Advertisement
ತುಮಕೂರು ನಗರದಲ್ಲಿ ದಿನದ 24 ಗಂಟೆಗಳ ಕಾಲ ನೀರು ಸರಬರಾಜು ಯೋಜನೆ ಅನುಷ್ಠಾನಗೊಳ್ಳುತ್ತಿದೆ. ನಗರದಲ್ಲಿ ಸುಮಾರು 15 ಸಾವಿರದಷ್ಟು ಅನಧಿಕೃತ ನಲ್ಲಿ ಸಂಪರ್ಕಗಳಿವೆ ಎಂದು ಮಹಾನಗರಪಾಲಿಕೆ ಗುರುತಿಸಿದ್ದು, 18 ಕೋಟಿ 81 ಲಕ್ಷ ನೀರಿನ ತೆರಿಗೆ ಆದಾಯ ಪಾಲಿಕೆಗೆ ಕಳೆದ ಹಲವಾರು ವರ್ಷಗಳಿಂದ ಪಾವತಿಯಾಗದೇ ಬಾಕಿ ಉಳಿದು ಕೊಂಡು ಬಂದಿದೆ.
Related Articles
Advertisement
ಯಾರು ಅನಧಿಕೃತ ನಲ್ಲಿ ಸಂಪರ್ಕ ಪಡೆದಿರುವರೋ ಅವರೇ ಖುದ್ದಾಗಿ ಪಾಲಿಕೆಗೆ ಸಕ್ರಮೀಕರಣಕ್ಕೆ ಎರಡೂವರೆ ಸಾವಿರ ಶುಲ್ಕ ಪಾವತಿಸಿ ಅರ್ಜಿಸಲ್ಲಿಸಿದರೆ, ಅಂತಹವರ ನಲ್ಲಿ ಸಂಪರ್ಕವನ್ನು ಸಕ್ರಮೀಕರಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದರು.
ಮೀಟರ್ ಅಳವಡಿಕೆಯಾದರೆ ಅಕ್ರಮಕ್ಕೆ ಬ್ರೇಕ್: ನಗರದಲ್ಲಿ ಜಾರಿಗೊಳಿಸಲಾಗುತ್ತಿರುವ 24 ತಾಸು ನೀರು ಸರಬರಾಜು ಯೋಜನೆ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎನ್ನುವ ಪಾಲಿಕೆ ಆಯುಕ್ತರು, ಯೋಜನೆಯಡಿ ಹೊಸ ನಲ್ಲಿ ಸಂಪರ್ಕಗಳು ಎಲ್ಲಾ ಮನೆ, ವಾಣಿಜ್ಯ ಕಟ್ಟಡಗಳಿಗೆ ಅಳವಡಿಕೆಯಾಗಲಿದ್ದು, ಬಳಿಕ ನೀರಿನ ಕರ ಸಂಗ್ರಹದಲ್ಲಿ ಪಾರದರ್ಶಕವ್ಯವಸ್ಥೆ ಜಾರಿಗೆ ಬರಲಿದೆ. ಮೀಟರ್ ಅಳವಡಿಕೆ ಮಾಡಿದ ಒಂದೇ ನಲ್ಲಿ ಸಂಪರ್ಕಗಳು ಮಾತ್ರ ಅಸ್ಥಿತ್ವಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ನೀರಿನ ಬಳಕೆ ತಕ್ಕಂತೆ ಶುಲ್ಕ ಪಾವತಿ: ಈಗ ಪ್ರಸ್ತುತ ಪ್ರತಿ ಗೃಹ ಬಳಕೆ ನಲ್ಲಿ ಸಂಪರ್ಕಕ್ಕೆ ಮಾಸಿಕ 200 ರೂ. ಗಳಂತೆ 2400 ರೂ. ವಾರ್ಷಿಕ ನೀರಿನ ಕರವನ್ನು ನಾಗರಿಕರು ಪಾವತಿಸುತ್ತಿದ್ದು, 24 ತಾಸು ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡ ಬಳಿಕ ನೀರಿನ ಬಳಕೆ ಪ್ರಮಾಣದಷ್ಟು ಮಾತ್ರ ಶುಲ್ಕ ಪಾವತಿಸಬೇಕು.
ಎಷ್ಟು ನೀರು ಬಳಸುತ್ತೇವೆ ಅಷ್ಟು ಬಿಲ್ ಬರುತ್ತದೆ. ಪ್ರತಿ ನಲ್ಲಿಗೆ ಮೀಟರ್ ಅಳವಡಿಸಲಾಗಿದೆ, ಈ ಸಂಬಂಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರತಿ ಮನೆಯಲ್ಲಿ 6 ಜನರಂತೆ ಲೆಕ್ಕ ಹಾಕಿ ಮಾಸಿಕ 25000 ಲೀ ನೀರಿನ ಬಳಕೆ ಆಧರಿಸಿ 229 ರೂ. ಕನಿಷ್ಠ ದರ ನಿಗದಿ ಮಾಡಲಾಗಿದೆ. ಮನೆಯಲ್ಲಿ ಕಡಿಮೆ ಸಂಖ್ಯೆಯ ಜನರಿದ್ದು, ಮಾಸಿಕ ಕೇವಲ 10,000 ಲಿಟರ್ ಮಾತ್ರ ಬಳಸಿದರೆ ಅಂತಹ ಮನೆಯವರು ಬರೀ 70 ರೂ. ಗಳಷ್ಟು ಮಾತ್ರ ನೀರಿನ ಬಿಲ್ ಪಾವತಿಸುವ ಅನುಕೂಲ ನಾಗರಿಕರಿಗೆ ಲಭ್ಯವಾಗಲಿದೆ ಎಂದು ಪಾಲಿಕೆ ನೀರಾವಿ ವಿಭಾಗದ ಕಾರ್ಯಪಾಲಕ ಅಭಿಯಂತರ ವಿನಯ್ ಮಾಹಿತಿ ತಿಳಿಸಿದರು.
ತುಮಕೂರು ಮಹಾನಗರ ಪಾಲಿಕೆ ಕರ ಸಂಗ್ರಹ ವ್ಯವಸ್ಥೆಯಲ್ಲಿ ಪಾಲಿಕೆ ಮಾಡುತ್ತಿರುವ ಪ್ರಯೋಗಗಳು ರಾಜ್ಯಮಟ್ಟದಲ್ಲಿ ಪ್ರಶಂಸೆ ಪಡೆದಿದ್ದು, ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ನಲ್ಲಿ ಸಂಪರ್ಕದಿಂದ ಪಾಲಿಕೆ ಆದಾಯಕ್ಕೆ ಆಗುತ್ತಿರುವ ಖೋತಾ ತಡೆಗಟ್ಟಿ ಸಂಪನ್ಮೂಲ ಹೆಚ್ಚಳ, ಪಾರದರ್ಶಕತೆಗೆ ಆದ್ಯತೆ ನೀಡಲು ನವೆಂಬರ್‌ನಿಂದ ಅಕ್ರಮ ಸಂಕ್ರಮ ಅಭಿಯಾನ ನಡೆಸಲಾಗುವುದು. – ರೇಣುಕಾ, ಆಯುಕ್ತರು, ಮಹಾನಗರಪಾಲಿಕೆ
ತುಮಕೂರು ನಗರದ ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡಲು ಈಗಾಗಲೇ ಸಭೆಯಲ್ಲಿ ನಿರ್ಣಯಿಸಿ ಸೂಚನೆ ನೀಡಿದ್ದೇವೆ. ನಲ್ಲಿಗಳನ್ನು ಸಕ್ರಮ ಮಾಡುವ ಕೆಲಸ ಆರಂಭವಾಗುತ್ತದೆ. ನಗರದ ನಾಗರಿಕರು ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡಿಕೊಳ್ಳಬೇಕು. ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡುವ ಹಿನ್ನಲೆಯಲ್ಲಿ ಇರುವ ದರವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. – ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್
ಅಕ್ರಮ ನಲ್ಲಿ ಸಂಪರ್ಕಗಳನ್ನು ಸಕ್ರಮಗೊಳಿಸುವ ಯೋಜನೆಯನ್ನು ವಾರ್ಡ್‌ವಾರು ಅಭಿಯಾನದ ರೂಪದಲ್ಲಿ ಕೈಗೊಳ್ಳಲು ಯೋಜನೆ ರೂಪಿಸುತ್ತಿದ್ದು, ಮುಂದಿನ ಆರು ತಿಂಗಳಲ್ಲಿ 15 ಸಾವಿರದಲ್ಲಿ ಸುಮಾರು 10 ಸಾವಿರಕ್ಕೂ ಮೇಲ್ಪಟ್ಟು ಅನಧಿಕೃತ ಸಂಪರ್ಕಗಳನ್ನು ಸಕ್ರಮಕ್ಕೆ ಸದಸ್ಯರ ಸಹಕಾರದೊಂದಿಗೆ ಗುರಿಹಾಕಿಕೊಳ್ಳಲಾಗಿದೆ. – ವಿನಯ್, ಕಾರ್ಯಪಾಲಕ ಅಭಿಯಂತರ, ನಗರ ನೀರಾವರಿ ವಿಭಾಗ