ದೇವನಹಳ್ಳಿ: ತಾಲೂಕಿನ ಪ್ರತಿಯೊಂದು ಗ್ರಾಮದ ಸಂಪರ್ಕ ರಸ್ತೆಗಳು ಅಭಿವೃದ್ಧಿಯಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಹಾಗಾಗಿ, ಸಂಪೂರ್ಣ ಹಾಳಾಗಿದ್ದ ಕುಂದಾಣ ಮತ್ತು ಬೊಮ್ಮವಾರ ಸಂಪರ್ಕ ರಸ್ತೆಗೆ 1.66 ಕೋಟಿ ರೂ.ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ದೇವಗಾನಹಳ್ಳಿ ಗ್ರಾಮದ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನಾ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಕುಂದಾಣದ ಕೊಪ್ಪಲು-ಚಿಕ್ಕಚೀಮನಹಳ್ಳಿ ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
1.66 ಕೋಟಿ ರೂ.ವೆಚ್ಚದ ಕಾಮಗಾರಿ: ರಸ್ತೆ ಹೆಚ್ಚು ಹದಗೆಟ್ಟಿದ್ದು, ಈ ಭಾಗದ ಜನ ಹಲವಾರು ದಿನಗಳಿಂದ ರಸ್ತೆ ಡಾಂಬರೀಕರಣ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಇಲ್ಲಿಗೆ ಬರುತ್ತಿದ್ದ ಬಸ್‌ಗಳು ಸಹ ಬಾರದಂತಾಗಿತ್ತು. ಜನರಿಗೆ ಸಾಕಷ್ಟು ಅನಾನುಕೂಲಗಳು ಆಗುತ್ತಿದ್ದವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಿಂದ 1.66 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ: ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ರಸ್ತೆ ನಿರ್ಮಾಣವಾಗುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ. ರಸ್ತೆ ಗುಣಮಟ್ಟ ಕಾಪಾಡಿದರೆ ಗ್ರಾಮಗಳ ಸಂಪರ್ಕ ಹೆಚ್ಚಾಗುತ್ತದೆ. ಸುಮಾರು 3.750 ಕಿ.ಮೀ. 8 ಇಂಚು ಅಗೆದು, 3 ಇಂಚು ಡಾಂಬರೀಕರಣ ಹಾಕಲಾಗುವುದು ಎಂದು ಹೇಳಿದರು.
ಜನರ ಸಮಸ್ಯೆಗೆ ಸ್ಪಂದನೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನೀತಿ ಸಂಹಿತೆ ಜಾರಿಯಾಗುವ ಮುನ್ನಾ ಉಳಿಕೆ ಕಾಮಗಾರಿಗಳಿಗೆ ಆದಷ್ಟು ಬೇಗ ಚಾಲನೆ ನೀಡಲಾಗುತ್ತಿದೆ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಶ್ರಮಿಸಲಾಗುತ್ತಿದೆ. ಜನಸಾಮನ್ಯರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲಾಗುತ್ತಿದೆ ಎಂದರು.
ಜಿಪಂ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಜನರ ಬಹು ದಿನಗಳ ಬೇಡಿಕೆ ಇಂದು ಈಡೇರಿದೆ. ಗ್ರಾಮಸ್ಥರು ಮುಂದೆ ನಿಂತು ರಸ್ತೆ ಡಾಂಬರೀಕರಣ ಮಾಡಿಸಿಕೊಳ್ಳಬೇಕು. ಗುಣಮಟ್ಟದಿಂದ ಕಾಮಗಾರಿ ಕೂಡಿರಬೇಕು. ಕಳಪೆ ಕಾಮಗಾರಿ ಮಾಡಿದರೆ ಗಮನಕ್ಕೆ ತರಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ , ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷ ರಾಮಮೂರ್ತಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಕುಂದಾಣ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಾಲಕೃಷ್ಣ, ಗ್ರಾಪಂ ಸದಸ್ಯ ಕೆ.ವಿ.ಸ್ವಾಮಿ, ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ಪಟಾಲಪ್ಪ, ಮುಖಂಡ ಗೋಪಾಲ್ ಗೌಡ, ಗುತ್ತಿಗೆದಾರ ದೇವರಾಜ್ ಮತ್ತಿತರರು ಇದ್ದರು.