ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಇಲ್ಲಿನ ಜನರ ಬಹುದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯದಂತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಕಾರ್ಯಾರಂಭಿಸಿದೆ.
ಪೀಠದ ಕಾರ್ಯಾರಂಭದ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಗೀತಾ ಬಿ.ವಿ., ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ.22 ರಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಿಸಿದರು. ಈ ಮೊದಲು ನಿರ್ಧಾರವಾದಂತೆ ಆಯೋಗದ ಬೆಳಗಾವಿ ಪೀಠವು ಮಾರ್ಚ್ 3 ರಂದೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ವಿಳಂಬವಾಯಿತು. ಈಗ ಎಲ್ಲವೂ ಸಿದ್ಧವಾಗಿದ್ದು ಸರ್ಕಾರ ಮತ್ತು ಉತ್ತರ ಕರ್ನಾಟಕದ ಜನರ ಆಶೋತ್ತರದಂತೆ ಸುವರ್ಣ ವಿಧಾನಸೌಧದಲ್ಲಿ ಕಾರ್ಯ ಕಲಾಪ ಆರಂಭಿಸಲಾಗುತ್ತಿದೆ ಎಂದರು.
ಪೀಠಕ್ಕೆ 7 ಜಿಲ್ಲೆಯ ವ್ಯಾಪ್ತಿ: ಮಾಹಿತಿ ಆಯೋಗದ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳು ಬರಲಿವೆ. ಪೀಠದ ವ್ಯಾಪ್ತಿಯಲ್ಲಿ ಒಟ್ಟಾರೆ 4 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದು ಅದ್ಯತೆಯ ಮೇರೆಗೆ ಎಲ್ಲವನ್ನೂ ಇತ್ಯರ್ಥಗೊಳಿಸಲಾಗುವುದು ಎಂದರು. ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ಪೀಠ ನಿರ್ವಹಿಸಲಿದೆ.
4 ಸಾವಿರ ಪ್ರಕರಣಗಳು ಇರುವುದರಿಂದ ಕೋವಿಡ್ 19 ಹಿನ್ನೆಲೆಯಲ್ಲಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು. ಅಧಿಕಾರಿಗಳು, ಮೇಲ್ಮನವಿದಾರರ ಸಮ್ಮುಖದಲ್ಲಿ ತ್ವರಿತವಾಗಿ ಪ್ರಕರಣಗಳ ವಿಲೇವಾರಿ ಮಾಡುವ ಚಿಂತನೆ ಇದೆ ಎಂದು ಹೇಳಿದ ಅವರು, ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠದ ಕಾರ್ಯಕಲಾಪಗಳು ನಡೆಯುವುದಿಲ್ಲ.
ಈ ಅವಧಿಯಲ್ಲಿ ಪೀಠದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಗಾರ ಆಯೋಜಿಸಲಾಗುವುದು ಎಂದರು. ಅಧಿವೇಶನ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕಲಾಪ ನಡೆಸಲಾಗುವುದು. ಪೀಠದ ಕಾರ್ಯ ಕಲಾಪಗಳ ಸುಗಮ ನಿರ್ವಹಣೆಗೆ ಶಾಖಾಧಿಕಾರಿ ಹಾಗೂ ಅಧೀನ ಕಾರ್ಯದರ್ಶಿಗಳ ಅಗತ್ಯವಿದ್ದು, ಆದಷ್ಟು ಬೇಗ ಅಧಿಕಾರಿಗಳನ್ನು ನಿಯೋಜಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಮೂರು ಬಸ್ ವ್ಯವಸ್ಥೆ: ಸುವರ್ಣ ವಿಧಾನಸೌಧ ನಗರದಿಂದ ದೂರದಲ್ಲಿರುವುದರಿಂದ ಸದ್ಯಕ್ಕೆ ಪ್ರತಿದಿನ 3 ಬಸ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕಲ್ಪಿಸಿದೆ. ಕಲಾಪಕ್ಕೆ ಬರಬೇಕಾದರೆ ಸಮನ್ಸ್ ಪ್ರತಿ ತೋರಿಸಿದರೆ ಮಾತ್ರ ಸುವರ್ಣ ವಿಧಾನಸೌಧದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.