ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಸವಿರುಚಿ ಸಂಚಾರಿ ಕ್ಯಾಂಟೀನ್’ ಲೋಕಾರ್ಪಣೆ ಹಾಗೂ ವಿಕಲಚೇತನರಿಗೆ “ಯಂತ್ರಚಾಲಿತ ದ್ವಿಚಕ್ರ ವಾಹನಗಳ’ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 16 ಸವಿರುಚಿ ಸಂಚಾರಿ ಕ್ಯಾಂಟೀನ್‌ಗಳಿಗೆ ಹಸಿರು ನಿಶಾನೆ ತೋರಿಸಿದ ಮುಖ್ಯಮಂತ್ರಿಯವರು ಇದೇ ವೇಳೆ ಆಯ್ದ 100 ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸ್ತ್ರೀಶಕ್ತಿ ಸಂಘಗಳ ಉಸ್ತುವಾರಿಯಲ್ಲಿ ಮಹಿಳಾ ಒಕ್ಕೂಟಗಳ ಮೂಲಕ ಸವಿರುಚಿ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಇದರಲ್ಲಿ ರಿಯಾಯಿತಿ ದರದಲ್ಲಿ ಊಟ, ಉಪಹಾರ ದೊರೆಯಲಿದೆ.
ಸ್ತ್ರೀಶಕ್ತಿ ಸಂಘದವರು ತಯಾರಿಸುವ ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ಒದಗಿಸುವುದರಿಂದ ಬಡವರು, ಶ್ರಮಿಕರಿಗೆ ಅನುಕೂಲವಾಗಲಿದೆ. ಸವಿರುಚಿ ಸಂಚಾರಿ ಕ್ಯಾಂಟೀನ್ ನಿರ್ಮಾಣಕ್ಕೆ ಸ್ತ್ರೀಶಕ್ತಿ ಸಂಘಗಳಿಗೆ 10 ಲಕ್ಷ ರೂ. ಬಡ್ಡಿರಹಿತ ಸಾಲ ಸೌಲಭ್ಯ ಸಿಗಲಿದೆ ಎಂದರು.
ಸ್ಕೂಟರ್ ವಿತರಣೆ: ಅಲ್ಲದೇ ನಾಲ್ಕು ಸಾವಿರ ವಿಕಲಚೇತನರಿಗೆ ಸ್ಕೂಟರ್‌ಗಳನ್ನು ವಿತರಿಸಲಾಗುವುದು ಎಂದು ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಸಾಂಕೇತಿಕವಾಗಿ 100 ಮಂದಿ ಆಯ್ದ ವಿಲಕಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ.
ಇದರಿಂದ ವಿಕಲಚೇತನರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ವೇಳೆ ಸಚಿವರಾದ ಉಮಾಶ್ರೀ, ಕೆ.ಜೆ. ಜಾರ್ಜ್, ಎಚ್.ಎಂ. ರೇವಣ್ಣ, ಮೇಯರ್ ಸಂಪತ್‌ರಾಜ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಮತ್ತಿತರರು ಇದ್ದರು.