ಪಡುಬಿದ್ರಿ : ಮನೆಯಲ್ಲಿ ನಡೆಯಲಿದ್ದ ತೆನೆ ಹಬ್ಬಕ್ಕಾಗಿ ಗದ್ದೆಗೆ ತೆನೆ ತರಲು ಹೋಗಿದ್ದ ವ್ಯಕ್ತಿಗೆ ವಿಷ ಜಂತು ಕಡಿದು ಸಾವನ್ನಪ್ಪಿದ ಘಟನೆ ಎರ್ಮಾಳು ನಟ್ಟಿ ಮನೆ ಎಂಬಲ್ಲಿ ಗುರುವಾರ ನಡೆದಿದೆ.
ಎರ್ಮಾಳು ಮಲ್ಲಕ್ಕ ನಟ್ಟಿ ಮನೆ ನಿವಾಸಿ 44 ವರ್ಷದ ಚಂದ್ರಶೇಖರ ಪೂಜಾರಿ ಮೃತಪಟ್ಟ ದುರ್ದೈವಿ.
ಗುರುವಾರ ನಡೆಯಲಿದ್ದ ತೆನೆ ಹಬ್ಬಕ್ಕೆ ತಮ್ಮದೇ ಕೃಷಿ ಗದ್ದೆಗೆ ತೆನೆ ತರಲು ಬುಧವಾರ ರಾತ್ರಿ ಹೋಗಿದ್ದು, ಈ ವೇಳೆ ಅವರ ಕಾಲಿಗೆ ಏನೋ ಕಡಿದ ಅನುಭವವಾಗಿದ್ದು, ಮನೆಗೆ ಬಂದ ಅವರು ಪತ್ನಿ ಉಷಾ ಅವರಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ತರಚಿದಂತಿದ್ದ ಗಾಯಕ್ಕೆ ಮನೆ ಮದ್ದು ಲೇಪಿಸಿ ಮಲಗಿದ್ದರು.
ಇದನ್ನೂ ಓದಿ:ದೇವರ ಮೊರೆಹೋದ ಶರಾವತಿ ಸಂತ್ರಸ್ತರು; ಕಲ್ಲುಕೊಪ್ಪದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ !
ಗುರುವಾರ ಮುಂಜಾನೆ ತೆನೆ ಹಬ್ಬದ ಬಹುತೇಕ ಕೆಲಸವನ್ನು ಮುಗಿಸಿದ ಚಂದ್ರಶೇಖರ ಅವರಿಗೆ ಇದ್ದಕ್ಕಿದಂತೆ ಉಸಿರು ಕಟ್ಟಿದಂತ್ತಾಗಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಮೃತ ಪಟ್ಟಿದ್ದಾರೆ.
ಮೃತರು ಎಲೆಕ್ಟ್ರಿಕ್ ವೃತ್ತಿ ನಡೆಸುತ್ತಿದ್ದು, ಇವರ ದುಡಿಮೆಯಿಂದಲೇ ಕುಟುಂಬದ ಜೀವನ ರಥ ಸಾಗುತ್ತಿತ್ತು. ಇದೀಗ ಮನೆ ಯಜಮಾನನ ಅನಿರಿಕ್ಷಿತ ಸಾವಿನಿಂದಾಗಿ ಕುಟುಂಬ ಬಡವಾಗಿದೆ.
ಪತ್ನಿ ಉಷಾ ಅವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.