ಯಾದಗಿರಿ: ಚಂಡರಕಿಯ ಒಬ್ಬ ಸೋಂಕಿತ ಸತ್ತಿರುವುದಕ್ಕೆ ಸ್ಪಂದನೆ ಮಾಡಲು ಆಗಿಲ್ಲ. ಏನಪ್ಪಾ, ಬೆಳ್ಳಗೆ ಬಟ್ಟೆ ಹಾಕಿಕೊಂಡಿದ್ದೀಯಾ, ಮುಂದೆ ಇಲ್ಲಿ ಚುನಾವಣೆಗೆ ನೀನೇ ನಿಲ್ಲು, ಎಂಎಲ್‌ಎ ಎಲೆಕ್ಷನ್‌ಗೆ ನೀನೆ ನಿಲ್ಲು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಗುರುಮಠಕಲ್ ಸಮುದಾಯ ಆಸ್ಪತ್ರೆಯಲ್ಲಿ ಸಮರ್ಪಕ ಆರೋಗ್ಯ ಸೇವೆ ದೊರೆಯದ ಕುರಿತು ದೂರುಗಳು ಬಂದ ಹಿನ್ನೆಲೆ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಕೆಲ ದಿನಗಳ ಹಿಂದೆಯಷ್ಟೇ ಸಂಸದ ಡಾ.ಉಮೇಶ ಜಾಧವ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದರು.
ಅವರ ಭೇಟಿ ವೇಳೆ ಕೇವಲ ಒಬ್ಬ ಸಿಬ್ಬಂದಿ ಹೊರತುಪಡಿಸಿ ವೈದ್ಯರು, ಇತರೆ ಸಿಬ್ಬಂದಿಗಳು ಇರದಿರುವುದನ್ನು ಕಂಡು ಸಿಬ್ಬಂದಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ವೈದ್ಯರು ಮತ್ತು ಸಿಬ್ಬಂದಿಗಳು ಗೈರಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದು ಇಲಾಖೆ ಆಂತರಿಕ ವಿಚಾರ ಮಾಧ್ಯಮಗಳಿಗೆ ಹೇಳಲಾಗಲ್ಲ ಎಂದು ಡಿಹೆಚ್‌ಓ ಡಾ.ಇಂದುಮತಿ ಪ್ರತಿಕ್ರಿಯಿಸಿದರು.
ಮನೆಯಿಂದ ಬಂದ ವೈದ್ಯೆ: ಡಿಹೆಚ್‌ಓ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಯಾವೊಬ್ಬ ವೈದ್ಯರೂ ಕರ್ತವ್ಯದಲ್ಲಿರಲಿಲ್ಲ. ಅಧಿಕಾರಿಗಳು ಬಂದ ಬಳಿಕವೇ ವೈದ್ಯೆ ಡಾ|ಪ್ರಿಯಾಂಕ ಎನ್ನುವವರು ಮನೆಯಿಂದ ಆಗಮಿಸಿದ್ದನ್ನು ಕಂಡು ಏನಮ್ಮಾ ಮನೆಯಿಂದ ಈಗ ಕರ್ತವ್ಯಕ್ಕೆ ಬರುತ್ತಿದ್ದಿಯಾ? ವೈದ್ಯರು ಎಲ್ಲಿ ಎಂದು ಪ್ರಶ್ನಿಸಿದರು.
ಪರೀಕ್ಷೆಗೆ ಕಳಿಸಬೇಕಿದ್ದ ಗಂಟಲು ದ್ರವ ಟೇಬಲ್ ಮೇಲೆ: ತಾಲೂಕು ಆಸ್ಪತ್ರೆಗಳಲ್ಲಿಯೂ ಬರುವ ಶಂಕಿತ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಗುರುಮಠಕಲ್ ಆಸ್ಪತ್ರೆಯ ಗೇಟ್ ಬಳಿ ಪರೀಕ್ಷೆಗೆಂದು ತೆಗೆದ ಗಂಟಲು ದ್ರವದ ಮಾದರಿಗಳು ಅನಾಥವಾಗಿ ಟೇಬಲ್ ಮೇಲೆ ಇರಿಸಲಾಗಿತ್ತು. ಮಧ್ಯಾಹ್ನ ೨ ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಏನು ತಿಳಿಯದ ಮಹಿಳೆಯರು, ಮಕ್ಕಳು ಸಹ ಇದ್ದರು. ಅಚಾನಕ್ ಆಗಿ ಯಾರಾದರೂ ಇದೇನು ಎಂದು ಕೈಯಲ್ಲಿ ತೆಗೆದುಕೊಂಡಿದ್ದರೇ ಎಷ್ಟು ಅಪಾಯವಾಗುತ್ತಿತ್ತು ಎನ್ನುವುದನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅರಿಯಬೇಕು. ಇದಕ್ಕೆ ವಾಟ್ಸ್ ಆ್ಯಪ್ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗುವುದು ಎಂದಿದ್ದಾರೆ.