Advertisement

ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

11:25 AM Jan 06, 2021 | Team Udayavani |

ಬೆಂಗಳೂರು: ನಾಪತ್ತೆಯಾಗಿದ್ದ ಮಹಿಳೆ ಯೊಬ್ಬರು ಪರಿಚಯಸ್ಥನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

“ತನ್ನ ಪತ್ನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿ ಮೃತ ಮಹಿಳೆ ಪತಿ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದರ ನಡುವೆ, ಆಕೆಯ ಜತೆಗಿದ್ದ ಪ್ರವೀಣ್‌ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

“ಮಹಿಳೆಯ ಮೃತದೇಹದ ಮೇಲೆ ಯಾವುದೇಗಾಯದ ಗುರುತುಗಳು ಕಂಡು ಬಂದಿಲ್ಲ. ಆಕೆಯ ಸಾವು ಹೇಗೆ ಸಂಭವಿಸಿದೆ ಎಂಬುದು ಖಚಿತಪಟ್ಟಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ಗೊತ್ತಾಗಲಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವು ನೀಡಿದ ಮಹಿಳೆಯ ಮೊಬೈಲ್‌: ಪ್ರಿಂಟಿಂಗ್‌ ಪ್ರಸ್‌ವೊಂದರಲ್ಲಿ ಕೆಲಸ ಮಾಡುವ 42 ವರ್ಷದ ಮಹಿಳೆ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿ ಕುಟುಂಬದ ಜತೆ ವಾಸವಿದ್ದರು. ಸೋಮವಾರಕೆಲಸಕ್ಕೆ ಹೋಗಿದ್ದ ಆಕೆ ಮನೆಗೆ ಹಿಂತಿರುಗಿರಲಿಲ್ಲ.ಇದರಿಂದ ಆತಂಕ ಗೊಂಡ ಆಕೆಯ ಪತಿ ಮಂಗಳವಾರ ಬೆಳಗ್ಗೆ ಪೊಲೀಸರಿಗೆ ದೂರು ನೀಡಿದ್ದರು.ಈ ನಿಟ್ಟಿನಲ್ಲಿ ನಾಪತ್ತೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದರು. ಆಕೆ ಬಳಸುತ್ತಿದ್ದ ಮೊಬೈಲ್‌ಗೆ ಕರೆ ಮಾಡಿದರೆ ರಿಂಗಣಿಸುತ್ತಲೇ ಇತ್ತು. ಇದರ ಸುಳಿವು ಆಧರಿಸಿ ಮೊಬೈಲ್‌ ರಿಂಗಣಿಸುತ್ತಿದ್ದ ಲೊಕೇಶನ್‌ ಪತ್ತೆ ಹಚ್ಚಿದಾಗ ಕಾಮಾಕ್ಷಿಪಾಳ್ಯದ ಮನೆಯೊಂದು ಪತ್ತೆ ಆಯಿತು. ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಮಹಿಳೆ ಮೃತಪಟ್ಟು ಹಾಲ್‌ನಲ್ಲಿ ಆಕೆಯ ಮೃತದೇಹ ಇರುವುದು ಕಂಡು ಬಂತು.

ಇದನ್ನೂ ಓದಿ : ವಾಟ್ಸಾಪ್ ನಿಯಮಗಳಲ್ಲಿ ಬದಲಾವಣೆ: ಷರತ್ತು ಒಪ್ಪದಿದ್ದರೇ ನಿಮ್ಮ ಅಕೌಂಟ್ ಡಿಲೀಟ್ !

Advertisement

ಪ್ರವೀಣ್‌ ಎಂಬಾತನ ಜತೆ ಮಹಿಳೆ ಸೋಮವಾರ ರಾತ್ರಿ ಮಹಿಳೆ ತಂಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆತನನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಉಸಿರಾಟ ತೊಂದರೆಯಿಂದಮೃತಪಟ್ಟಿದ್ದಾರೆಯೇ? ಆಕೆಯನ್ನು ಕೊಲೆ ಮಾಡಲಾಗಿದೆಯೇ ಎಂಬುದು ಪೂರ್ಣ ತನಿಖೆ ಬಳಿಕ ಖಚಿತಪಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕು :

ಕೆಲದಿನಗಳ ಹಿಂದೆ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪರಿಚಯಸ್ಥ ಯುವಕನೊಬ್ಬ ಉತ್ತರ ಭಾರತ ಮೂಲದ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿಯೂ ಯುವತಿ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ, ಹೀಗಾಗಿ ಯುವತಿ ಕೊಲೆ ರಹಸ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಯುವತಿಯ ಮರಣೋತ್ತರ ಪರೀಕ್ಷಾ ವರದಿಯಲ್ಲೂ ನಿಖರವಾಗಿ ಆಕೆಯ ಸಾವಿನ ಕಾರಣ ಗೊತ್ತಾಗಿಲ್ಲ. ಹೀಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನೂ ಅವಲಂಬಿಸಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next