ಬೆಂಗಳೂರು: ಕೃಷಿ ಚಟುವಟಿಕೆಗಳಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿ ಹೆಚ್ಚಿನ ಇಳುವರಿ ಪಡೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲು ಯೋಜನೆ ರೂಪಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಲು ಗುರುವಾರ ಆಯೋಜಿಸಿದ್ದ ಕಾರ್ಯಾಗರ ಉದ್ಘಾಟಿಸಿ ಮಾತನಾಡಿದ ಅವರು, “ಪ್ರೋತ್ಸಾಹಧನ ನೀಡುವ ನೂತನ ಕಾರ್ಯಕ್ರಮ ಈ ವರ್ಷದಿಂದಲೇ ಆರಂಭ ಮಾಡಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ 1 ಕೋಟಿ ರೂಪಾಯಿ ಮೀಸಲಿಡಲಾಗಿದೆ,’ ಎಂದು ತಿಳಿಸಿದರು.
“ಮುಂಗಾರು ಅನಿಶ್ಚಿತತೆಯಿಂದ ಕೂಡಿರುವುದರಿಂದ ರೈತರಿಗೆ ನೀರಿನ ಮಿತ ಬಳಕೆ ಕುರಿತು ಕೃಷಿ ಅಧಿಕಾರಿಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರೈತರಿಗೆ ಇಷ್ಟ ಇಲ್ಲದಿದ್ದರೂ ನೀರಿನ ಮಿತ ಬಳಕೆ ಮತ್ತು ಕಡಿಮೆ ನೀರಿನಿಂದ ಬೆಳೆಯುವ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವರಿಕೆ ಮಾಡಿಕೊಡಬೇಕು,’ ಎಂದು ಹೇಳಿದರು.
“ಈ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಆಚರಿಸಲಾಗುತ್ತಿದ್ದು, ರಾಗಿ, ಜೋಳ, ಸಜ್ಜೆ ಸೇರಿದಂತೆ ಸಿರಿ ಧಾನ್ಯ ಬೆಳೆಯಲು ರೈತರಿಗೆ ಪ್ರೇರಣೆ ನೀಡಬೇಕು. ರೈತರು ಸಿರಿಧಾನ್ಯ ಬೆಳೆದರೆ, ಮಾರುಕಟ್ಟೆಯ ಅವಕಾಶವನ್ನು ಸರ್ಕಾರ ಒದಗಿಸಿ ಕೊಡಲಿದೆ. ಈ ವರ್ಷ ರಾಗಿ, ಜೋಳ, ಸಜ್ಜೆ ಬಿತ್ತನೆಯಲ್ಲಿ ಶೇಕಡಾ 20 ರಷ್ಟು ಹೆಚ್ಚಳವಾಗಬೇಕು,’ ಎಂದು ಹೇಳಿದರು.
“ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಕಡಿತವಾಗಿದೆ. ಇದರಿಂದ ಅನೇಕ ಯೋಜನೆಗಳಿಗೆ ಹೊಡೆತ ಬಿದ್ದಿದೆ. ಮೊದಲು ಕೇಂದ್ರ ಸರ್ಕಾರ 90ಃ10 ರ ಅನುಪಾತದಲ್ಲಿ ಹಣ ಬಿಡುಗಡೆ ಮಾಡುತ್ತಿತ್ತು. ಈಗ 60ಃ40 ಅನುಪಾತಕ್ಕೆ ಬಂದಿದೆ. ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ,’ಎಂದರು.
ಬೀಜ ನಿಗಮದೊಂದಿಗೆ ಒಪ್ಪಂದ
ರೈತರಿಗೆ ಸುಧಾರಿತ ಹಾಗೂ ಗುಣಮಟ್ಟದ ಬೀಜ ನೀಡಲು ರಾಜ್ಯ ಬೀಜ ನಿಗಮದ ಜೊತೆಗೆ ಕೃಷಿ ಇಲಾಖೆ ಒಪ್ಪಂದ ಮಾಡಿಕೊಂ ಡಿದೆ. ಖಾಸಗಿ ಕಂಪನಿಗಳು ರೈತರಿಂದ ಬಿತ್ತನೆ ಬೀಜ ಪಡೆದು ವಾಪಸ್ ರೈತರಿಗೆ ಮೂರು ಪಟ್ಟು ದರ ಹೆಚ್ಚಳ ಮಾಡಿ ಮಾರಾಟ ಮಾಡು ತ್ತಿರುವುದರಿಂದ ರೈತರು ಹಾಗೂ ಇಲಾಖೆಗೆ ನಷ್ಟವಾಗುತ್ತಿದೆ. ಹೀಗಾಗಿ ಬೀಜ ನಿಗಮವೇ ಹೆಚ್ಚಿನ ಪ್ರಮಾಣದಲ್ಲಿ ಬೀಜ ಉತ್ಪತ್ತಿ ಮಾಡಿದರೆ, ರೈತರಿಗೆ ಕಡಿಮೆ ದರದಲ್ಲಿ ಬೀಜ ದೊರೆಯುತ್ತದೆ ಎಂದು ಅವರು ಹೇಳಿದರು.