Advertisement

ಲೋಕಾರ್ಪಣೆಗೊಂಡಿದೆ ಕಡಬ ಸರ್ವಋತು ಸೇತುವೆ 

04:32 AM Mar 11, 2019 | |

ಕಡಬ : ಕಡಬ ತಾ| ಉದ್ಘಾಟನೆಯ ಬೆನ್ನಲ್ಲೇ ಕಡಬದ ಹೊಸ ಮಠ ಸೇತುವೆಯೂ ಉದ್ಘಾಟನೆಗೊಂಡು ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

Advertisement

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಮಾ. 8ರಂದು ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದು, ಆ ಕ್ಷಣದಿಂದಲೇ ನೂತನ ಸೇತುವೆಯ ಮೇಲೆ ವಾಹನ ಸಂಚಾರ ಆರಂಭಗೊಂಡಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ನೇರಿನಿಂದ ಮುಳುಗಿ ರಸ್ತೆ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ ಹೊಸಮಠದ ಮುಳುಗು ಸೇತುವೆ ಮೇಲಿನ ಸಂಚಾರ ಇನ್ನು ಮುಂದೆ ನೆನಪು ಮಾತ್ರ.

ನಿರ್ಮಾಣ ವೆಚ್ಚ 9.19 ಕೋಟಿ ರೂ.
ದಕ್ಷಿಣ ಭಾರತದ ಅತೀ ದೊಡ್ಡ ಯಾತ್ರಾಸ್ಥಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಮೂಲಕ ಸುಲಭ ಸಂಪರ್ಕ ಕಲ್ಪಿಸುವ ಹಳೆಯ ಮುಳುಗು ಸೇತುವೆ ಮೈಸೂರು ರಾಜ್ಯಾಡಳಿತಾವಧಿಯ 1955ನೇ ಇಸವಿಯಲ್ಲಿ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನ ತನಕ ಮಳೆಗಾಲದಲ್ಲಿ ನೆರೆನೀರಿಗೆ ಮುಳುಗಿ ಅನೇಕ ದುರಂತಗಳಿಗೆ ಸಾಕ್ಷಿಯಾಗಿತ್ತು. ಇಲ್ಲಿ ನೂತನ ಸೇತುವೆ ನಿರ್ಮಿಸಲು 7 ವರ್ಷಗಳ ಹಿಂದೆ ರಾಜ್ಯ ಸರಕಾರ 7.5 ಕೋಟಿ ರೂ. ಅನುದಾನ ಒದಗಿಸಿತ್ತು. ಬಳಿಕ ಹಲವು ಎಡರು-ತೊಡರುಗಳ ನಡುವೆ 4 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಹಳೆಯ ಸೇತುವೆಗಿಂತ 4 ಮೀ. ಹೆಚ್ಚು ಎತ್ತರದಲ್ಲಿ 125 ಮೀ. ಉದ್ದ ಹಾಗೂ 12 ಮೀ. ಅಗಲದಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿದೆ. ಹಳೆ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಸಂಪರ್ಕ ರಸ್ತೆಯ ಪಕ್ಕದ ತಡೆಗೋಡೆ ಸಹಿತ ಹೆಚ್ಚುವರಿಯಾಗಿ ಸೇತುವೆಯ ಒಟ್ಟು ನಿರ್ಮಾಣ ವೆಚ್ಚ 9.19 ಕೋಟಿ ರೂ.ಗಳಿಗೆ ಏರಿದೆ.

ಬಲಿಯಾದ ಜೀವಗಳು ಹಲವು
ಮಳೆಗಾಲದಲ್ಲಿ ಗಂಟೆಗಟ್ಟಲೆ, ದಿನಗಟ್ಟಲೆ ನೆರೆ ನೀರಿನಲ್ಲಿ ಮುಳುಗಡೆಯಾಗಿ ರಸ್ತೆ ಸಂಪರ್ಕವನ್ನು ಕಡಿದು ಹಾಕುತ್ತಿದ್ದ ಹೊಸಮಠದ ಹಳೆಯ ಮುಳುಗು ಸೇತುವೆಗೆ ಬಲಿಯಾದ ಜೀವಗಳು ಹಲವು. ಸುಮಾರು 55 ವರ್ಷಗಳ ಹಿಂದೆ ನೆರೆನೀರಿನಲ್ಲಿ ಮುಳುಗಿದ್ದ ಸೇತುವೆಯನ್ನು ದಾಟಲು ಯತ್ನಿಸಿದ್ದ ಖಾಸಗಿ ಬಸ್ಸೊಂದು ಮುಳುಗಿ ಓರ್ವ ಪ್ರಯಾಣಿಕ ನೀರುಪಾಲಾಗಿದ್ದ. ಆ ಬಳಿಕ ಹಲವು ವರ್ಷಗಳ ಅನಂತರ ತಮಿಳುನಾಡಿನ ಪ್ರವಾಸಿ ಯುವಕರಿಬ್ಬರು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿಯೊಂದು ಮುಳುಗಿ ಕೃಷಿಕರೊಬ್ಬರು ಜೀವ ಕಳೆದುಕೊಂಡಿದ್ದರು. 2006ರ ಮಳೆಗಾಲದಲ್ಲಿ ಸಿಮೆಂಟ್‌ ಸಾಗಾಟದ ಲಾರಿಯೊಂದು ಮುಳುಗಡೆಯಾಗಿದ್ದ ಸೇತುವೆಯ ಮೇಲೆ ಚಲಿಸಲು ಯತ್ನಿಸಿ ನೀರು ಪಾಲಾಗಿ, ನಾಲ್ವರು ಜಲಸಮಾಧಿಯಾಗಿದ್ದರು.

ಬಿಜೆಪಿ ಸರಕಾರದಿಂದ ಅನುದಾನ ಮಂಜೂರು
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೇತುವೆಗಳಾದ ಶಾಂತಿಮೊಗರು, ಸುಬ್ರಹ್ಮಣದ ಕುಮಾರಧಾರಾ ಹಾಗೂ ಕಡಬದ ಹೊಸಮಠ ಸೇತುವೆಗಳಿಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತದಲ್ಲಿದ್ದಾಗ ಅನುದಾನ ಮಂಜೂರು ಮಾಡಲಾಗಿತ್ತು. ಕುಮಾರಧಾರಾ ಹಾಗೂ ಶಾಂತಿಮೊಗರು ಸೇತುವೆ ನಿರ್ಮಾಣ ಮುಗಿದು ಸಂಚಾರಕ್ಕೆ ಮುಕ್ತವಾಗಿವೆ. ಇದೀಗ ಹೊಸಮಠ ಸೇತುವೆಯೂ ಲೋಕಾರ್ಪಣೆಗೊಂಡಿದೆ. ಸೇತುವೆಯ ಸಂಪರ್ಕ ರಸ್ತೆಯ ಪಕ್ಕದ ತಡೆಬೇಲಿ ಸಹಿತ ಬಾಕಿ ಇರುವ ಕೆಲಸಗಳು ಶೀಘ್ರ ಪೂರ್ಣಗೊಳ್ಳಲಿವೆ.
-ಎಸ್‌.ಅಂಗಾರ ಶಾಸಕರು, ಸುಳ್ಯ 

Advertisement

‡ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next