ಬೀದರ: ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಂಗೀತದ ಮೂಲಕ ಶಿವ ಸೃಷ್ಟಿಯ ವೈವಿಧ್ಯಮಯ ಜೀವ ಜಗತ್ತಿನ ಸೊಬಗನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಹೇಳಿದರು.
ನಗರದ ನೌಬಾದ್ ಜ್ಞಾನ ಶಿವಯೋಗಾಶ್ರಮದಲ್ಲಿ ನಡೆದ ಮಾಸಿಕ ಶಿವ-ದಿವ್ಯ ದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಾಂತ್ರಿಕ ಬದುಕಿನಲ್ಲಿ ಬಿಡುವಿಲ್ಲದೆ ಮನುಷ್ಯನಿಗೆ ಸುಖ-ಶಾಂತಿಯೆಂಬುದು ಮರೀಚಿಕೆಯಾಗಿದೆ. ಪರಿಸರದ ಮಡಿಲಲ್ಲಿರುವ ಇಂತಹ ಪವಿತ್ರ ಸ್ಥಳಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಇಲ್ಲಿ ಸಂಗೀತ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು-ಹೆಚ್ಚಾಗಿ ನಡೆಯುವಂತಾಗಲು ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ಮಾಡುವುದಾಗಿ ಹೇಳಿದರು.
ಜ್ಞಾನ ಶಿವಯೋಗಾಶ್ರಮದ ಅಧಿಪತಿ ಡಾ| ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ, ಬದುಕಿ ಬಾಳುವ ಪ್ರತಿಯೊಬ್ಬರು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಸತ್ಯ, ಶುದ್ಧ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಬೆವರು ಸುರಿಸಿ ಯಾರು ದುಡಿಯುತ್ತಾರೊ ಅವರಿಗೆ ಜೀವನದಲ್ಲಿ ಎಂದೂ ಬಡತನ, ದಾರಿದ್ಯಗಳು ಬರುವುದಿಲ್ಲ ಎಂದರು.
ಶಿವನ ಸೃಷ್ಟಿಯಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಗಂಡು-ಹೆಣ್ಣೆಂಬ ತಾರತಮ್ಯಗಳಿಲ್ಲ. ಸಕಲ ಜೀವ ರಾಶಿಗಳ ಕಲ್ಯಾಣ ಮಾಡುವುದು ಪರಮಾತ್ಮನ ದಿವ್ಯದೃಷ್ಟಿಯಾಗಿದೆ. ಈ ಸತ್ಯವನ್ನು ಜೀವನದಲ್ಲಿ ಯಾರು ಅಳವಡಿಸಿಕೊಳ್ಳುತ್ತಾರೊ ಅವರು ಸಫಲತೆ ಹೊಂದುತ್ತಾರೆ. ಪ್ರತಿಯೊಬ್ಬರ ನೋಡುವ ದೃಷ್ಟಿ ವಿಶಾಲವಾದಲ್ಲಿ ಈ ಸೃಷ್ಟಿಯೂ ಕೂಡ ನಮ್ಮಂತೆಯೇ ಕಾಣುವುದೆಂದು ಅವರು ಹೇಳಿದರು.
ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಬಾಗಲಕೋಟೆಯ ಸಂಗೀತ ಪ್ರಾಧ್ಯಾಪಕ ಡಾ| ಸಿದ್ಧರಾಮಯ್ಯ ಸ್ವಾಮಿ, ಎನ್‌ಎಸ್‌ಎಸ್‌ಕೆ ಸಿಡಿಒ ಹಾವಗಿರಾವ, ಕಾಶಿನಾಥಪ್ಪ ಶಂಭು, ಸರಸ್ವತಿ ಗೌರಶೆಟ್ಟಿ ಅತಿಥಿಗಳಾಗಿದ್ದರು. ಅನಿವಾಸಿ ಭಾರತೀಯ ಶಿವಕುಮಾರ ಪಾಟೀಲ ದಂಪತಿ ಸತ್ಕರಿಸಲಾಯಿತು. ಮಾದಪ್ಪ ಭಂಗೂರೆ, ಕುಶಾಲರಾವ ಗೌರಶೆಟ್ಟೆ, ಸಂಗಶೆಟ್ಟಿ ಸಿದ್ದೇಶ್ವರ, ರಮೇಶ ಮಾಶೆಟ್ಟಿ, ಮಲ್ಲಿಕಾರ್ಜುನ, ಮಹಾಂತೇಶ, ಸುರೇಶ, ಚನ್ನಪ್ಪ, ಧನರಾಜ ಇದ್ದರು.