ಒಂದೆಡೆ ಉತ್ತರ ಕರ್ನಾಟಕದಲ್ಲಿ ಶಿವಾಜಿ ಮಹಾರಾಜರನ್ನು ಆರಾಧಿಸುವ ಪ್ರತಿಷ್ಟಿತ “ಇನಾಮ್ದಾರ್’ ಮನೆತನ. ಮತ್ತೂಂದೆಡೆ ಪಶ್ಚಿಮ ಘಟ್ಟದ ದಟ್ಟ ಕಾನನದಲ್ಲಿ ಶಿವನನ್ನು ಆರಾಧಿಸುವ ಆದಿವಾಸಿ ಜನಾಂಗ. “ಇನಾಮಾªರ್’ ಮನೆತನಕ್ಕೂ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಶಿವನಿಗೂ ಒಂದು ದೈವಿಕ ನಂಟು. ಈ ದೈವಿಕ ನಂಟು ಶತ ಶತಮಾನಗಳಿಂದ “ಇನಾಮ್ದಾರ್’ ಮನೆತನ ಮತ್ತು ಆದಿವಾಸಿ ಜನಾಂಗವನ್ನು ಬೆಸೆದಿರುತ್ತದೆ. ಹೀಗಿರುವಾಗಲೇ ನಡೆಯುವ ಘಟನೆಯೊಂದು, ಆದಿವಾಸಿಗಳು “ಇನಾಮ್ದಾರ್’ ಮನೆತನವನ್ನು ದ್ವೇಷಿಸುವಂತೆ ಮಾಡುತ್ತದೆ. ಜನಾಂಗೀಯ ಸಂಘರ್ಷಕ್ಕೆ ಕಾರಣವಾಗುತ್ತದೆ. ಅಂಥ ಘಟನೆ ಯಾವುದು? ಇದಕ್ಕೆ ಪೂರ್ಣವಿರಾಮ ಹೇಗೆ? ಎಂಬುದೇ ಈ ವಾರ ತೆರೆಗೆ ಬಂದಿರುವ “ಇನಾಮ್ದಾರ್’ ಸಿನಿಮಾದ ಕಥಾಹಂದರ.
ಈಗಾಗಲೇ ಪೋಸ್ಟರ್, ಟೀಸರ್, ಟ್ರೇಲರ್‌ನಲ್ಲಿ ತೋರಿಸಿರುವಂತೆ, “ಇನಾಮ್ದಾರ್’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಉತ್ತರ ಕರ್ನಾಟಕದ ಸೊಗಡು, ಪಶ್ಚಿಮ ಘಟ್ಟದ ಸೊಬಗು ಎರಡನ್ನೂ ಸೇರಿಸಿ ಕಮರ್ಷಿಯಲ್ ಎಂಟರ್‌ಟೈನರ್ ಆಗಿ “ಇನಾಮ್ದಾರ್’ ಸಿನಿಮಾವನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ.
ಆ್ಯಕ್ಷನ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳ ಜೊತೆಗೆ ಲವ್, ಸೆಂಟಿಮೆಂಟ್, ಕಾಮಿಡಿ, ಮೆಲೋಡಿ ಹಾಡುಗಳು, ಸುಂದರ ಲೊಕೇಶನ್ಸ್, ಮೇಕಿಂಗ್, ಬೃಹತ್ ಕಲಾವಿದರ ತಾರಾಗಣ ತೆರೆಮೇಲೆ “ಇನಾಮ್ದಾರ್’ ಸಿನಿಮಾವನ್ನು ಅದ್ಧೂರಿಯಾಗಿ ಕಾಣುವಂತೆ ಮಾಡಿದೆ.
ಅಪರೂಪದ ಕಥೆ “ಇನಾಮ್ದಾರ್’ನ ಮೇಲೆ ಒಂದಷ್ಟು ಕುತೂಹಲ ಮೂಡಿಸುವಂತೆ ಮಾಡುತ್ತದೆ. ಆದರೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ, ಈ ಕಥೆಯ ನಿರೂಪಣೆಗೆ ಇನ್ನಷ್ಟು ವೇಗ ನೀಡಿದ್ದರೆ, “ಇನಾಮ್ದಾರ್’ ಇನ್ನಷ್ಟು ಪರಿಣಾಮಕಾರಿಯಾಗಿ ನೋಡುಗರ ಮನಮುಟ್ಟುವ ಸಾಧ್ಯತೆಗಳಿದ್ದವು.
ಇನ್ನು ನವ ಪ್ರತಿಭೆ ರಂಜನ್ ಛತ್ರಪತಿ, ಚಿರಶ್ರೀ ಅಂಚನ್ ಮೊದಲ ನೋಟದಲ್ಲೇ ಒಂದಷ್ಟು ಗಮನ ಸೆಳೆಯುತ್ತಾರೆ. ಉಳಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಜಿ.ಎಸ್.ಕಾರ್ತಿಕ ಸುಧನ್