ಉಡುಪಿ : ಗ್ರಂಥಾಲಯಗಳು ಆಧುನಿಕ ಕಾಲದ ಸರಸ್ವತಿ ಮಂದಿರಗಳು. ಒಳಗೆ ಬರುವಾಗ ಭಯಭಕ್ತಿ ಅಗತ್ಯ. ಒಂದು ಗ್ರಂಥಾಲಯ ಕಟ್ಟಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟುತ್ತಾರೆ. ಹೆಚ್ಚು ಪುಸ್ತಕಗಳನ್ನು ಓದಿದಂತೆ ಜ್ಞಾನಶಕ್ತಿ ವೃದ್ಧಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಇಂದು ( ಮಾರ್ಚ್ 5 ) ಎಂಜಿಎಂ ಕಾಲೇಜು, ಕಾಲೇಜಿನ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತರಿ ಕೋಶದ (ಐಕ್ಯೂಎಸಿ) ಆಶ್ರಯದಲ್ಲಿ ನೂತನ ರವೀಂದ್ರ ಮಂಟಪದಲ್ಲಿ ನಡೆದ “ಎಂಜಿಎಂ ಪುಸ್ತಕೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಬಾಲ್ಯದಿಂದಲೇ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ತಿಳುವಳಿಕೆ ಮಾಡಬೇಕು. ಪುಸ್ತಕ ಓದುವ ಹವ್ಯಾಸವಿಲ್ಲದವರು ಸೃಷ್ಟಿಸುವ ಏರುಪೇರು ಸಂಸ್ಕೃತಿಯಿಂದ ಓದುಗರ ಸಂಖ್ಯೆ ಕ್ಷೀಣಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಯಾವುದೇ ಕೃತಿಚೌರ್ಯ ಮಾಡದೆ ಬರೆಯುವಂತಹ ಸ್ವ ಆಸಕ್ತಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಸಂಗ್ರಹದ ಜತೆಗೆ ಓದುವ ಹವ್ಯಾಸವೂ ಇರಲಿ :
ಪುಸ್ತಕ ಓದುವ, ಬರೆಯುವ, ಯೋಚಿಸುವ ಸಂಸ್ಕೃತಿ ಉತ್ತಮವಾದುದು. ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸದಂತೆ ಅದನ್ನು ತೆರೆದು ಓದುವ ಗುಣವನ್ನೂ ರೂಢಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ|ದೇವಿದಾಸ್ ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ ಎ., ಆಂತರಿಕ ಗುಣಮಟ್ಟ ಖಾತರಿ ಕೋಶದ ನಿರ್ದೇಶಕ ಅರುಣ್ ಕುಮಾರ್ ಬಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರಮೇಶ್ ಕಾರ್ಲ, ಗ್ರಂಥಪಾಲಕ ಕಿಶೋರ್ ಎಚ್.ವಿ. ಉಪಸ್ಥಿತರಿದ್ದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.