ಮೊಳಕಾಲ್ಮೂರು: ಬರಪೀಡಿತ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಕಲ್ಪಿಸಿರುವ 6 ಕೋಟಿ ರೂ.ಅನುದಾನವನ್ನು ಇಲಾಖಾಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳದೆ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಪಂ ಪಿ.ಆರ್.ಇ.ಡಿ ಯೋಜನೆಯಲ್ಲಿಯೇ ಸುಮಾರು 40 ಲಕ್ಷಕ್ಕೂ ಅಧಿಕ ಅನುದಾನವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 25 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಲ್ಯಾಪ್ಸ್ ಆಗಿದೆ. ಇಲಾಖಾಧಿಕಾರಿಗಳು ಯಾವುದೇ ಕಾರಣ ನೀಡದೆ ಜವಾಬ್ದಾರಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ತ್ವರಿತವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಸೂಚಿಸಿದರು.
ಜಿಪಂ ಎಇಇ ನಾಗರಾಜ್ ಮಾತನಾಡಿ, ಖಜಾನೆಗೆ ಬಿಲ್‌ಗಳನ್ನು ತಡವಾಗಿ ಕಳುಹಿಸಿದ್ದರಿಂದ ಅನುದಾನ ಲ್ಯಾಪ್ಸ್ ಆಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ತಡವಾಗಿದೆ. 8.65 ಕೋಟಿ ರೂ. ಅನುದಾನದಲ್ಲಿ 123 ಕಾಮಗಾರಿಗಳನ್ನು ಪೂರ್ಣಗೊಳಿಸಿ 2.30 ಕೋಟಿ ರೂ. ಬಿಲ್ ಮಾಡಲಾಗಿದೆ. ಉಳಿದ ಸುಮಾರು 6 ಕೋಟಿ ರೂ.ಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸದಸ್ಯ ಡಾ| ಬಿ. ಯೋಗೇಶ್‌ಬಾಬು ಮಾತನಾಡಿ, ಜಿಪಂ ಸದಸ್ಯರ ಗಮನಕ್ಕೆ ತಾರದೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಲ್ಲಿ ವಿಫಲರಾಗಿದ್ದೀರಿ. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಮಾಹಿತಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಹಾನಗಲ್ ಜಿಪಂ ಕ್ಷೇತ್ರದಲ್ಲಿ ಸುಮಾರು 5 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವುದು ಸೇರಿದಂತೆ ಇನ್ನಿತರ ಕಡೆಗಳಲ್ಲಿ 27 ಘಟಕಗಳು ಸ್ಥಗಿತವಾಗಿದೆ. ಕೂಡಲೇ ದುರಸ್ತಿಗೊಳಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ ಕೋವಿಡ್-19 ಪರಿಣಾಮ ತಾಲೂಕಿನಲ್ಲಿ ಎಷ್ಟು ಪಾಸಿಟಿವ್ ಇದೆ ಎಂಬುದನ್ನು ಪತ್ತೆ ಹಚ್ಚಿ ಕೋವಿಡ್ ಹರಡದಂತೆ ಜಾಗ್ರತೆ ವಹಿಸಬೇಕೆಂದರು. ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ ಮಾತನಾಡಿ, ತಾಲೂಕು ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ಮತ್ತು ಎಕ್ಸ್‌ರೇ ಮಿಷನ್ ಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದರು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಜಿಪಂ ಉಪಾಧ್ಯಕ್ಷೆ ಎನ್
.ಪಿ. ಸುಶೀಲಮ್ಮ, ತಾಪಂ ಅಧ್ಯಕ್ಷೆ ಬೋರಮ್ಮ, ಉಪಾಧ್ಯಕ್ಷೆ ಚನ್ನಮ್ಮ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರೇಷ್ಮೆ ವೀರೇಶ್, ತಾಪಂ ಇಒ ಪ್ರಕಾಶ್, ವಿವಿಧ ಇಲಾಖಾಧಿಕಾರಿಗಳು ಮತ್ತು ಪಿಡಿಒಗಳು ಭಾಗವಹಿಸಿದ್ದರು.