ಬೆಂಗಳೂರು: ಡ್ರಾಪ್ ಕೊಡುವ ನೆ ಪದಲ್ಲಿ ಯುವತಿಯನ್ನು ಪುಸಲಾಯಿಸಿ ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಅಖೀಲೇಶ್ (25), ಹಾಸನ ಮೂಲದ ದೀಪು(21) ಬಂಧಿತರು.
25 ವರ್ಷದ ಯುವತಿ ಮೇಲೆ ಆತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆ.31ರಂದು ಸಂಜೆ 5 ಗಂಟೆಗೆ ಈಜಿಪುರ ಬಳಿಯಿರುವ ನಿವೇಶನ ನೋಡಿ ಕೊಂಡು ಚರ್ಚ್‌ಗೆ ಬರುತ್ತಿದ್ದಳು. ಯುವತಿಯನ್ನು ಕಂಡ ಆರೋಪಿಗಳು ತಮ್ಮ ಬೈಕ್‌ನಲ್ಲಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಅವರ ಗಮನಕ್ಕೆ ಬಾರದಂತೆ ಯುವತಿ ಚರ್ಚ್ ಬಳಿ ಬಂದಾಗ ಆಕೆಯ ಬಳಿ ಬಂದ ಆರೋಪಿಗಳು, “ನಮ್ಮ ಏರಿಯಾದವರಾದ ನಿಮಗೆ ಡ್ರಾಪ್ ಕೊಡುತ್ತೇವೆ. ಬನ್ನಿ’ ಎಂದು ಬಲವಂತವಾಗಿ ಬೈಕ್‌ನಲ್ಲಿ ಕೂರಿಸಿಕೊಂಡಿದ್ದರು. ಮುಖ ಪರಿಚಯವಿದ್ದ ಹಿನ್ನೆಲೆಯಲ್ಲಿ ಯುವತಿಯೂ ಅವರ ಜತೆ ವಿರೋಧ ವ್ಯಕ್ತಪಡಿಸದೇ ತೆರಳಿದ್ದಳು. ನಂತರ ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಊಟ ಮಾಡಿಸಿದ್ದರು. ಇದಾದ ಬಳಿಕ ಏಕಾಏಕಿ ಬಲವಂತವಾಗಿ ಮದ್ಯಪಾನ ಮಾಡಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.
ಇದನ್ನೂ ಓದಿ: ಉ.ಭಾರತದಲ್ಲಿ ಕದ್ದ ಕಾರು ಬೆಂಗಳೂರಲ್ಲಿ ಮಾರಾಟ
ಆತಂಕಗೊಂಡ ಸಂತ್ರಸ್ತೆ ಬೆಳಗಿನವರೆಗೂ ಪೊದೆಯೊಂದರಲ್ಲಿ ಅವಿತು ಕುಳಿತು, ಬೆಳಗಿನ ಜಾವ ಕೃತ್ಯ ನಡೆದ ಸ್ಥಳದ ಸಮೀಪದಲ್ಲಿದ್ದ ಮನೆಯವರ ಸಹಾಯ ಪಡೆದು ಬಟ್ಟೆ ಧರಿಸಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.