Advertisement

ಅತಂತ್ರ ಸ್ಥಿತಿಯಲ್ಲೂ ನಿಲ್ಲದ ನೇಮಕಾತಿ

01:21 AM Jul 20, 2019 | Lakshmi GovindaRaj |

ಬೆಂಗಳೂರು: ಮೈತ್ರಿ ಸರ್ಕಾರದ ಅಳಿವು ಉಳಿವಿನ ನಡುವೆಯೂ ಅರಣ್ಯ ಇಲಾಖೆಯಲ್ಲಿ ವರ್ಗಾವಣೆ ಸುಗ್ಗಿಗೇನೂ ಅಭ್ಯಂತರವಿಲ್ಲ. ಅರಣ್ಯ ಸಚಿವರ ನೇಮಕಾತಿ ಪಟ್ಟಿಯನ್ನು ಬದಿಗಿಟ್ಟು ಮುಖ್ಯಮಂತ್ರಿ ಆದೇಶದ ಅನ್ವಯ ಗುರುವಾರ ರಾತ್ರಿ 29 ಗೌರವ ವನ್ಯಜೀವಿ ಪರಿಪಾಲಕರ ನೇಮಕಾತಿ ನಡೆದಿದೆ.

Advertisement

ಸರ್ಕಾರ ಸ್ಥಿರತೆ ಕಳೆದುಕೊಂಡ ಬೆನ್ನಲ್ಲೇ ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಗಳಲ್ಲಿ ವರ್ಗಾವಣೆಗಳ ಸುಗ್ಗಿ ಪ್ರಾರಂಭವಾಗಿತ್ತು. ಇದರ ಬೆನ್ನಲ್ಲಿಯೇ ಅರಣ್ಯ ಇಲಾಖೆಯಿಂದ ಜಿಲ್ಲಾ ವನ್ಯಜೀವಿ ಪರಿಪಾಲಕರ ನೇಮಕಾತಿ ನಡೆದಿದೆ. ಕಳೆದ ಕೆಲ ತಿಂಗಳುಗಳಿಂದ ಬಾಕಿ ಇದ್ದ ಗೌರವ ವನ್ಯಜೀವಿ ಪರಿಪಾಲಕ ಹುದ್ದೆಯನ್ನು ಎರಡು ದಿನಗಳ ಹಿಂದೆ ಏಕಾಏಕಿ ತುಂಬಲಾಗಿದೆ.

ಗೌರವ ವನ್ಯಜೀವಿ ಪರಿಪಾಲಕರು ಜಿಲ್ಲಾ ಅರಣ್ಯ ಅಧಿಕಾರಿಗಳಷ್ಟೇ ಅಧಿಕಾರವನ್ನು ಹೊಂದಿರುತ್ತಾರೆ. ಯಾವ ವೇಳೆಯಲ್ಲಾದರೂ ಇವರು ಮೀಸಲು ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಬಹುದು. ಅಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಗೌರವ ಪರಿಪಾಲಕರ ಅನುಮತಿ ಅನಿವಾರ್ಯವಾಗುತ್ತದೆ.

ಇದಲ್ಲದೇ ಯಾವುದೇ ವಾಹನದಲ್ಲಿ ವನ್ಯಜೀವಿಗಳ ಸಾಗಾಟದ ಸುಳಿವು ಸಿಕ್ಕರೂ, ಅಂತಹ ವಾಹನಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ಇವರು ಹೊಂದಿರುತ್ತಾರೆ. ಸದ್ಯ ಇವರನ್ನು 2 ವರ್ಷಗಳ ಕಾಲ ನೇಮಕಾತಿ ಮಾಡಲಾಗಿದ್ದು, ಎರಡು ವರ್ಷಗಳ ಅವಧಿ ಪೂರೈಸಿದ ಬಳಿಕವಷ್ಟೆ ಬದಲಾಯಿಸಲು ಸಾಧ್ಯ.

ಇವರ ನೇಮಕಾತಿಯನ್ನು ರಾಜ್ಯ ವನ್ಯಜೀವಿ ಪರಿಪಾಲನೆ ಸಮಿತಿಯ ಅಧ್ಯಕ್ಷರು ಮಾಡುತ್ತಾರೆ. ಈ ಸಮಿತಿಗೆ ರಾಜ್ಯಗಳಲ್ಲಿ ಆಯಾ ರಾಜ್ಯದ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಇನ್ನು ಆಯಾ ರಾಜ್ಯಗಳ ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಹಾಗಾಗಿ ಗೌರವ ವನ್ಯಜೀವಿ ಪರಿಪಾಲಕರ ನೇಮಕಾತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಎರಡು ದಿನಗಳ ಹಿಂದೆಯಷ್ಟೆ ಮಾಡಲಾಗಿದ್ದು, ನೇಮಕಾತಿ ಆದೇಶ ಹೊರಡಿಸಲಾಗಿದೆ.

Advertisement

ಈ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ. ರಾಜಕಾರಣಿಗಳ ಶಿಫಾರಸ್ಸಿನ ಆಧಾರದ ಮೇಲೆ ನೇಮಕಾತಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಗೌರವ ಪರಿಪಾಲಕರ ಹುದ್ದೆಗೆ ದಕ್ಷ ಮತ್ತು ವನ್ಯಜೀವಿ ಕಳಕಳಿ ಹೊಂದಿರುವ ಅನುಭವಿ ಪರಿಪಾಲಕರನ್ನು ಹುಡುಕುವ ಹಂತದಲ್ಲಿದ್ದ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, 17 ಜನರ ಪಟ್ಟಿಯನ್ನು ಸಿದ್ದಪಡಿಸಿದ್ದರು ಎನ್ನಲಾಗಿದೆ. ಆದರೆ, ಸಚಿವರು ಸಿದ್ದಪಡಿಸಿದ್ದ ಪಟ್ಟಿಯನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಸಿಎಂ ಕುಮಾರಸ್ವಾಮಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಇಲಾಖಾ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಗೌರವ ವನ್ಯಜೀವಿ ಪರಿಪಾಲಕರ ಅಧಿಕಾರ ವ್ಯಾಪ್ತಿ
-ವನ್ಯಜೀವಿಗಳಿಗೆ ಹಾನಿ ಮಾಡಿದವರ ವಿರುದ್ದ ಕ್ರಮ ಜರುಗಿಸಬಹುದು.
-ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬಹುದು.
-ಆಯಾ ಜಿಲ್ಲೆಗಳ ಸಹ ಅರಣ್ಯ ಅಧಿಕಾರಿ ಸಮನಾದ ಅಧಿಕಾರಗಳನ್ನು ಹೊಂದಿರುತ್ತಾರೆ.

ಗೌರವ ವನ್ಯಜೀವಿ ಪರಿಪಾಲಕರ ನೇಮಕಾತಿ ಮಾನದಂಡಗಳು
-ವನ್ಯಜೀವಿ ರಕ್ಷಣೆ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
-ಅಭ್ಯರ್ಥಿ ವಿರುದ್ದ ಯಾವುದೇ ಕ್ರಿಮಿನಲ್‌ ಆರೋಪಗಳಿರಬಾರದು.
-ನೇಮಕಾತಿಗೆ ಮುನ್ನ ಮುಖ್ಯ ವನ್ಯಜೀವಿ ರಕ್ಷಕ ಅಧಿಕಾರಿ ಅಭ್ಯರ್ಥಿ ಹಿನ್ನೆಲೆ ಪರಿಶೀಲಿಸಬೇಕು.
-ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರಬಾರದು.

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next