಂದಿಲ್ಲ ಎಂಬುದು ತುಳುವರ ನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next