Advertisement

ಸರ್ಕಾರಿ ಕೆಲಸ ಕೊಡಿಸುವುದಾಗಿ 25 ಲಕ್ಷ ರೂ ವಂಚನೆ

11:01 AM Feb 24, 2021 | Team Udayavani |

ಬೆಂಗಳೂರು: ಅಬಕಾರಿ ಉಪನಿರೀಕ್ಷಕ(ಎಸ್‌ಐ) ಹುದ್ದೆ ಕೊಡಿಸುವುದಾಗಿ ನಂಬಿಸಿ ಮೂವರಿಂದ 25 ಲಕ್ಷ ರೂ. ಪಡೆದುಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಬಸವೇಶ್ವರನಗರದ ನಿವಾಸಿ ಬಸವರಾಜ್‌ ನೀಡಿದ ದೂರಿನ ಆಧಾರದ ಮೇರೆಗೆ ಮಲ್ಲಿಕಾರ್ಜುನ್‌ ಬಿರಾದಾರ್‌, ನಿಂಗರಾಜ್‌ ಅತನೂರು ಹಾಗೂ ಮಾದೇಶ್‌ ಎಂಬವವರ ವಿರುದ್ಧ ಬಸವೇಶ್ವರ ನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬಸವರಾಜ್‌ಗೆ ಪರಿಚಯವಾದ ಆರೋಪಿ ಮಲ್ಲಿಕಾರ್ಜುನ್‌, ಹಣ ಕೊಟ್ಟರೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ. ಪದೇ ಪದೆ ಕರೆ ಮಾಡಿ ಹಣ ಕೊಡದೇ ಹೋದರೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಒತ್ತಾಯಿಸುತ್ತಿದ್ದ. ನನ್ನ ಅಣ್ಣ ನಿಂಗರಾಜ್‌ ಅತನೂರುಗೆ ಬೆಂಗಳೂರಿನಲ್ಲಿ ಹಲವು ಐಪಿಎಸ್‌ ಹಾಗೂ ಕೆಎಸ್‌ಪಿಸಿ ಅಧಿಕಾರಿಗಳು ಪರಿಚಯವಿದ್ದು, ಅವರೇ ನಿಮಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ.

ಬಳಿಕ ಮಲ್ಲಿಕಾರ್ಜುನ್‌ ಹಾಗೂ ನಿಂಗರಾಜ್‌ ಬಸವರಾಜ್‌ ನ್ನು ಭೇಟಿಯಾಗಿ “2019ರಲ್ಲಿ ಕೆಎಸ್‌ಪಿಸಿಯಲ್ಲಿ ಕರೆಯಲಾದ ಅಬಕಾರಿ ಉಪ ನಿರೀಕ್ಷಕ ಹುದ್ದೆಗೆ ಹಣ ನೀಡಿದರೆ ಕೆಲಸ ಕೊಡಿಸುತ್ತೇವೆ’ ಎಂದು ನಂಬಿಸಿದ್ದರು. ಅದನ್ನು ನಂಬಿದ ಬಸವರಾಜ್‌ ತನ್ನ ಸ್ನೇಹಿತರಾದ ಈರಪ್ಪ, ಮಲ್ಲಕ್ಕನವರ್‌ ಜತೆ ಬಸವೇಶ್ವರನಗರದ ಖಾಸಗಿ ಹೋಟೆಲ್‌ವೊಂದರಲ್ಲಿ 2019 ಫೆ.10ರಂದು ಆರೋಪಿಗಳನ್ನು ಭೇಟಿಯಾಗಿದ್ದರು. ಮಲ್ಲಿಕಾರ್ಜುನ್‌ ಜತೆ ಬಂದಿದ್ದ ಮಾದೇಶ್‌ ತನ್ನನ್ನು ಐಪಿಎಸ್‌ ಅಧಿಕಾರಿ ಎಂದು ಬಸವರಾಜ್‌ಗೆ ಪರಿಚಯಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಮೂವರಿಗೆ ಕೆಲಸ ಕೊಡಿಸಲು 25 ಲಕ್ಷ ರೂ. ಕೊಡಬೇಕಾಗುತ್ತದೆ ಎಂದು ನಂಬಿಸಿ ಹಣ ಪಡೆದುಕೊಂಡಿದ್ದಾರೆ. ಅದನ್ನು ನಂಬಿದ ಬಸವರಾಜ್‌ ಹಾಗೂ ಆತನ ಸ್ನೇಹಿತರು ಮುಂಗಡವಾಗಿ ಐದು ಲಕ್ಷ ರೂ. ಕೊಟ್ಟಿದ್ದರು. ಉಳಿದ 20 ಲಕ್ಷ ರೂ.ನ್ನು ಬಸವರಾಜ್‌, ಆರೋಪಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದರು. 2020ರಲ್ಲಿ ಕೆಎಸ್‌ಪಿಸಿ ಹುದ್ದೆಗೆ ಪರೀಕ್ಷೆ ಬರೆದವರ ಫಲಿತಾಂಶಗಳು ಬಂದಿದ್ದು, ಅದರಲ್ಲಿ ಬಸವರಾಜ್‌ ಹಾಗೂ ಅವರ ಸ್ನೇಹಿತರ ಹೆಸರು ಇರಲಿಲ್ಲ. ಈ ಬಗ್ಗೆ ಆರೋಪಿಗಳಿಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದಾರೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಹತ್ಯೆಗೈಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ್‌ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next