Advertisement

ಯುನಿಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ

02:53 PM Aug 22, 2022 | Team Udayavani |

ಧಾರವಾಡ: ಮಾನಸಿಕ ಸಂತೋಷವೇ ಸುಖದ ಮೂಲವಾಗಿದ್ದು, ಮನುಷ್ಯ ಆರೋಗ್ಯದಿಂದ ಇದ್ದಾಗ ಮಾತ್ರ ಜಗತ್ತಿನ ಎಲ್ಲಾ ಸುಖಗಳನ್ನು ಅನುಭವಿಸಲು ಸಾಧ್ಯ ಎಂದು ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಯುನಿಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರೋಗ ರುಜಿನಗಳು ಮನುಷ್ಯನಿಗೆ ಸಹಜ. ರೋಗ ಬಂದ ನಂತರ ವೈದ್ಯರನ್ನು ಕಾಣುವುದು ಇದ್ದೇ ಇರುತ್ತದೆ. ಆದರೆ ರೋಗವೇ ಬರದಂತೆ ಬದುಕು ನಡೆಸುವುದನ್ನು ಇಂದು ಎಲ್ಲರೂ ಕಲಿಯಬೇಕು. ಮುನ್ನೆಚ್ಚರಿಕೆಯಿಂದಲೇ ಆರೋಗ್ಯ ರಕ್ಷಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು. ಅಧಿಕಾರ, ಸಂಪತ್ತು ಮತ್ತು ಪ್ರಸಿದ್ಧಿಯಿಂದ ಬದುಕು ಸಂಪೂರ್ಣವಾಗದು. ನಿರೋಗಿ ಕಾಯದಿಂದಲೇ ನಿಜವಾದ ಸುಖ ಸಾಧ್ಯ. ಋಷಿಮುನಿಗಳು ಮತ್ತು ಶರಣರು ಬಹಳ ಹಿಂದೆಯೇ ಆರೋಗ್ಯದ ಪರಿಕಲ್ಪನೆ ಕೊಟ್ಟಿದ್ದಾರೆ. ಮನಸ್ಸಿನಿಂದ ಸದೃಢ ಮತ್ತು ದೈಹಿಕವಾಗಿ ಕಟ್ಟುಮಸ್ತಾದವನು ಮಾತ್ರ ಆರೋಗ್ಯದಿಂದ ಇರಲು ಸಾಧ್ಯ ಎಂದರು. ಜಿಮ್‌ಗೆ ಹೋಗುವವರಿಗಿಂತಲೂ ಜಮೀನಿಗೆ ಹೋಗುವವರು ಹೆಚ್ಚು ಆರೋಗ್ಯದಿಂದ ಇದ್ದಾರೆ. ರೋಗಕ್ಕಿಂತ ಮುಖ್ಯವಾಗಿ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಬೇಕು. ವೈದ್ಯರು ರೋಗಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಕಾಯ ಸದೃಢವಾಗಿರಬೇಕು, ಮನಸ್ಸು ಪ್ರಸನ್ನವಾಗಿರಬೇಕು. ಹೃದಯ ದ್ವೇಷದಿಂದ ಮುಕ್ತವಾಗಿದ್ದಾಗ ಮಾತ್ರ ನಿಜವಾದ ಆರೋಗ್ಯ ಸಾಧ್ಯ ಎಂದು ಹೇಳಿದರು.

ಬಡವರ ಸೇವೆಯಾಗಲಿ: ಆಸ್ಪತ್ರೆಗಳು ಮತ್ತು ವೈದ್ಯರು ಬಡವರಿಗೆ ಉತ್ತಮ ಆರೋಗ್ಯ ಕಲ್ಪಿಸುವುದಕ್ಕೆ ಶ್ರಮಿಸಬೇಕು. ದೇಹಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿದರೆ ಸಾಲದು. ಮನಸ್ಸಿಗೂ ಇಂದು ಹೆಚ್ಚಿನ ಚಿಕಿತ್ಸೆಗಳು ಅಗತ್ಯವಿದೆ. ದೇಹ-ಮನಸ್ಸು ಸರಿಯಾಗಿರಲು ಸಜ್ಜನರ ಮಾತು ಮತ್ತು ಸರ್ಜನ್‌ರ ಮಾತುಗಳನ್ನು ಕೇಳಬೇಕು. ಯುಕ್ತವಾದ ಆಹಾರ, ನಿದ್ಧೆ ಮತ್ತು ಮನಸ್ಸಿನಿಂದ ಮಾತ್ರ ಆರೋಗ್ಯ ಸಾಧ್ಯ. ದುಡಿದು ಉಣ್ಣಬೇಕು. ಕಾಯಕದ ಬದುಕಿನಿಂದ ಮಾತ್ರ ನೆಮ್ಮದಿ ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಡಾ| ಶ್ರೀಕಂಠ ರಾಮನಗೌಡರ, ಧಾರವಾಡ ನಗರ ಇಂದಿಗೂ ಒಂದು ಹಳ್ಳಿಯಂತೆ ಇದೆ. ಇಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಾವೆಲ್ಲರೂ ಒಟ್ಟಾಗಿ ಯುನಿಟಿ ಆಸ್ಪತ್ರೆ ಆರಂಭಿಸಿದ್ದೇವೆ. ಉತ್ತಮ ಸೇವೆ ಒದಗಿಸುವುದಕ್ಕೆ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಇದರಿಂದ ಧಾರವಾಡದಲ್ಲಿಯೇ ಸಕಲ ಸೌಲಭ್ಯಗಳು ಲಭ್ಯವಾಗಲಿವೆ ಎಂದರು.

Advertisement

ಡಾ| ಜ್ಯೋತಿಪ್ರಕಾಶ ಸುಲ್ತಾನಪುರಿ ಸ್ವಾಗತಿಸಿದರು. ಮಾಯಾರಾಮನ್‌ ನಿರೂಪಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಎನ್‌. ಎಚ್‌. ಕೋನರಡ್ಡಿ ಹಾಗೂ ಇಸ್ಮಾಯಿಲ್‌ ತಮಟಗಾರ ಹಾಜರಿದ್ದರು.

ಹಿರಿಯ ವೈದ್ಯರಾದ ಡಾ| ಎಸ್‌.ಆರ್‌. ರಾಮನಗೌಡರ, ಡಾ| ಸುಧೀರ ಜಂಭಗಿ, ಡಾ| ಆದಿತ್ಯ ಪಾಂಡುರಂಗಿ, ಡಾ| ಮೊಹಮ್ಮದ ಶೇಖ್‌, ಡಾ| ಪ್ರಕಾಶ ರಾಮನಗೌಡರ, ಡಾ| ಅಮೃತ ಮಹಾಬಲಶೆಟ್ಟಿ, ಡಾ| ನೀಲಕಂಠ ಪಾಟೀಲ, ಡಾ| ಜಗದೀಶ ನಾಯಕ, ಡಾ| ಅಮೃತ ಗಲಗಲಿ, ಡಾ| ಪ್ರೀತಮ್‌ ಹುರಕಡ್ಲಿ, ಡಾ| ನವೀನ ಮಂಕಣಿ, ಡಾ| ಬಸವರಾಜ ಬಣಕಾರ ಸೇರಿದಂತೆ ನಗರದ ಹಿರಿಯ ವೈದ್ಯರು ಇದ್ದರು.

ಆಸ್ಪತ್ರೆಗೆ ಬರುವ ರೋಗಿಗಳ ಜೇಬಿನ ಮೇಲೆ ವೈದ್ಯರು ಕಣ್ಣು ಹಾಕಬಾರದು. ಜೇಬಿನ ಹಿಂದೆ ಇರುವ ಹೃದಯವನ್ನು ನೋಡಿ ಚಿಕಿತ್ಸೆ ನೀಡಬೇಕು. ಅಂದಾಗ ರೋಗಿಯೂ ಬದುಕುತ್ತಾನೆ, ವೈದ್ಯರೂ ಬದುಕುತ್ತಾರೆ. –ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ

ಉತ್ತಮ ಆರೋಗ್ಯಕ್ಕೆ ಆಸ್ಪತ್ರೆಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಧಾರವಾಡದಲ್ಲಿ ಸಕಲ ಸೌಲಭ್ಯಗಳನ್ನು ಒಂದೇ ಛತ್ರದಡಿ ತರುವ ಪ್ರಯತ್ನ ಇದಾಗಿದೆ. ಇದರಿಂದ ತೀವ್ರ ಅನಾರೋಗ್ಯದಿಂದ ಬಳಲುವ ರೋಗಿಗಳು ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಾಯವಾಗಲಿದೆ. –ಡಾ| ಆನಂದ ಪಾಂಡುರಂಗಿ ಹಿರಿಯ ಮನೋವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next