Advertisement

ಸ್ಥಳ ಮಹಜರಿಗೆ ಹೋದಾಗ ಪೊಲೀಸ್‌ ಸಿಬ್ಬಂದಿ ತಳ್ಳಿ, ಬಾಲ್ಕನಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ

10:50 AM Feb 27, 2021 | Team Udayavani |

ಬೆಂಗಳೂರು: ಬಿಡಿಎನಲ್ಲಿ ನಿವೇಶನ ಕೊಡಿಸುವುದಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಸ್ಥಳ ಮಹಜರಿಗೆ ಆತನ ಮನೆಗೆ ಕರೆದೊಯ್ದಾಗ ಮನೆಯ ಸದಸ್ಯರನ್ನು ಕಂಡು ಭಾವುಕನಾಗಿ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ವಿದ್ಯಾರಣ್ಯಪುರ ನಿವಾಸಿ ಸಿದ್ದಲಿಂಗಸ್ವಾಮಿ (63) ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಶ್ರೀನಿವಾಸ ನಗರದ ನಿವಾಸಿ ಪಾನಿಪುರಿ ವ್ಯಾಪಾರಿ ನಾಗರಾಜ್‌ ಮತ್ತು ಅವರ ಸಂಬಂಧಿಕರಿಗೆ ತಾನು ಬಿಡಿಎನಲ್ಲಿ ನೌಕರನಾಗಿದ್ದೇನೆ. ಬಿಡಿಎ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಿವೇಶನ ಕೊಡಿಸುತ್ತೇನೆ. ಅಲ್ಲದೆ, ಮರು ಹಂಚಿಕೆ ಮಾಡಿಸಿಕೊಡುತ್ತೇನೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ 13.29 ಲಕ್ಷ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ನಾಗರಾಜ್‌ 2020ರ ಡಿಸೆಂಬರ್‌ನಲ್ಲಿ ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಅನಂತರ ನಿರಂತರ ತನಿಖೆ ನಡೆಸಿ ಫೆ.24ರಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದರು. ಫೆ.25ರಂದು ಕೋರ್ಟ್‌ಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪಿ ಕೆಲವೊಂದು ದಾಖಲೆಗಳನ್ನು ವಿದ್ಯಾರಣ್ಯಪುರದ ಖಾಸಗಿ ಅಪಾರ್ಟ್‌ಮೆಂಟ್‌ನ ಬಾಡಿಗೆ ಫ್ಲ್ಯಾಟ್‌ನಲ್ಲಿ ಇಟ್ಟಿರುವುದಾಗಿ ಹೇಳಿದ್ದ. ಈ ಹಿನ್ನೆಲೆ ಯಲ್ಲಿ ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಆತನ ಮನೆಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ: ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಮನೆಗೆ ಕರೆ ದೊಯ್ಯುತ್ತಿದ್ದಂತೆ ಪತ್ನಿ ಮತ್ತು ಮಗಳನ್ನು ಕಂಡ ಸಿದ್ದಲಿಂಗಸ್ವಾಮಿ ಭಾವಕನಾಗಿದ್ದಾನೆ. ಕುಟುಂಬ ಸದಸ್ಯರು ಕೂಡ ಭಾವುಕರಾಗಿದ್ದಾರೆ. ಬಳಿಕ ಕೋಣೆಯಲ್ಲಿ ಇಟ್ಟಿದ್ದ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾನೆ. ಅನಂತರ ಅಡುಗೆ ಮನೆಯ ಕೆಲವೆಡೆ ದಾಖಲೆ ಇಟ್ಟಿದ್ದೇನೆ. ತೆಗೆದುಕೊಂಡು ಬರುತ್ತೇನೆ ಎಂದು ಹೋಗಿದ್ದಾನೆ. ಜತೆಗೆ ಒಬ್ಬ ಕಾನ್‌ಸ್ಟೇಬಲ್‌ ಕೂಡ ಹೋಗಿದ್ದಾರೆ. ಸಿಬ್ಬಂದಿ ತಳ್ಳಿ ಜಿಗಿದ ಸಿದ್ದಲಿಂಗಸ್ವಾಮಿ: ಅಡುಗೆ ಮನೆಗೆ ಹೋಗುತ್ತಿದ್ದಂತೆ ಆರೋಪಿ, ತನ್ನೊಂದಿಗೆ ಬಂದಿದ್ದ ಕಾನ್‌ಸ್ಟೇಬಲ್‌ನನ್ನು ತಳ್ಳಿ ಹಿಂಬದಿಯ ಬಾಗಿಲು ತೆರೆದು ಎರಡನೇ ಮಹಡಿಯ ಬಾಲ್ಕನಿಯಿಂದ ಜಿಗಿದಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಆತ ಸಾವನ್ನಪ್ಪಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next