Advertisement

ಅ.1ರ ಸತ್ಯಾಗ್ರಹಕ್ಕೆ ವಿದ್ಯಾರ್ಥಿಗಳನ್ನು ಕರೆತನ್ನಿ

03:18 PM Sep 25, 2021 | Team Udayavani |

ಬೆಳಗಾವಿ: ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದರೆ ಯಾರೂ ಕಿವಿಗೊಡಬಾರದು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಸರ್ಕಾರವನ್ನು ಎಚ್ಚರಿಸಲು ಬೆಂಗಳೂರಿನಲ್ಲಿ ಅ. 1ರಿಂದ ಮತ್ತೂಂದು ಹೋರಾಟ ನಡೆಯಲಿದ್ದು, ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರಬೇಕು ಎಂದು ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಗರದ ಗಾಂಧಿ  ಭವನದಲ್ಲಿ ಶುಕ್ರವಾರ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನದ ನೇತೃತ್ವ ವಹಿಸಿ ಅವರು ಮಾತನಾಡಿದರು. ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಹಳೆ ಮೈಸೂರಿನಿಂದ ನಮ್ಮ ಹೋರಾಟ ಆರಂಭಗೊಂಡಿದೆ. ಲಿಂಗಾಯತ ಗೌಡ, ಲಿಂಗಾಯತ ಗೌಳಿ, ದೀಕ್ಷ ಲಿಂಗಾಯತರನ್ನು ಒಟ್ಟಿಗೆ ಸೇರಿಸಿಕೊಂಡು ಸಮಾಜವನ್ನು ಬೆಳೆಸುವ ಕೆಲಸಕ್ಕೆ ಮುಂದಾಗಿದ್ದೇವೆ. ಪಂಚಮಸಾಲಿ ಸತ್ಯಾಗ್ರಹ ಅ. 1 ರಿಂದ ಶುರುವಾಗಲಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಸತ್ಯಾಗ್ರಹ ನಡೆಸಬೇಕಾಗಿದೆ. ಹೊಸ ಇತಿಹಾಸ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾಜ ಕಟ್ಟಲು ಹೋರಾಟ ನಡೆದಿದೆ. ಸಮಾಜವನ್ನು ಅಗಲಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ, ಕಾಶಪ್ಪನವರ, ಎ.ಬಿ. ಪಾಟೀಲರ ಮೇಲೆ ಸಿಟ್ಟಿದ್ದರೆ ಅವರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಆದರೆ ಹೊರಗೆ ನಿಂತು ಸಮಾಜ ವನ್ನು ಒಡೆಯುವ ಕೆಲಸ ಮಾಡಬಾರದು ಎಂದರು.

ಮಾಜಿ ಸಚಿವ ಎ.ಬಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜ ಸರ್ಕಾರಿ ಸೌಲಭ್ಯದಿಂದ ವಂಚಿತಗೊಂಡಿದೆ. ಯಾವುದೇ ಉಪಜಾತಿಯ ವಿರೋಧಿಗಳು ನಾವಲ್ಲ. ಸಮಾಜದ ಬಡ ಮಕ್ಕಳ ಭವಿಷ್ಯ ರೂಪಿಸಲು ಮೀಸಲಾತಿ ಬೇಕಾಗಿದೆ. ಸಮಾಜ ಜಾಗೃತ ಆಗಬೇಕಿದೆ. ಮುಖ್ಯಮಂತ್ರಿ ಬೊಮ್ಮಾಯಿ ನಮ್ಮ ಸಮಾಜಕ್ಕೆ ಸೇರಿದವರಾಗಿದ್ದಾರೆ. ಸಮಾಜಕ್ಕೆ ಮೀಸಲಾತಿ ಕಲ್ಪಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಾಮಾಜಿಕ ಹಾಗೂ ಶೈಕ್ಷಣಿಕ ವಾಗಿ ಬೆಳೆಯಲು ಮೀಸಲಾತಿ ಬೇಕಿದೆ. ಅನೇಕ ಮಠಾಧೀಶರು ಇದ್ದರೂ ಯಾರೂ ಇಂಥ ಹೋರಾಟಕ್ಕೆ ಧುಮುಕಿರಲಿಲ್ಲ. ಈಗ ಸಾಮಾಜಿಕ, ಶೈಕ್ಷಣಿಕ ನ್ಯಾಯ ದೊರಕಿಸಿ ಕೊಡಲು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಂದಾಗಿದ್ದಾರೆ. ಇವರ ಕೈ ಬಲಪಡಿಸಬೇಕಾಗಿದೆ ಎಂದರು.

Advertisement

ಸಮಾಜದ ಕಾನೂನು ಘಟಕ ಅಧ್ಯಕ್ಷ ದಿನೇಶ ಪಾಟೀಲ ಮಾತನಾಡಿ, ಮೈಸೂರು, ಹೈದ್ರಾಬಾದ್‌ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ 1891ರಲ್ಲಿ ಜನಗಣತಿಯಲ್ಲಿ ಲಿಂಗಾಯತರನ್ನು ಶೂದ್ರರು ಎಂದು ನಮೂದಿಸಲಾಗಿದೆ. 1918ರಲ್ಲಿ ಬಂದ ವರದಿಯಲ್ಲಿಯೂ ಹಿಂದುಳಿದ ಸಮಾಜ ಎಂದು ಉಲ್ಲೇಖೀಸಲಾಗಿದೆ. ಕರ್ನಾಟಕದಲ್ಲಿ ಎಲ್ಲ ಆಯೋಗದ ವರದಿಗಳಲ್ಲಿ ನ್ಯಾಯಬದ್ಧ ಹಕ್ಕು ಸಿಕ್ಕಿಲ್ಲ. 2009ರಲ್ಲಿದ್ದ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹೊರತುಪಡಿಸಿ ಇನ್ನುಳಿದ 19 ಉಪಜಾತಿಗಳನ್ನು ಬೇರೆ ಬೇರೆ ಪ್ರವರ್ಗದಲ್ಲಿ ಸೇರಿಸಿದೆ. ಯಾವುದೇ ಅಯೋಗದ ವರದಿ ಇಲ್ಲದೇ ಸೇರಿಸಲಾಗಿದೆ. ಆದರೆ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಲು ಆಯೋಗ ರಚಿಸಿ ವರದಿ ಪಡೆಯುತ್ತಿದ್ದಾರೆ. ಈ ರೀತಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಮಲೆಮಹಾದೇಶ್ವರದ ಸಮಾಜದ ಮುಖಂಡ ಮಲ್ಲೇಶ ಮಾತನಾಡಿ, ಸಂಕಷ್ಟದಲ್ಲಿರುವ ಸಮಾಜದ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು. ಸ್ವಾಮೀಜಿ ನೇತೃತ್ವದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಬೇಕು. ಕ್ರಾಂತಿಕಾರಿ ಹೋರಾಟ, ಪಾದಯಾತ್ರೆ ನಡೆಸುತ್ತಿರುವ ಸ್ವಾಮೀಜಿ ರಾಜ್ಯದೆಲ್ಲೆಡೆ ಮನೆಮಾತಾಗಿದ್ದಾರೆ ಎಂದರು. ಹರಿಹರ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ ಮಾತನಾಡಿ, ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವ ಹಂತಕ್ಕೆ ಬಂದಿದ್ದೇವೆ. ಈ ಹಿಂದಿನ ಪೀಠಾಧಿಪತಿಗಳು ಇಂಥ ಗಟ್ಟಿ ನಿರ್ಧಾರ ತೆಗೆದುಕೊಂಡಿಲ್ಲ. ಈಗ ಸಮಾಜದ ಒಳಿತಿಗಾಗಿ ಕಟ್ಟಕಡೆಯ ಕುಟುಂಬದ ಭವಿಷ್ಯದ ಬಗ್ಗೆ ಶ್ರೀಗಳು ಹೋರಾಟ ಆರಂಭಿಸಿದ್ದಾರೆ. ರಾಜಕೀಯಕ್ಕಾಗಿ ಹೋರಾಟ ಅಲ್ಲ, ಸಮಾಜದಲ್ಲಿ ಬದಲಾವಣೆ ತರಲು ಹೋರಾಟ ನಡೆದಿದೆ ಎಂದರು.

ಕಾರ್ಯಾಧ್ಯಕ್ಷ ಆರ್‌.ಕೆ. ಪಾಟೀಲ, ಮುಖಂಡರಾದ ಧರೆಪ್ಪ ಠಕ್ಕನವರ, ನಿಂಗಪ್ಪ ಪಿರೋಜಿ, ಮಹಿಳಾ ಘಟಕ ಅಧ್ಯಕ್ಷೆ ವೀನಾ ಕಾಶಪ್ಪನವರ, ನಟರಾಜ್‌, ಬಿ.ಎಸ್‌. ಪಾಟೀಲ, ರೋಹಿಣಿ ಪಾಟೀಲ, ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ಹೇಮಂತ ಪಾಟೀಲ, ರುದ್ರಣ್ಣ ಚಂದರಗಿ, ಡಾ| ಬಿ.ಎಸ್‌. ಪಾಟೀಲ, ಜಗದೀಶಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಸಮಾಜದ ನೂತನ ಜಿಲ್ಲಾಧ್ಯಕ್ಷ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next