ಮದ್ದೂರು: ಪಿಎಸ್‌ಎಸ್‌ಕೆಯ ಸಾಮರ್ಥ್ಯವನ್ನು 5 ಸಾವಿರ ಟಿಸಿಡಿಗೆ ವಿಸ್ತರಣೆ ಮಾಡುವ ಭೂಮಿ ಪೂಜೆ ಹಾಗೂ ಬಾಯ್ಲರ್ ಪ್ರದೀಪನ ಉದ್ಘಾಟನಾ ಕಾರ್ಯಕ್ರಮವು ಆ.11ರ ಬೆಳಗ್ಗೆ 9 ಗಂಟೆಗೆ ಕಾರ್ಖಾನೆ ಆವರಣದಲ್ಲಿ ನಡೆಯಲಿದೆ ಎಂದು ನಿರಾಣಿ ಷುಗರ್ ಲಿ.ನ ಅಧ್ಯಕ್ಷ ಮತ್ತು ಶಾಸಕ ಮುರುಗೇಶ್ ನಿರಾಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಅರೆಯುವುದಕ್ಕೆ ಪಿಎಸ್‌ಎಸ್‌ಕೆಯನ್ನು ಸಜ್ಜುಗೊಳಿಸಲಾಗಿದೆ. ಸಕ್ಕರೆ ನಾಡಿನ ಪ್ರತಿಷ್ಠಿತ ಹಾಗೂ ಪುರಾತನ ಕಾರ್ಖಾನೆ 4 ವರ್ಷಗಳ ನಂತರ ಪುನಾರಂಭವಾಗು ತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಕೋವಿಡ್ - 19 ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ವೀರೇಂದ್ರ ಹೆಗಡೆ, ರವಿಶಂಕರ್ ಗುರೂಜಿ, ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್, ಸಚಿವರಾದ ಶಿವರಾಂ ಹೆಬ್ಟಾರ್, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಪ್ರಜ್ವಲ್ ರೇವಣ್ಣ, ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎರಡು ದಿನ ಪರೀಕ್ಷಾರ್ಥ: ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದ 30 ದಿನದಲ್ಲಿ ಪ್ರಾರಂಭ ಮಾಡುವುದಾಗಿ ಸರ್ಕಾರಕ್ಕೆ ತಿಳಿಸಿದ್ದೆ. ಆ ಸಂದರ್ಭದಲ್ಲಿ ಕೆಲವರು ತುಕ್ಕು ಹಿಡಿದು ನಿಂತಿರುವ ಕಾರ್ಖಾನೆಯನ್ನು ಹೇಗೆ 30 ದಿನಗಳಲ್ಲಿ ಪ್ರಾರಂಭ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದರು. ಬಿಹಾರ, ಉತ್ತರ ಕರ್ನಾಟಕದಿಂದ ಪರಿಣಿತರು ಹಾಗೂ ಕುಶಲ ಕೆಲಸಗಾರರನ್ನು ಕರೆದುಕೊಂಡು ಬಂದು ಹಗಲು ರಾತ್ರಿ ಕೆಲಸ ಮಾಡಿಸಿ ಪ್ರಾರಂಭ ಮಾಡಲಾಗುತ್ತಿದೆ. ಮೊದಲು 2 ದಿನ ಕಾರ್ಖಾನೆಯನ್ನು ಪರೀಕ್ಷಾರ್ಥವಾಗಿ ಚಾಲನೆ ನೀಡಲಾಗುವುದು. ಆ.18ರಿಂದ ಕಬ್ಬು ಅರೆಯಲು ಪ್ರಾರಂಭಿಸಲಾಗುವುದು. 2 ತಿಂಗಳಲ್ಲಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರತಿದಿನ 5 ಸಾವಿರ ಟನ್ ಕಬ್ಬು ಅರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.