Advertisement

ವಿವಾಹಿತೆಗೆ ಮೆಸೇಜ್ ಕಳಿಸಿದ ಯುವಕ: ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ

03:55 PM Aug 29, 2021 | Team Udayavani |

ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಯುವಕನೊಬ್ಬ ವಿವಾಹಿತೆಗೆ ಮೊಬೈಲಿನಲ್ಲಿ ಮೆಸೇಜ್‍ ಮಾಡಿದ್ದ ಎನ್ನುವ ಕಾರಣಕ್ಕೆ ಆತನನ್ನು ವಿವಾಹಿತೆಯ ಕಡೆಯವರು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಆದರೆ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಬೇಕಿದ್ದ ಪೊಲೀಸರು ಮಾತ್ರ ಸಂಧಾನದ ನೆಪದಲ್ಲಿ ಪ್ರಕರಣ ದಾಖಲಿಸದೆ ಬಿಟ್ಟು ಕಳಿಸಿದ್ದಾರೆ. ಏತನ್ಮಧ್ಯೆ ಹಲ್ಲೆಗೊಳಗಾದ ಯುವಕ ಅಜ್ಞಾತ ಸ್ಥಳಕ್ಕೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳತೊಡಗಿದ್ದಾನೆ. ಯುವಕನನ್ನು ವಶಕ್ಕೆ ಪಡೆದಿದ್ದ ಪೊಲೀಸರು 2 ದಿನ ಪೊಲೀಸ್‍ ಠಾಣೆಯಲ್ಲಿ ಕಾನೂನುಬಾಹಿರವಾಗಿ ಇಟ್ಟುಕೊಂಡು 3ನೇ ದಿನ ಸಂಧಾನ ಆದ ಮೇಲೆ ಬಿಟ್ಟು ಕಳಿಸಿರುವುದಕ್ಕೆ ರಕ್ಕಸಗಿ ಗ್ರಾಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:ಬಸವನಬಾಗೇವಾಡಿ: ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕ ಶವವಾಗಿ ಪತ್ತೆ

ಯುವಕ ತಪ್ಪು ಮಾಡಿದ್ದರೆ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶಿಕ್ಷಿಸಬಹುದಾಗಿತ್ತು. ಆದರೆ ಕಂಬಕ್ಕೆ ಕಟ್ಟಿ ಸುತ್ತಿಗೆ, ಬಡಿಗೆ, ಹಾರೆ ಮುಂತಾದ ಮಾರಕಾಸ್ತ್ರಗಳಿಂದ ಮನಸೋ ಇಚ್ಚೇ ಥಳಿಸಿರುವುದು ತಪ್ಪು. ಅಕಸ್ಮಾತ್‍ ಹೊಡೆಯುವಾಗ ಯುವಕ ಸಾವನ್ನಪ್ಪಿದ್ದರೆ ಯಾರು ಹೊಣೆ?  ಹಲ್ಲೆಯ ಘಟನೆಯನ್ನು ಪೊಲೀಸರು ಚಿತ್ರೀಕರಿಸಿಕೊಂಡಿದ್ದರೂ, ಯುವಕ ಮುಖ, ಮೈಮೇಲೆಲ್ಲಾ ತೀವ್ರ ಗಾಯಗಳಾಗಿ, ರಕ್ತ ಸೋರುತ್ತಿದ್ದರೂ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸದೆ ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ತಪ್ಪಿತಸ್ತ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿಬರತೊಡಗಿದೆ.

ಇದಕ್ಕೆ ಸಿಪಿಐ, ಪಿಎಸೈ ಅವರು ಪ್ರತಿಕ್ರಿಯಿಸಿದ್ದು ಯಾರೂ ದೂರು ಕೊಡದಿದ್ದರೆ ನಾವೇನು ಮಾಡೋಣ ಎಂದು ಜಾರಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next