Advertisement

ಎಡೆಬಿಡದೆ ಸುರಿದ ಮಳೆ; ವಿವಿಧೆಡೆ ಮನೆಗಳಿಗೆ ಹಾನಿ

01:46 AM Jun 15, 2020 | Sriram |

ಮಹಾನಗರ: ಕರಾವಳಿಯಲ್ಲಿ ಮುಂಗಾರು ಮಳೆ ವೇಗ ಪಡೆಯುತ್ತಿದ್ದು, ರವಿವಾರ ಮಂಗಳೂರು ಸುತ್ತಮುತ್ತಲಿನಲ್ಲಿ ಉತ್ತಮ ಮಳೆಯಾಗಿದೆ. ಜತೆಗೆ ವಿವಿಧೆಡೆ ಹಾನಿಯೂ ಸಂಭವಿಸಿದೆ.

Advertisement

ಮುಂಜಾನೆಯೇ ಆರಂಭಗೊಂಡ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಕೆಲವೆಡೆ ಮಳೆ ನೀರು ಮನೆಗೆ ನುಗ್ಗಿದರೆ, ಕೊಡಕಲ್‌ ಹಾಗೂ ಕಾವೂರಿನಲ್ಲಿ ಮನೆಗೆ ಹಾನಿ ಸಂಭವಿಸಿದೆ. ಪಾಂಡೇಶ್ವರದಲ್ಲಿ ಮರ ಬಿದ್ದಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗದೆಲ್ಲೆಡೆ ರವಿವಾರ ಉತ್ತಮ ಮಳೆಯಾಗಿದ್ದು, ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಪಂಪ್‌ವೆಲ್‌, ಜ್ಯೋತಿ, ಕೊಟ್ಟಾರಚೌಕಿ ಮೊದಲಾದೆಡೆ ಮಳೆನೀರು ರಸ್ತೆಯಲ್ಲಿಯೇ ಹರಿದು ಸಂಚಾರ ಬಾಧಿತವಾಯಿತು.ಪಡೀಲ್‌ ಕೊಡಕಲ್‌ನ ಸುಗಂಧಿ ಅವರ ಮನೆ ಮೇಲೆ ಪಕ್ಕದ ತಡೆ ಗೋಡೆ ಬಿದ್ದು ಹಾನಿ ಸಂಭವಿಸಿದೆ. ಮನೆ ಮಂದಿ ಅಪಾಯವಿಲ್ಲದೆ ಪಾರಾಗಿದ್ದಾರೆ. ಕಾವೂರಿನಲ್ಲಿಯೂ ಮನೆಗೆ ಹಾನಿಯಾಗಿದೆ. ಸೂಟರ್‌ಪೇಟೆಯಲ್ಲಿ ಮನೆಯೊಂದಕ್ಕೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಪಾಂಡೇಶ್ವರ ದೇವಸ್ಥಾನ‌ ಸಮೀಪ ಮಳೆಯ ಪರಿಣಾಮ ಮರವೊಂದು ಬಿದ್ದಿದೆ

ಸಹಾಯವಾಣಿಗಳ ಅಸಹಾಯಕತೆ!
ಮಳೆಗಾಲದ ಸಂದರ್ಭ ಯಾವುದೇ ಸಮಸ್ಯೆಗಳಿದ್ದರೆ 1077 ನಂಬರಿಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆದರೆ ಆ ಸಂಖ್ಯೆಗೆ ಕರೆ ಮಾಡಿದರೆ ಮಳೆಗಾಲದ ವಿಚಾರ ನಮಗೆ ಬರುವುದಿಲ್ಲ. ನೀವು ಜಿಲ್ಲಾಧಿಕಾರಿ ಕಚೇರಿ ನಂಬರಿಗೆ ಕರೆ ಮಾಡಿ ಎನ್ನುತ್ತಾರೆ. ರವಿವಾರ ಜಿಲ್ಲಾಧಿಕಾರಿ ಕಚೇರಿ ನಂಬರಿಗೆ ಕರೆ ಮಾಡಿದರೆ ಸ್ವೀಕರಿಸುವವರು ಯಾರೂ ಇರಲಿಲ್ಲ. ಈ ಮಧ್ಯೆ ಮಂಗಳೂರು ಪಾಲಿಕೆ ವ್ಯಾಪ್ತಿಯ ಮಳೆಗಾಲದ ಸಮಸ್ಯೆ ಇತ್ಯರ್ಥಕ್ಕೆ 2220306 ನಂಬರಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಪಾಲಿಕೆ ಹಲವು ಬಾರಿ ತಿಳಿಸಿದೆ. ಆದರೆ ಆ ನಂಬರಿನಲ್ಲೂ ಕರೆ ಸ್ವೀಕರಿಸುವವರು ಇಲ್ಲ. ಇದ್ದೂ ಇಲ್ಲದಂತೆ ಪಾಲಿಕೆ ವರ್ತಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕೊಣಾಜೆ, ಅಂಬ್ಲಿಮೊಗರು: 3 ಮನೆಗಳಿಗೆ ಹಾನಿ
ಉಳ್ಳಾಲ: ಭಾರೀ ಮಳೆಯಿಂದಾಗಿ ಕೊಣಾಜೆ ಗ್ರಾಮ ಪಂಚಾಯತ್‌ ಮತ್ತು ಅಂಬ್ಲಿಮೊಗರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತಡೆಗೋಡೆ ಕುಸಿದು ಮೂರು ಮನೆಗಳಿಗೆ ಹಾನಿಯಾಗಿದೆ. ನೀರು ಹರಿದು ಹೋಗಲು ಚರಂಡಿ ಸಮಸ್ಯೆಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನೀರು ತುಂಬಿ ವಾಹನ ಚಾಲಕರು ಪರದಾಡುವಂತಾಯಿತು.

ಕೊಣಾಜೆ ಗ್ರಾಮದ ಪಟ್ಟೋರಿಯಲ್ಲಿ ಶಾಂತಪ್ಪ ಅವರಿಗೆ ಸೇರಿದ ಬಾಡಿಗೆ ಮನೆಯ ಮೇಲೆ ಪಕ್ಕದ ತಡೆಗೋಡೆ ಬಿದ್ದು ಮೆಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಅಲ್ಲಿ ವಾಸವಿರುವ ತಿರುಮಲ ಸ್ವಾಮಿ ಅವರ ಕುಟುಂಬದವರು ತತ್‌ಕ್ಷಣ ಮನೆಯಿಂದ ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಅತಂತ್ರರಾಗಿರುವ ಅವರ ಕುಟುಂಬಕ್ಕೆ ಅಸೈಗೋಳಿಯ ಪ್ರಕಾಶ್‌ ಶೆಟ್ಟಿ ಅವರು ಬೇರೆ ಕಡೆ ಆಶ್ರಯ ಕಲ್ಪಿಸಿದ್ದಾರೆ.

Advertisement

ಕೊಣಾಜೆ ಪುಳಿಂಚಾಡಿಯ ಆಂಟೋನಿ ವಿನ್ಸೆಂಟ್‌ ಲೋಬೋ ಅವರ ಮನೆಗೆ ಪಕ್ಕದ ಮನೆಯ ತಡೆಗೋಡೆ ಕುಸಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟು ಮನೆಗೆ ಅಪಾರ ಹಾನಿ ಸಂಭವಿಸಿದೆ. ಸ್ಥಳ್ಕಕೆ ಗ್ರಾಮ ಕರಣಿಕ ಪ್ರಸಾದ್‌, ಪಂಚಾಯತ್‌ ಅಧ್ಯಕ್ಷ ನಝರ್‌ ಷಾ ಪಟ್ಟೋರಿ, ಸದಸ್ಯರಾದ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂಬ್ಲಿಮೊಗರು ಗ್ರಾ.ಪಂ. ವ್ಯಾಪ್ತಿಯ ತಿಲಕ್‌ ನಗರದಲ್ಲಿ ರಝೀಯ ಅವರ ಮನೆಗೆ ಪಕ್ಕದ ಮನೆಯ ತಡೆಗೋಡೆ ಬಿದ್ದು ಸುಮಾರು 6 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಹನೀಫ್‌ ಅವರ ಮನೆಯ ತಡೆಗೋಡೆ, ಪರ್ಗಾಂವ್‌ ರಸ್ತೆಯ ಹಮೀದ್‌ ಮತ್ತು ಗುಲಾಬಿ ಅವರಿಗೆ ಸೇರಿದ ತಡೆಗೋಡೆ ಕುಸಿದಿದೆ. ಈ ವ್ಯಾಪ್ತಿಯಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಂಬ್ಲಿಮೊಗರು ಗ್ರಾ.ಪಂ. ಅಧ್ಯಕ್ಷ ರಫೀಕ್‌ ಅಂಬ್ಲಿಮೊಗರು, ಸ್ಥಳೀಯ ಸದಸ್ಯೆ ಧನಲಕ್ಷ್ಮೀ ಭಟ್‌, ಗ್ರಾಮ ಸಹಾಯಕ ನಿತಿನ್‌ ಭೇಟಿ ನೀಡಿದರು.

ಕಡಲ್ಕೊರೆತ
ಇದೇ ವೇಳೆ ಉಳ್ಳಾಲದ ವಿವಿಧೆಡೆ, ಸೋಮೇಶ್ವರ ಉಚ್ಚಿಲದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದೆ. ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next