ಬೆಂಗಳೂರು: ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಪತಿಯೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಚಿಕ್ಕಮಗಳೂರು ತರೀಕೆರೆ ತಾಲೂಕಿನ ಹೊಸಹಳ್ಳಿ ತಾಂಡ ನಿವಾಸಿ ಶಿವಕುಮಾರ್ (26) ಹತ್ಯೆಯಾದ ವ್ಯಕ್ತಿ. ಈ ಸಂಬಂಧ ನೆಲಮಂಗಲದ ನಿವಾಸಿ ಭರತ್ ಕುಮಾರ್ (31) ಬಂಧಿತ.
ಎಂಟು ವರ್ಷಗಳ ಹಿಂದೆ ಆರೋಪಿ ಭರತ್ ಮತ್ತು ವಿನುತಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದು, ಇಬ್ಬರು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ಮೂರು ವರ್ಷಗಳ ಹಿಂದೆ ವಿನುತಾಳ ಊರಿನವನಾದ ಶಿವಕುಮಾರ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಆಗ 2-3 ದಿನ ವಿನುತಾ ಮನೆಯಲ್ಲೇ ಉಳಿದುಕೊಂಡಿದ್ದ. ಈ ವೇಳೆ ವಿನುತಾ ಜತೆ ಶಿವಕುಮಾರ್ ಹೆಚ್ಚು ಸಲುಗೆಯಿಂದ ಇದ್ದ. ಅದನ್ನು ಕಂಡ ಭರತ್ ಈತನೊಂದಿಗೆ ಜಗಳ ಮಾಡಿದ್ದ. ಅದರಿಂದ ಆಕ್ರೋಶಗೊಂಡ ಶಿವಕುಮಾರ್ ವಿನುತಾ ಮನೆಯಿಂದ ಹೊರ ಹೋಗಿದ್ದ. ಈ ಘಟನೆಯಿಂದ ನೊಂದ ವಿನುತಾ ಕೂಡ ಪತಿಯೊಂದಿಗೆ ಜಗಳ ಮಾಡಿಕೊಂಡು ಆಂದ್ರಹಳ್ಳಿಯ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಬಳಿಕವೂ ಶಿವಕುಮಾರ್ ಆಗಾಗ ವಿನುತಾ ಮನೆಗೆ ಬಂದು ಹೋಗುತ್ತಿದ್ದ. ಬುಧವಾರ ರಾತ್ರಿ ಶಿವಕುಮಾರ್ ಕರೆ ಮಾಡಿ ಮನೆಗೆ ಬರುತ್ತೇನೆ ಎಂದು ವಿನುತಾಗೆ ತಿಳಿಸಿದ್ದ. ಹೀಗಾಗಿ ವಿನುತಾ ಮನೆಯ ಬಾಗಿಲು ಚೀಲಕ ಹಾಕಿಕೊಂಡು ಚಿಕನ್ ತರಲು ಹೋಗಿದ್ದಳು. ಅದೇ ವೇಳೆ ಸ್ನೇಹಿತ ಅಭಿ ಎಂಬಾತನನ್ನು ಅಂದ್ರಹಳ್ಳಿಗೆ ಬೈಕ್‌ನಲ್ಲಿ ಡ್ರಾಪ್ ಮಾಡಲು ಬಂದಿದ್ದ ಭರತ್, ಪತ್ನಿ ಚಿಕನ್ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಮಂಚದಡಿ ಅಡಗಿಕುಳಿತ ಪತಿ:
ಪತ್ನಿ ವಿನುತಾಗೆ ಗೊತ್ತಾಗದಂತೆ ಆಕೆಯ ಮನೆಗೆ ಹೋಗಿ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ. ಶಿವಕುಮಾರ್ ರಾತ್ರಿ 10.30ಕ್ಕೆ ವಿನುತಾ ಮನೆಗೆ ಬಂದಿದ್ದು, ಊಟ ಮುಗಿಸಿ ಇಬ್ಬರೂ ಜತೆಯಾಗಿ ಮಲಗಿದ್ದರು. ಈ ನಡುವೆ ಮುಂಜಾನೆ 4 ಗಂಟಗೆ ವಿನುತಾ ಶೌಚಗೃಹಕ್ಕೆ ಹೋಗಿದ್ದಾಳೆ. ಈ ವೇಳೆ ಮಂಚದಡಿಯಿಂದ ಹೊರಬಂದ ಭರತ್, ಪತ್ನಿಯನ್ನು ಶೌಚಗೃಹದ ಚಿಲಕ ಹಾಕಿ ಕೂಡಿಹಾಕಿದ್ದಾನೆ. ಬಳಿಕ ಶಿವಕುಮಾರ್‌ನ ಕತ್ತು ಹಿಸುಕಿ ತನ್ನ ಬಳಿ ಇಟ್ಟುಕೊಂಡಿದ್ದ ಚಾಕುಯಿಂದ ಆತನ ಹೊಟ್ಟೆಗೆ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ನಂತರ ಆತನೇ ಶೌಚಗೃಹದ ಬಾಗಿಲು ತೆರೆದಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಕುಮಾರ್‌ನನ್ನು ಕಂಡು ಆತಂಕಗೊಂಡ ವಿನುತಾ ಜೋರಾಗಿ ಕೂಗಿಕೊಂಡಿದ್ದಾಳೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಭರತ್‌ನನ್ನು ಬಂಧಿಸಿದ್ದಾರೆ.
ತಿಂಗಳ ಹಿಂದೆಯೇ ಸಂಚು: ಪತ್ನಿ ಮತ್ತು ಆಕೆಯ ಪ್ರಿಯಕರನ ಮೇಲೆ ಆಕ್ರೋಶಗೊಂಡಿದ್ದ ಭರತ್, ಒಂದು ತಿಂಗಳ ಹಿಂದೆಯೇ ಹತ್ಯೆಗೆ ಸಂಚು ರೂಪಿಸಿದ್ದ. ಅದಕ್ಕಾಗಿ ಆನ್‌ಲೈನ್ ಮೂಲಕ ಸ್ಪ್ರಿಂಗ್ ಚಾಕುವನ್ನು ಖರೀದಿಸಿದ್ದಾನೆ. ಕಾಕತಾಳೀಯ ಎಂಬಂತೆ ಅಂದ್ರಹಳ್ಳಿಗೆ ಬಂದ ಭರತ್ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.