Advertisement

ಡಿ.13 ರಂದು “ದಿವ್ಯ ಕಾಶಿ ಭವ್ಯ ಕಾಶಿ” ಉದ್ಘಾಟನೆ: ಎನ್.ರವಿಕುಮಾರ್

01:25 PM Dec 11, 2021 | Team Udayavani |

ಬೆಂಗಳೂರು: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಕೈಗೊಂಡ ನಿರ್ಣಯವು ಕಾಶಿ ವಿಶ್ವನಾಥ ಧಾಮದ ರೂಪ ಪಡೆದಿದ್ದು, ಅದು ಡಿಸೆಂಬರ್ 13 ರಂದು ಉದ್ಘಾಟನೆಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್ ಅವರು ಶನಿವಾರ ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶಿ ಅತ್ಯಂತ ಪ್ರಾಚೀನ- ಪೌರಾಣಿಕ ನಗರವಾಗಿದ್ದು, ಇದು ಗಂಗಾ ಮಾತೆಯ ದಡದಲ್ಲಿದೆ. ಇದು ಭಗವಾನ್ ಶಿವನ ಶಿರದಿಂದ ಹುಟ್ಟಿಕೊಂಡಿದೆ. ಇದು ಪವಿತ್ರ ‘ಸಪ್ತಪುರಿ’ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಮಹಾನ್ ನಗರದ ಕುರಿತು ಋಗ್ವೇದ, ಸ್ಕಂದ ಪುರಾಣ, ರಾಮಾಯಣ ಮತ್ತು ಮಹಾಭಾರತ ಮತ್ತು ಮತ್ಸ್ಯ ಪುರಾಣ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಉಲ್ಲೇಖ ಕಂಡುಬರುತ್ತದೆ, ವಿಶ್ವದ ಅತ್ಯಂತ ಜನಪ್ರಿಯ ಜನನಾಯಕರೆನಿಸಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕ್ರತಿಯನ್ನು ಮರುಸ್ಥಾಪಿಸುವ ಕನಸು ಕಂಡವರು. ಅವರು “ದಿವ್ಯ ಕಾಶಿ, ಭವ್ಯ ಕಾಶಿ”ಯ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಭಗವಾನ್ ಶಿವನ ಹನ್ನೆರಡು ಜ್ಯೋತಿರ್ ಲಿಂಗಗಳಲ್ಲಿ, ಒಂದೆನಿಸಿದ ಪುರಾತನವಾದ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಮತ್ತು ಸುಂದರೀಕರಣದ ಅದ್ಭುತ ಕೆಲಸಗಳು ನಡೆದಿದ್ದು, ಈ ನವೀಕೃತ ಧಾರ್ಮಿಕ ನಗರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರು ಇದೇ ಡಿಸೆಂಬರ್ 13 ರಂದು ಉದ್ಘಾಟಿಸಲಿದ್ದಾರೆ. ಇದು ನಮಗೆಲ್ಲರಿಗೂ ಅತ್ಯಂತ ಸಂತೋಷ, ತೃಪ್ತಿ ಮತ್ತು ಹೆಮ್ಮೆ ತರುವ ಬಹಳ ಮುಖ್ಯ ವಿಷಯವಾಗಿದೆ. ಧರ್ಮಾಚಾರ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು, ಸಾಧು-ಸಂತರು, ಬುದ್ಧಿಜೀವಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಸಚಿವರು ಕಾಶಿಯಲ್ಲಿ ನಡೆಯುವ ಈ ಮಹಾಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ವಿಶಿಷ್ಟತೆಯನ್ನು ಪಡೆದಿದ್ದು, ಭಾರತೀಯ ಸಂಸ್ಕೃತಿಯ ಸಾಮರಸ್ಯ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿರುತ್ತದೆ ಎಂದು ವಿವರಿಸಿದರು.

ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ. ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. ಅವು 13ನೇ ಡಿಸೆಂಬರ್ 2021ರಿಂದ ಪ್ರಾರಂಭವಾಗುತ್ತದೆ ಮತ್ತು ಮಕರ ಸಂಕ್ರಾಂತಿ ಅಂದರೆ 14ನೇ ಜನವರಿ 2021 ವರೆಗೆ ಮುಂದುವರಿಯುತ್ತದೆ. ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ ಎಂದರು.

ಡಿಸೆಂಬರ್ 13ರ ಸಮಾರಂಭವನ್ನು ವೀಕ್ಷಿಸಲು ದೇಶದಾದ್ಯಂತ ಸುಮಾರು 51,000 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಎಲ್‍ಇಡಿ ಪರದೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ “ದಿವ್ಯ ಕಾಶಿ, ಭವ್ಯ ಕಾಶಿ” ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಇದಲ್ಲದೆ, ದೊಡ್ಡ ಪರದೆಗಳು ಇರುತ್ತವೆ. ಇದಲ್ಲದೆ ಗೌರವಾನ್ವಿತ ಪ್ರಧಾನಿಯವರ ಕಾರ್ಯಕ್ರಮವನ್ನು ಎಲ್ಲಾ ಪ್ರಮುಖ ದೇವಾಲಯಗಳು, ಮಠಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ವೀಕ್ಷಿಸಲು ಅವಕಾಶವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಂಡಲಗಳಲ್ಲಿ ಕಾರ್ಯಕ್ರಮದ ಪ್ರಸಾರ ವ್ಯವಸ್ಥೆ ಇರಲಿದೆ. ಸಾಧು-ಸಂತರು ಮತ್ತು ಬುದ್ಧಿಜೀವಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಸಾರ್ವಜನಿಕರು ಈ ನೇರಪ್ರಸಾರ ವೀಕ್ಷಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯಕರ್ತರು ಎಲ್ಲೆಡೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ ಎಂದು ತಿಳಿಸಿದರು.

Advertisement

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಬೃಹತ್ ಮತ್ತು ಅದ್ಧೂರಿ ಕಾರ್ಯಕ್ರಮ ಇರಲಿದ್ದು, ದೇವಸ್ಥಾನ, ಮಠ, ಆಶ್ರಮ ಅಥವಾ ಇತರ ಧಾರ್ಮಿಕ ಸ್ಥಳದಲ್ಲಿ ಪಕ್ಷದ ಜಿಲ್ಲಾ ಘಟಕವು ಇದನ್ನು ಆಯೋಜಿಸಲಿದೆ. ಇದರಲ್ಲಿ ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ಮಾತ್ರವಲ್ಲದೆ, ಪಕ್ಷದ ಹಾಗೂ ಪಕ್ಷದ ಜನ ಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ‘ದಿವ್ಯ ಕಾಶಿ ಭವ್ಯ ಕಾಶಿ’ ಕುರಿತು ಮಾಹಿತಿಯನ್ನೂ ನೀಡಲಾಗುವುದು. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಧಾರ್ಮಿಕ ಮುಖಂಡರು ಮತ್ತು ಸಂತರನ್ನು ಪಕ್ಷದಿಂದ ಸನ್ಮಾನಿಸಲಾಗುವುದು ಎಂದರು.

13ರ ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ಶಾಸಕರು, ಸಂಸದರು/ಸಚಿವರು ಮತ್ತು ಮುಖ್ಯಮಂತ್ರಿಗಳು, ಪಕ್ಷದ ಸಚಿವರು/ಉಪಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ಕಾಶಿ ವಿಶ್ವನಾಥ ಧಾಮ್ ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯದ ಜನರು ಶಿವನನ್ನು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪೂಜಿಸುತ್ತಾರೆ. ಬಿಜೆಪಿ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ದೀಪೋತ್ಸವ ಮಾಡಲು ಪ್ರಚಾರ ಮಾಡುತ್ತಿದೆ. “ಹಣತೆ ವಿತರಣೆ” ಕಾರ್ಯಕ್ರಮ ಯಶಸ್ವಿಯಾಗಿದೆ. ಹಣತೆ ವಿತರಣೆಯ ವ್ಯವಸ್ಥೆಗೆ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು ಎಂದು ವಿವರಿಸಿದರು.

ಡಿಸೆಂಬರ್ 14 ರಂದು, ಬಿಜೆಪಿ ಆಡಳಿತ ಇರುವ ಪ್ರಸ್ತುತ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಮ್ಮೇಳನವನ್ನು ಸಂಘಟಿಸಲಾಗುವುದು. ಇದರಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಜೀ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಬಿ.ಎಲ್. ಸಂತೋಷ್ ಜಿ ಉಪಸ್ಥಿತರಿರುವರು. ಈ ಕಾರ್ಯಕ್ರಮವು ಶ್ರೀ ತರುಣ್ ಚುಗ್ ಮತ್ತು ಸಹ-ಪ್ರಭಾರಿ ಶ್ರೀ ಆಶಿಶ್ ಸೂದ್ ಅವರ ಉಸ್ತುವಾರಿತ್ವದಲ್ಲಿ ನಡೆಯಲಿದೆ. ಮೂರು ದಿನಗಳ ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 13, 14, 15ರಂದು ನಡೆಯಲಿದೆ ಎಂದರು.

ಡಿಸೆಂಬರ್ 17ರಂದು, ಮೇಯರ್‍ಗಳ ಸಮ್ಮೇಳನ ನಡೆಯಲಿದೆ. ಕೇಂದ್ರ ಸಚಿವಾಲಯದ ವತಿಯಿಂದ ಕಾಶಿ ವಿಶ್ವನಾಥ ಧಾಮದಲ್ಲಿ ನಡೆಯಲಿದೆ. ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯಗಳು ಇದನ್ನು ಆಯೋಜಿಸಲಿವೆ. ಡಿಸೆಂಬರ್ 23ರಂದು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಕಾಶಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಇದರಲ್ಲಿ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ದೇಶದಾದ್ಯಂತದ ಕೃಷಿ ತಜ್ಞರು ಭಾಗವಹಿಸುತ್ತಾರೆ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಕೃಷಿ ಕ್ಷೇತ್ರ ಮತ್ತು ಅವರ ಹೊಸ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ 2022 ರ ಜನವರಿ 12ರಂದು ಕಾಶಿಯಲ್ಲಿ ಯುವ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಮತ್ತು ರಾಜ್ಯ ಮಾಧ್ಯಮ ಸಹ ಸಂಚಾಲಕರಾದ ಬಿ.ಎನ್. ರಾಘವೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next