ಮುದಗಲ್ಲ: ಸ್ಥಳೀಯ ಪುರಸಭೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ. ಶಾಶ್ವತ ಕುಡಿಯುವ ನೀರು ಯೋಜನೆಯಡಿ ಕೃಷ್ಣಾ ನದಿಯ ಜಡಿಶಂಕರಲಿಂಗೇಶ್ವರ ಬಳಿ ನಿರ್ಮಿಸಿದ ರಾಂಪುರ ಏತ ನೀರಾವರಿ ಜಾಕ್‌ವೆಲ್‌ನಿಂದ ಪಟ್ಟಣದ ಕನ್ನಾಪುರಹಟ್ಟಿ ಸೀಮಾರದ ಶ್ರೀ ಸಂಗಮೇಶ್ವರ ದೇವಸ್ಥಾನದ ಬಳಿ ನಿರ್ಮಿಸಿದ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಿ, ಅಲ್ಲಿ ನೀರು ಶುದ್ಧೀಕರಿಸಿ ಮುದಗಲ್ಲ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ.
ಮೊದಲಿಗೆ 7-8 ವರ್ಷ ಚೆನ್ನಾಗಿಯೇ ನೀರು ಸರಬರಾಜು ಮಾಡಲಾಯಿತು. ಆದರೆ ಈ ವರ್ಷ ಮಾತ್ರ ನೀರು ಸರಬರಾಜಿನಲ್ಲಿ ಭಾರೀ ವ್ಯತ್ಯಯ ಉಂಟಾಗುತ್ತಿದೆ. ಪಟ್ಟಣ ಬೆಳೆದಂತೆ ಜನಸಂಖ್ಯೆ ಹೆಚ್ಚಿದ್ದು, ಪಟ್ಟಣವನ್ನು 23 ವಾರ್ಡಗಳಾಗಿ ವಿಭಜಿಸಲಾಗಿದೆ. ಆದರೆ ನೀರಿನ ಯೋಜನೆಯಲ್ಲಿ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ ಹೀಗಾಗಿ ನಿತ್ಯ ನೀರಿನ ಸಮಸ್ಯೆ ಎದುರಾಗುತ್ತಿದೆ. ಪ್ರತಿದಿನ ಪೈಪ್ ಲೈನ್ ದುರಸ್ತಿ, ವಾಲ್ ರಿಪೇರಿ, ಮೋಟಾರು ರಿಪೇರಿ ಸೇರಿ ಹಲವು ಸಮಸ್ಯೆಗಳ ನೆಪದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ಮೊದಲಿಗೆ ಎರಡು ದಿನಕ್ಕೊಮ್ಮೆ ನಿತ್ಯ ಬೆಳಗ್ಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ನಾಲ್ಕೈದು ದಿನಕ್ಕೊಮ್ಮೆ ರಾತ್ರಿ 11 ಗಂಟೆಗೆ ನೀರು ಒದಗಿಸಲಾಗುತ್ತಿದೆ. ಹೀಗಾಗಿ ಪಟ್ಟಣದ ಜನತೆ ನೀರಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಳೆದ 2-3 ತಿಂಗಳಿಂದ ಸಮರ್ಪಕ ನೀರು ಬಾರದ್ದರಿಂದ ನಿವಾಸಿಗಳು ಟ್ಯಾಂಕರ್ ನೀರು ಹಾಕಿಸಿಕೊಳ್ಳುವುದು, ಇಲ್ಲವೇ ಸ್ವಂತ ಕೊಳವೆಬಾವಿ ಕೊರೆಸುವುದು, ತಳ್ಳುಬಂಡಿ, ಸೈಕಲ್, ಬೈಕ್, ಆಟೋರಿಕ್ಷಾ, ಟಾಟಾ ಏಸ್‌ನಲ್ಲಿ ಕೊಡ, ಬ್ಯಾರಲ್‌ಗಳನ್ನು ಹಾಕಿಕೊಂಡು ನೀರು ತರುತ್ತಿರುವುದು ಸಾಮಾನ್ಯವಾಗಿದೆ. ನಿತ್ಯ ಕೆಲಸ ಬಿಟ್ಟು ನೀರಿಗಾಗಿ ಅಲೆದಾಡುವಂತಾಗಿದ್ದು, ಜನ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪಟ್ಟಣದಲ್ಲಿ ಸ್ವಲ್ಪ ಮಟ್ಟಿಗೆ ನೀರು ಸರಬರಾಜಿನಲ್ಲಿ ತೊಂದರೆಯಾಗಿದೆ. 24/7 ಶಾಸ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ನೀರಿನ ಸಮಸ್ಯೆಗೆ ಬ್ರೇಕ್ ಬೀಳುತ್ತದೆ.
ಹಾಜಿಬಾಬು, ಪುರಸಭೆ ಮುಖ್ಯಾಧಿಕಾರಿ