ಪಣಜಿ: ಉತ್ತರ ಗೋವಾದ ಮೊಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ದಿನ ಹಲವು ದಿನಗಳಿಂದ ಮುಂದೂಡಲಾಗುತ್ತಿದೆ. ಆಗಸ್ಟ್ 15 ರಂದು ಉದ್ಘಾಟನೆಗೊಳ್ಳಬೇಕಿದ್ದ ವಿಮಾನ ನಿಲ್ದಾಣ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಉದ್ಘಾಟನೆ ಡಿಸೆಂಬರ್ 11 ರಂದು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ತಿಳಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಈ ಕುರಿತು ಹೆಚ್ಚಿನ ಮಾಹಿತಿ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಇನ್ನೂ ಅಂತಿಮ ಅನುಮೋದನೆ ಸಿಕ್ಕಿಲ್ಲ. ಆದರೆ, ಲೋಕಾರ್ಪಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ ಎಂಬ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಾವಂತ್, ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಾರಂಭಿಸುವ ಆತುರದಲ್ಲಿದ್ದಾರೆ ಎಂದು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಮೋಪಾ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಎಂಒಪಿಎ ಸಂಪೂರ್ಣ ಸಿದ್ಧವಾದಾಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಬೇಕೇ ಹೊರತು ಮುಖ್ಯಮಂತ್ರಿ ಸಿದ್ಧವಾದಾಗ ಅಲ್ಲ ಎಂದು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಪ್ರತಿಕ್ರಿಯಿಸಿದ್ದಾರೆ.
ಮೋಪಾ ವಿಮಾನ ನಿಲ್ದಾಣ ಉದ್ಘಾಟನೆಗೂ ಮುನ್ನವೇ ಗೋವಾದಲ್ಲಿ ರಾಜಕೀಯ ನಡೆಯುತ್ತಿರುವುದು ಕಂಡು ಬರುತ್ತಿದೆ. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ವತಿಯಿಂದ ಈ ವಿಮಾನ ನಿಲ್ದಾಣಕ್ಕೆ ಗೋವಾದ ಮಾಜಿ ಮುಖ್ಯಮಂತ್ರಿ ಬಾವು ಸಾಹೇಬ್ ಬಂದೋಡ್ಕರ್ ಅವರ ಹೆಸರನ್ನು ಇಡಬೇಕು ಎಂಬ ಬೇಡಿಕೆ ಇದೆ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಮಾಜಿ ವಿರೋಧ ಪಕ್ಷದ ನಾಯಕ ಜಾಕ್ ಸಿಕ್ವೇರಾ ಮತ್ತು ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಹೆಸರನ್ನು ಇಡಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.