Advertisement

ಮೀನಿಗೆ ಸಿಗದ ಸೂಕ್ತ ದರ: ನಿರ್ವಹಣೆ ಸಂಕಷ್ಟ; ದಡ ಸೇರುತ್ತಿರುವ ಟ್ರಾಲ್‌, ಪರ್ಸಿನ್‌ ಬೋಟುಗಳು

01:52 PM Apr 16, 2023 | Team Udayavani |

ಮಹಾನಗರ: ಸಮುದ್ರದಲ್ಲಿ ಗುಣಮಟ್ಟದ ಮೀನುಗಳ ಕೊರತೆ, ಸಿಕ್ಕಿದ ಮೀನುಗಳಿಗೆ ಸೂಕ್ತ ಬೆಲೆ ಸಿಗದೆ ನಿರ್ವಹಣೆ ಸಾಧ್ಯವಾಗದೆ ಮೀನುಗಾರರು ತಮ್ಮ ಬೋಟುಗಳನ್ನು ಕಡಲಿಗೆ ಇಳಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವು ದಿನಗಳಿಂದ ಮಂಗಳೂರು ದಕ್ಕೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯ ದೋಣಿಗಳು ಮಳೆಗಾಲದ ಮೀನುಗಾರಿಕೆನಿಷೇಧಕ್ಕೆ ಮುಂಚಿತವಾಗಿಯೇ ದಡ ಸೇರಲಾರಂಭಿಸಿವೆ.

Advertisement

ಆಳ ಸಮುದ್ರಕ್ಕೆ ತೆರಳುವ ಬೋಟು ಗಳಿಗೆ ಕಾಣೆ, ಪಯ್ಯ ಮೊದಲಾದ ಗುಣಮಟ್ಟದ ಮೀನು ಸಿಗುತ್ತಿಲ್ಲ. ಉಳಿದಂತೆ ಇತರ ಸಾಮಾನ್ಯ ಮೀನುಗಳು ದೊರೆಯುತ್ತಿದ್ದರೂ ಬೆಲೆ ಸಿಗುತ್ತಿಲ್ಲ. ವಿದೇಶಗಳಿಂದ ಮೀನಿಗೆ ಬೇಡಿಕೆ ಕುಸಿದಿರುವ ಕಾರಣ ಹೇರಳವಾಗಿ ರಫ್ತಾಗುತ್ತಿದ್ದ ರಾಣಿ ಮೀನು, ರಿಬ್ಬನ್‌ ಫಿಶ್‌, ಬೂತಾಯಿ, ಬಂಗುಡೆ ಮೊದಲಾದವುಗಳಿಗೆ ಸೂಕ್ತ ಬೆಲೆ ಇಲ್ಲ. ಹವಾಮಾನ ವೈಪರೀತ್ಯ ಅವೈಜ್ಞಾನಿಕ ಮೀನುಗಾರಿಕೆಯೂ ಮೀನಿನ ದರ ಇಳಿಕೆಗೆ ಕಾರಣವಾಗುತ್ತಿದೆ. ಹಾಗಾಗಿ ಬಹುತೇಕ ಬೋಟುಗಳವರು ಖರ್ಚುವೆಚ್ಚ ಸರಿದೂಗಿಸಲು ಸಾಧ್ಯವಾಗದೆ ಬೋಟುಗಳನ್ನು ದಡ ಸೇರಿಸುತ್ತಿದ್ದಾರೆ ಎನ್ನುವುದು ಮೀನುಗಾರರ ಅಭಿಪ್ರಾಯ.

ಕಳೆದ ವರ್ಷ ಈ ಮೀನುಗಾರಿಕೆ ಅವಧಿಯಲ್ಲಿ ಕೆಜಿಗೆ 70 ರೂ.ಗಳಿದ್ದ ರಾಣಿ ಮೀನು ಈ ಬಾರಿ 37 ರೂ.ಗಳಿಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಮೀನುಗಳ ಕೊರತೆ, ಸಿಕ್ಕ ಮೀನಿಗೆ ಸರಿಯಾದ ಬೆಲೆ ಸಿಗದಿರುವ ನಡುವೆಯೇ, ಡೀಸೆಲ್‌ ಬೆಲೆ ಏರಿಕೆ, ಇತರ ಖರ್ಚು ವೆಚ್ಚಗಳನ್ನು ಸರಿತೂಗಿಸಿಕೊಂಡು ನಷ್ಟದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವುದಾರೂ ಹೇಗೆ? ಡಿಸೆಂಬರ್‌ ತಿಂಗಳವರೆಗೆ ಬೋಟುಗಳಿಗೆ ಉತ್ತಮ ರೀತಿಯಲ್ಲಿ ಮೀನು ಸಿಗುತ್ತಿದ್ದು, ಜನವರಿಯಿಂದೀಚೆಗೆ ಮೀನಿನ ಪ್ರಮಾಣ ದಲ್ಲಿಯೂ ಕುಸಿತವಾಗಿದೆ ಎನ್ನುವುದು ಮೀನುಗಾರರು ಅಳಲು.

ಮೀನಿನ ದರ ಶೇ. 40ರಷ್ಟು ಕುಸಿತ
ಚೀನ, ಸ್ವಿಟ್ಜರ್‌ಲ್ಯಾಂಡ್‌, ಮಲೇಷ್ಯಾ, ಥಾಯ್ಲೆಂಡ್‌ ಸಹಿ ತ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಮೀನಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆ ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ರಾಣಿ ಮೀನಿಗೆ ಬೇಡಿಕೆ ಇಲ್ಲ ಎಂದು ರಫ್ತುದಾರರು ಹೇಳುತ್ತಿದ್ದು, ಅರ್ಹ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈಗಾಗಲೇ ಶೇ. 70 ಟ್ರಾಲ್‌, ಶೇ.40ರಷ್ಟು ಪರ್ಸಿನ್‌ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಕಳೆದ ಡಿಸೆಂಬರ್‌ವರೆಗೆ ಮೀನಿನ ಕ್ಯಾಚಿಂಗ್‌ ಮೇಲ್ನೋಟಕ್ಕೆ ಉತ್ತಮವಾಗಿದ್ದರೂ ಗುಣಮಟ್ಟದ ಮೀನು ಸಿಗದೆ, ಬೋಟು ಮಾಲಕರು ಕಂಗೆಟ್ಟಿದ್ದಾರೆ. ಈ ವರ್ಷ ಮೀನಿನ ದರದಲ್ಲಿ ಶೇ. 40ರಷ್ಟು ಕುಸಿತವಾಗಿದೆ. ರಿಬ್ಬನ್‌, ಬೂತಾಯಿ, ಬಂಗುಡೆ ಮೀನು ಇಳುವರಿ ಇತ್ತಾದರೂ, ಕೆಜಿಗೆ 160 ರೂ. ಸಿಗುತ್ತಿದ್ದ ಬಂಗುಡೆ ಮೀನನ್ನು ಈ ಬಾರಿ 50 ರೂ.ನಿಂದ 60 ರೂ.ಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯಿಂದ ಬೋಟು ಮಾಲಕರು ಕಂಗೆಟ್ಟಿದ್ದಾರೆ ಎಂದು ದ.ಕ. ಜಿಲ್ಲೆಯ ಆಳ ಸಮುದ್ರ ಮೀನುಗಾರರ ಮುಖಂಡರಾದ ಮೋಹನ್‌ ಬೆಂಗ್ರೆ ತಿಳಿಸಿದ್ದಾರೆ.

ಗುಣಮಟ್ಟದ ಮೀನು ಲಭಿಸುತ್ತಿಲ್ಲ
ಕಡಲ ಮೀನುಗಾರಿಕೆಗೆ ತೆರಳುವವರಿಗೆ ಗುಣಮಟ್ಟದ ಮೀನು ಲಭ್ಯವಾಗುತ್ತಿಲ್ಲ. ಲಭ್ಯವಾದ ಮೀನಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಹವಾಮಾನ ವೈಪರೀತ್ಯದ ಜತೆಗೆ ಕಡಲು ಹಲವು ಕಾರಣಗಳಿಗೆ ಕಲುಷಿತವಾಗುತ್ತಿದೆ, ಮೀನು ಸಂತತಿ ವಿನಾಶದಂಚಿಗೆ ಸಾಗುತ್ತಿದೆ. ವಿದೇಶಗಳಲ್ಲಿ ಕಡಲು ಸ್ವತ್ಛಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ನಮ್ಮಲ್ಲಿ ಕಲುಷಿತ ನೀರು, ತ್ಯಾಜ್ಯ ಉಗಮ ಸ್ಥಾನಗಳಿಂದಲೇ ನದಿಗಳ ಒಡಲು ಸೇರಿ ಕಡಲ ಪಾಲಾಗುತ್ತಿದೆ. ಉಳಿದಂತೆ ಕಡಲು ಸೇರುವ ನಾನಾ ರೀತಿಯ ತ್ಯಾಜ್ಯಗಳಿಂದ ಕಡಲ ಸಂಪತ್ತು ಮಲಿನವಾಗುತ್ತಿದೆ. ಪೌಷ್ಟಿಕ ಆಹಾರವಾದ ಉತ್ತಮ ಗುಣಮಟ್ಟದ ಮೀನುಗಳು ಸಿಗದಿದ್ದರೆ ಆಳ ಸಮುದ್ರ ಮೀನುಗಾರಿಕೆ ನಡೆಸುವುದು ಬಲು ಕಷ್ಟ. ಈ ಬಗ್ಗೆ ಸರಕಾರವೇ ಗಮನ ಹರಿಸಿ ಕಡಲ ಸಂಪತ್ತು ಸಂರಕ್ಷಿಸುವ ಜತೆಗೆ ಮೀನುಗಾರರ ಬದುಕಿಗೆ ಭದ್ರತೆಯನ್ನು ಒದಗಿಸಬೇಕು. -ಶಶಿಕುಮಾರ್‌ ಬೆಂಗ್ರೆ, ಅಧ್ಯಕ್ಷರು, ಕರ್ನಾಟಕ ಪಸೀìನ್‌ ಮೀನುಗಾರರ ಸಂಘ

Advertisement

ಮಾಹಿತಿ ಬಂದಿಲ್ಲನಿರ್ವಹಣೆ ಸಾಧ್ಯವಾಗದೆ ಆಳ ಮೀನುಗಾರಿಕೆ ಬೋಟುಗಳು ದಡ ಸೇರಿರುವ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ.
– ಹರೀಶ್‌ ಕುಮಾರ್‌, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next