Advertisement

Rama Mandir: 111 ಅಡಿ ಉದ್ದದ ಊದುಬತ್ತಿ ಹಚ್ಚಿ ಸಂಭ್ರಮಾಚರಣೆ

12:32 PM Jan 23, 2024 | Team Udayavani |

ಮೈಸೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದ ಬಳಿ ಸೈಕಲ್‌ ಪ್ಯೂರ್‌ ಅಗರ್‌ ಬತ್ತೀಸ್‌ ಸಂಸ್ಥೆಯಿಂದ ಸಿದ್ಧಪಡಿಸಿದ್ದ ಪರಂಪರ ಹೆಸರಿನ 111 ಅಡಿ ಉದ್ದದ ಊದುಬತ್ತಿ ಹೊತ್ತಿಸಿ ಸಂಭ್ರಮಾಚರಣೆ ಮಾಡಲಾಯಿತು.

Advertisement

ನಗರದ ಕೋಟೆ ಆಂಜನೇಯಸ್ವಾಮಿ ದೇಗುಲ ಬಳಿ ಸೋಮವಾರ ಬೆಳಗ್ಗೆ ಸಂಸದ ಪ್ರತಾಪ್‌ ಸಿಂಹ, ಶಾಸಕ ಟಿ.ಎಸ್‌. ಶ್ರೀವತ್ಸ, ಶಿಲ್ಪಿ ಅರುಣ್‌ ಯೋಗಿರಾಜ್‌ ತಾಯಿ ಸರಸ್ವತಿ ಅವರು ಊದುಬತ್ತಿ ಬೆಳಗಿಸಿದರು.

ಪ್ರೋತ್ಸಾಹ ನೀಡುತ್ತಿರುವುದು ಹರ್ಷದಾಯಕ: ಬಳಿಕ ಮಾತನಾಡಿದ ಶಿಲ್ಪಿ ಅರುಣ್‌ ಅವರ ತಾಯಿ ಸರಸ್ವತಿ, ನಮ್ಮ ಕುಟುಂಬದ ಐದು ತಲೆಮಾರುಗಳು ಶಿಲ್ಪ ಕಲೆಗೆ ತಮ್ಮ ಬದುಕನ್ನು ಮೀಸಲಿಟ್ಟಿದೆ. ನಮ್ಮ ಕುಟುಂಬದ ಕೆಲಸವನ್ನು ಗುರುತಿಸಿ ಸೈಕಲ್‌ ಪ್ಯೂರ್‌ ಅಗರಬತ್ತಿಯು ಪ್ರೋತ್ಸಾಹ ನೀಡುತ್ತಿರುವುದು ನಿಜವಾ ಗಿಯೂ ಹರ್ಷ ದಾಯಕವಾಗಿದೆ. ಇದು ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕಲಾತ್ಮಕ ಸಮುದಾಯಕ್ಕೆ ಸಂದ ಗೌರವವಾಗಿದೆ. ವಿಶೇಷವಾಗಿ ಮೈಸೂರಿನ ಕಲಾವಿದರಿಗೆ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದರು.

ಎನ್‌ಆರ್‌ ಗ್ರೂಪ್‌ನ ಅಧ್ಯಕ್ಷ ಗುರು ಮಾತನಾಡಿ, ನಮ್ಮದು ಆಧ್ಯಾತ್ಮಿಕತೆಯಲ್ಲಿ ಬೇರೂರಿರುವ ಬ್ರ್ಯಾಂಡ್. ಕಲಾವಿದರ ಸಮುದಾಯವನ್ನು ಬೆಂಬಲಿಸುವುದು ನಮ್ಮ ನಿರಂತರ ಬದ್ಧತೆಯಾಗಿದೆ. ನಾವು ಜನರ ಜೀವನದಲ್ಲಿ ಭರವಸೆಯ ಮೂಲವಾಗಲು ಬಯಸುತ್ತೇವೆ. ಈ 111 ಅಡಿ ಅಗರಬತ್ತಿಯು ಆ ಬದ್ಧತೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಕುಶಲಕರ್ಮಿಗಳು ತಮ್ಮ ಕೆಲಸ ಮೂಲಕ ಜಗತ್ತಿಗೆ ಅದರ ಪರಿಮಳದ ಸಂತೋಷವನ್ನು ಹರಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‌

23 ದಿನಗಳಲ್ಲಿ ತಯಾರಾದ ಊದುಬತ್ತಿ: ಊದುಬತ್ತಿಗೆ 10 ಬಗೆಯ ಮೂಲ ವಸ್ತುಗಳನ್ನು ಬಳಸಿ ತಯಾ ರಿಸಲಾಗಿದ್ದು, ಗಂಧದ ಮರದ ಪುಡಿ ಜತೆಗೆ ಇದ್ದಿಲು, ಜೇನು, ದೇವದಾರು, ಬಿದಿರು, ಗುಗ್ಗುಲು, ಜಿಗುಟು, ಬೆಲ್ಲದ ಮಿಶ್ರಣ, ಸಾಸಿವೆ, ಸಾಂಬ್ರಾಣಿ ಹಾಗೂ ಬಿಳಿ ಸಾಸಿವೆ ಬಳಕೆ ಮಾಡಲಾಗಿದೆ. 18 ನುರಿತ ಕುಶಲ ಕರ್ಮಿಗಳು 23 ದಿನಗಳಲ್ಲಿ ಇದನ್ನು ಸಿದ್ಧಪಡಿಸಿದ್ದಾರೆ. ಸೈಕಲ್‌ ಪ್ಯೂರ್‌ ಅಗರ್‌ ಬತ್ತೀಸ್‌ ಸಂಸ್ಥೆಯೂ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೂ 111 ಅಡಿ ಉದ್ದದ ಗಂಧದ ಕಡ್ಡಿ ಕಳುಹಿಸಿದ್ದು, ಅಲ್ಲಿಯೂ ಸೋಮವಾರ ಮುಂಜಾನೆ ಊದುಬತ್ತಿ ಹೊತ್ತಿಸಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭ ರಂಗ ಕುಟುಂಬ ಸದಸ್ಯರಾದ ಕಿರಣ್‌ ರಂಗ, ವಿಷ್ಣು ರಂಗ, ಅನಿರುದ್ಧ ರಂಗ, ನಿಖೀಲ್‌ ರಂಗ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next