ಮೈಸೂರು: ಸೆರೆಬ್ರಲ್ ಪಾಲ್ಸಿ, ಪಾರ್ಶ್ವವಾಯು ಮತ್ತು ವಯೋ ಸಹಜ ಕಾಯಿಲೆಗಳಿಗೆ ಒಳಗಾದ ರೋಗಿಗಳು ವೈದ್ಯಕೀಯ ಚಿಕಿತ್ಸೆಯ ನಂತರ ಭೌತಿಕವಾಗಿ ಹಾಗೂ ಮಾನಸಿಕವಾಗಿ ಪೂರ್ಣ ಗುಣಮುಖರಾಗಿ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿಸುವ ನಿಟ್ಟಿನಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಆರೋಗ್ಯ ಸೇವೆ ವಿಸ್ತರಣೆ ಮುಂದುವರಿದ ಭಾಗವಾಗಿ ಸಾಮಾನ್ಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳ ಜೊತೆಗೆ ಭೌತಿಕ ಚಿಕಿತ್ಸೆ ಮತ್ತು ಪುನಶ್ಚೇತನ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಜೆಎಸ್‌ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆರೆಬ್ರಲ್ ಪಾಲ್ಸಿ, ಪಾರ್ಶ್ವವಾಯು ಮತ್ತು ವಯೋ ಸಹಜ ಕಾಯಿಲೆಗಳಿಗೆ ಒಳಗಾದ ರೋಗಿಗಳು ವೈದ್ಯಕೀಯ ಚಿಕಿತ್ಸೆ ಪಡೆದು ಮನೆಗೆ ತೆರಳಲು ಸ್ವಸ್ಥರಾಗಿದ್ದರೂ ಭೌತಿಕ ನ್ಯೂನತೆಗಳಿಂದ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.
ಅಂತಹವರು ಬೇರೆಯವರಿಗೆ ಹೊರೆಯಾಗದಂತೆ ಅವರವರ ದೈನಂದಿನ ಕೆಲಸ ಕಾರ್ಯಗಳಾದ ಸ್ನಾನ-ಶೌಚಾದಿಗಳ ನಿರ್ವಹಣೆ, ಆಹಾರ ಸೇವನೆ, ಉಡುಗೆ-ತೊಡುಗೆ, ನಡಿಗೆ ಇತ್ಯಾದಿಗಳಿಗಾಗಿ ಪರಾವಲಂಬಿಗಳಾಗದಂತೆ ಸ್ವಸ್ಥ ಜೀವನ ನಡೆಸುವುದು ಅಗತ್ಯ. ವೈಯಕ್ತಿಕ ಕೆಲಸಗಳನ್ನು ನಿರ್ವಹಣೆ ಮಾಡಿಕೊಳ್ಳಲು ದೀರ್ಘಾವದಿಯಲ್ಲಿ ಅಗತ್ಯವಿರುವ ಥೆರಪಿಗಳನ್ನು ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ ಎಂದರು.
ಕೇಂದ್ರದಲ್ಲಿ ತರಬೇತಿ: ಸೆರೆಬ್ರಲ್ ಪಾಲ್ಸಿ, ಡೌನ್ ಸಿಂಡ್ರೋಮ್ ಅಥವಾ ಜಿನೆಟಿಕ್ ಡಿಸಾರ್ಡರ್, ಇಂಟಲೆಕುcಯಲ್ ಡಿಸೆಬಲಿಟಿ. ಮಸ್ಕಾéಲರ್ ಡಿಸ್ಟ್ರೋಫಿ, ಇತರೆ ನ್ಯೂರೋಮಸ್ಕಾಲರ್ ಡಿಸಾರ್ಡರ್, ಆಟಿಸಂ ಅಥವಾ ಡೆವಲಪ್‌ಮೆಂಟ್ ಡಿಸಾರ್ಡರ್, ಸೆನ್ಸರಿ ಡಿಪ್ರವೇಶನ್ ಡಿಸಾರ್ಡರ್, ಸ್ಪೀಚ್ ಡಿಸಾರ್ಡರ್ ಅಥವಾ ಭಾಷಾ ತೊಂದರೆ ಮೊದಲಾದ ನ್ಯೂನತೆಗಳುಳ್ಳ ಮಕ್ಕಳಿಗೆ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.
ವ್ಯಾಯಾಮ ಶಾಲೆ: 24 ಹಾಸಿಗೆಗಳ ಈ ಕೇಂದ್ರದಲ್ಲಿ 9 ಥೆರಪಿ ಕೊಠಡಿಗಳು, 5 ಸೆಮಿ ಸ್ಪೆಷಲ್ ವಾರ್ಡ್‌ಗಳು ಹಾಗೂ 7 ಸಾಮಾನ್ಯ ವಾರ್ಡ್‌ಗಳು ಹಾಗೂ ವ್ಯಾಯಾಮ ಶಾಲೆಯನ್ನು ಹೊಂದಿದೆ. ಪಾರ್ಶ್ವವಾಯು, ಪಾರ್ಕಿನ್‌ಸನ್ ಕಾಯಿಲೆ, ಮೆದುಳು ಬೇನೆಗಳು, ಕುತ್ತಿಗೆ, ಭುಜ, ಬೆನ್ನು ಭಾಗದಲ್ಲಿ ಗುಣಮುಖವಾಗದ ಹಳೆಯ ನೋವು, ಶಸ್ತ್ರಚಿಕಿತ್ಸೆಗಳಿಂದಾದ ಆಘಾತ, ಸುಟ್ಟಗಾಯಗಳಿಂದಾದ ನ್ಯೂನತೆಗಳು, ಸಂಧಿವಾತಗಳಿಂದಾದ ನ್ಯೂನತೆಗಳು, ಹೃದಯಬೇನೆ, ಉಸಿರಾಟದ ಸೋಂಕು, ದೀರ್ಘಕಾಲದ ಶ್ವಾಸಕೋಸದ ಪ್ರತಿರೋಧಕ ಕಾಯಿಲೆಗಳಿಗೆ ಚಿಕಿತ್ಸೆ ನಂತರ ಚೇತರಿಸಿಕೊಳ್ಳಲು ಅಗತ್ಯ ತರಬೇತಿ ನೀಡಲಾಗುತ್ತದೆ.
ಇಂದು ಉದ್ಘಾಟನೆ: ಜೆಎಸ್‌ಎಸ್ ಭೌತಿಕ ಚಿಕಿತ್ಸೆ ಮತ್ತು ಪುನಶ್ಚೇತನ ಕೇಂದ್ರವನ್ನು ಶುಕ್ರವಾರ ಸಂಜೆ 5.30ಕ್ಕೆ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ಉದ್ಘಾಟಿಸಲಿದ್ದು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕೇಂದ್ರದ ಉಪ ನಿರ್ದೇಶಕರಾದ ಡಾ.ಕವಿತಾರಾಜು, ಡಾ.ಮೃತ್ಯುಂಜಯ, ಡಾ.ಗುರುಸ್ವಾಮಿ ಪ್ರಳಯ್ ಸಹಾ ಮೊದಲಾದವರು ಹಾಜರಿದ್ದರು.