Advertisement

ವಿವಿಧೆಡೆ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ ಚುರುಕು

11:10 AM Oct 12, 2018 | Team Udayavani |

ಮಹಾನಗರ: ಮಹಾನಗರ ಪಾಲಿಕೆಯ ವತಿಯಿಂದ ನಗರದ ವಿವಿಧೆಡೆ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಲಾಲ್‌ಬಾಗ್‌, ಬಿಜೈ, ಕರಂಗಲ್ಪಾಡಿ, ಬಂಟ್ಸ್‌ಹಾಸ್ಟೆಲ್‌ ಸಹಿತ ನಗರದ ವಿವಿಧ ಬಸ್‌ ನಿಲ್ದಾಣಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಬಸ್‌ಗಳು ಬಸ್‌ ಬೇಯಲ್ಲಿ ನಿಲ್ಲಬೇಕು ಎಂಬ ಕಾರಣದಿಂದಲೂ ಜಂಕ್ಷನ್‌ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.

Advertisement

ಎಲ್ಲೆಲ್ಲಿ ಕಾಮಗಾರಿ?
60 ಲಕ್ಷ ರೂ. ವೆಚ್ಚದಲ್ಲಿ ಲಾಲ್‌ಬಾಗ್‌ ಜಂಕ್ಷನ್‌ ಅಭಿವೃದ್ಧಿ ಕೈಗೊಳ್ಳಲಾಗಿದೆ. ಚರಂಡಿ ಹಾಗೂ ಫುಟ್‌ಪಾತ್‌ ಅಭಿವೃದ್ಧಿಗೊಳಿಸಿ, ಫ್ರೀ ಟರ್ನ್ ಮಾಡಲು ಇಲ್ಲಿ ಯೋಚಿಸಲಾಗಿದೆ. ಇದನ್ನು ಕರಾವಳಿ ಮೈದಾನದ ಮುಂಭಾಗದ ರಸ್ತೆಯ ವ್ಯಾಪ್ತಿಗೂ ವಿಸ್ತರಿಸಲಾಗುತ್ತದೆ. ಬಿಜೈ ಚರ್ಚ್‌ನಿಂದ ವಿವೇಕಾನಂದ ಪಾರ್ಕ್‌ ರಸ್ತೆಯಲ್ಲಿ 1.13 ಕೋ.ರೂ. ವೆಚ್ಚದಲ್ಲಿ ಜಂಕ್ಷನ್‌ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಕರಂಗಲ್ಪಾಡಿಯಲ್ಲಿ ಮಾರುಕಟ್ಟೆಯಿಂದ ಮೆಡಿಕೇರ್‌ ಸೆಂಟರ್‌ವರೆಗೆ 75 ಲಕ್ಷ ರೂ. ಹಾಗೂ ಅದೇ ವ್ಯಾಪ್ತಿಯಲ್ಲಿ ವುಡ್‌ ಲ್ಯಾಂಡ್‌ ಹೊಟೇಲ್‌ ರಸ್ತೆಯ ಭಾಗದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಜಂಕ್ಷನ್‌ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ತಿಳಿಸಿದ್ದಾರೆ.

ಟಿಎಂಎ ಪೈ ಹಾಲ್‌ನ ಮುಂಭಾಗದ ಬಸ್‌ ನಿಲ್ದಾಣ ವ್ಯಾಪ್ತಿಯಲ್ಲಿ ಹಿಂದೆ ಮಾಡಿದ ಕಾಂಕ್ರೀಟ್‌ ಕೆಲಸದಲ್ಲಿ ವ್ಯತ್ಯಾಸವಾದ ಕಾರಣದಿಂದ ಅಲ್ಲಿ ಹಿಂದಿನ ಗುತ್ತಿಗೆದಾರರಿಂದಲೇ ಇದೀಗ ಕಾಂಕ್ರೀಟ್‌ ಕೆಲಸ ಕೈಗೊಳ್ಳಲಾಗಿದೆ. ಈ ಮೂಲಕ ಬಸ್‌ ನಿಲುಗಡೆಗೆ ಇಲ್ಲಿ ಸೂಕ್ತ ವ್ಯವಸ್ಥೆ ಆಗಲಿದೆ. ಪ್ರೀಮಿಯರ್‌ ಎಫ್‌ಐಆರ್‌ನಲ್ಲಿ ಅತ್ತಾವರದ ಬಿ.ವಿ. ರೋಡ್‌, ಎಸ್‌.ಎಲ್‌. ಮಥಾಯಸ್‌ ರೋಡ್‌ನ‌ಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಮನಪಾ ಮೂಲಗಳು ತಿಳಿಸಿವೆ.

ಸಂಚಾರಕ್ಕೆ ಎದುರಾಗಿದೆ ಸಮಸ್ಯೆ
ಸಂಚಾರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನಗರದ ವಿವಿಧ ಭಾಗದಲ್ಲಿ ಜಂಕ್ಷನ್‌ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದರೂ ಕಾಮಗಾರಿಯ ಕಾರಣದಿಂದ ಸಂಚಾರ ದಟ್ಟಣೆ ಎದುರಾಗಿದೆ. ಕೆಲವು ದಿನಗಳಿಂದ ಸಂಜೆ ಸಮಯದಲ್ಲಿ ಮಳೆ ಕೂಡ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಇಲ್ಲಿ ಸಮಸ್ಯೆ ಉಂಟಾಗಿದೆ. ಒಂದೆಡೆ ಬಸ್‌ ಗಳು ರಸ್ತೆಯಲ್ಲಿಯೇ ನಿಲ್ಲುವುದರಿಂದ ಟ್ರಾಫಿಕ್‌ ಕಿರಿಕಿರಿಯಾದರೆ, ಇನ್ನೊಂದೆಡೆ ಮಳೆಯ ಮಧ್ಯೆ ರಸ್ತೆ ಅಗೆದು ಕಾಮಗಾರಿ ನಡೆಸುವುದು ಮತ್ತೂಂದು ಸಮಸ್ಯೆ. ಜತೆಗೆ ಈಗ ನವರಾತ್ರಿ ಸಂಭ್ರಮ ಇರುವ ಕಾರಣ ಅಧಿಕ ಜನ ನಗರಕ್ಕೆ ಬರುವಾಗ ಕಾಮಗಾರಿಯ ನೆಪದಲ್ಲಿ ಬ್ಲಾಕ್‌ ಸಮಸ್ಯೆಯೂ ಉಂಟಾಗಿದೆ ಎಂಬ ಆರೋಪವೂ ಕೇಳಿಬಂದಿದೆ. 

ಜಂಕ್ಷನ್‌ ಅಭಿವೃದ್ಧಿಯ ಗುರಿ
ನಗರದಲ್ಲಿ ಟ್ರಾಫಿಕ್‌ ಸಹಿತ ವಿವಿಧ ಸಮಸ್ಯೆಗಳಿಗೆ ಮೂಲ ಕಾರಣವಾಗಿದ್ದ ಜಂಕ್ಷನ್‌ಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಂಕ್ಷನ್‌ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕೆಲವು ಭಾಗದಲ್ಲಿ ಕಾಮಗಾರಿ ಕೈಗೊಳ್ಳುವಾಗ ಸಾರ್ವಜನಿಕರಿಗೆ ಸಮಸ್ಯೆ ಆದರೂ ಕೂಡ ನಗರದ ಭವಿಷ್ಯದ ದೃಷ್ಟಿಯಿಂದ ಸಹಕರಿಸಬೇಕು. ಕೆಲವೇ ದಿನದಲ್ಲಿ ಕಾಮಗಾರಿ ಪೂರ್ಣ ಗೊಂಡು ಸಾರ್ವಜನಿಕರಿಗೆ ಜಂಕ್ಷನ್‌ಗಳು ಉತ್ತಮ ರೀತಿಯಲ್ಲಿ ಲಭ್ಯವಾಗಲಿವೆ. 
– ಭಾಸ್ಕರ್‌ ಕೆ., ಮೇಯರ್ 

Advertisement
Advertisement

Udayavani is now on Telegram. Click here to join our channel and stay updated with the latest news.

Next