ಗೊಂದಲವಿಲ್ಲದ ಬದುಕೇ ಇಲ್ಲ. ಹಾಗಂತ ಯಾವುದನ್ನೂ ಇದ್ದ ಹಾಗೇ ಒಪ್ಪಿಕೊಳ್ಳಬೇಕೆಂಬ ನಿಯಮವೂ ಇಲ್ಲ. ಆದರೆ ಇದೇ ಗೊಂದಲ ನಮ್ಮ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡುವುದಂತೂ ಸತ್ಯ. ಇಲ್ಲೊಂದು ಪುಟ್ಟ ಕಥೆಯಿದೆ. ಪ್ರತಿಯೊಬ್ಬರ ಬದುಕಿಗೂ ಹೊಂದಿಕೆಯಾಗುವಂಥದ್ದು, ಉತ್ತಮ ಪಾಠವೊಂದನ್ನು ಹೇಳುವಂಥದ್ದು.
ಅಮ್ಮನಲ್ಲಿ ಕಾಡಿ ಬೇಡಿ ಗೊಂಬೆಯೊಂದನ್ನು ಮನೆಗೆ ಕೊಂಡು ತಂದ ಬಾಲಕಿಯೊಬ್ಬಳಿಗೆ ನಿತ್ಯವೂ ಅದನ್ನು ನೋಡುತ್ತಿರುವುದೇ ಕಾಯಕವಾಯಿತು. ಹೀಗಾಗಿ ಅದರ ಮೇಲೆ ಪ್ರೀತಿ ಕೊಂಚ ಹೆಚ್ಚಾಯ್ತು. ಒಂದು ದಿನ ಬೊಂಬೆಯ ಗಲ್ಲ ನೇವರಿಸಿದಾಗ ಬೆರಳುಗಳಿಗೆ ಕಲ್ಲೊಂದು ತಾಗಿ ಹುಣ್ಣಾಯಿತು.
ಮನಸ್ಸಿಗೇನೋ ಪಿಚ್ಚೆನಿಸಿತು. ಇದಾದ ಮೇಲೆ ಬೊಂಬೆಯನ್ನು ಹಿಂದಿನಂತೆ ತುಂಬು ಪ್ರೀತಿಯಿಂದ ನೋಡಲು ಆಗಲಿಲ್ಲ. ಕಣ್ಣು ಅತ್ತ ಹರಿದಾಗಲೆಲ್ಲ ನೋವು ಮಾಡಿದ ಗೊಂಬೆಯನ್ನು ನೋಡಿ ಸಿಟ್ಟು ಬರುತ್ತಿತ್ತು. ಬೊಂಬೆಯನ್ನು ಎಸೆದುಬಿಡಲೂ ಮನಸ್ಸಾಗದೆ ಮನೆಯ ಹತ್ತಿರದಲ್ಲೇ ಇದ್ದ ಶಿಲ್ಪಿಯ ಬಳಿ ತೆಗೆದುಕೊಂಡು ಹೋದಳು. ಶಿಲ್ಪಿಗೆ ಬಂದ ವಿಷಯ ತಿಳಿಸಿದಾಗ ಅಷ್ಟೇನಾ… ಜೇಡಿಮಣ್ಣಿನೊಳಗಿನ ಕಲ್ಲು ಬಿದ್ದಿದೆ. ಕೊಡು ಇಲ್ಲಿ ಎಂದು ಬೊಂಬೆಯನ್ನು ತೆಗೆದುಕೊಂಡು ಸಣ್ಣ ಮೊಳೆಯನ್ನು ಕಲ್ಲಿಗೆ ಗುರಿ ಮಾಡಿ ಸುತ್ತಿಗೆಯಿಂದ ಹೊಡೆದಾಗ ಕಲ್ಲು ಉದುರಿಬಿತ್ತು. ಜತೆಗೆ ಬಾಲಕಿಯ ಮನದೊಳಗಿದ್ದ ಕಿರಿಕಿರಿಯೂ. ಈಗ ಆ ಬೊಂಬೆಯನ್ನು ಕೈಗೆ ತೆಗೆದುಕೊಂಡು ನೋಡಿದೆ. ಬಹಳ ಹಿಡಿಸಿತು. ಈ ಕೆಲಸ ನಾನೇ ಮಾಡಬಹುದಿತ್ತು ಎಂದುಕೊಂಡಳು.
ಬೊಂಬೆಯನ್ನು ಚೀಲದೊಳಗೆ ಇಟ್ಟುಕೊಂಡು ಹೊರಡಲು ಸಿದ್ಧಳಾದವಳಿಗೆ ಮಣಿಗಳಿಂದ ಅಲಂಕೃತವಾದ ಬೊಂಬೆಯೊಂದು ತನ್ನತ್ತ ಸೆಳೆಯಿತು. ಅದನ್ನೂ ಶಿಲ್ಪಿಯಿಂದ ಕೇಳಿ ಪಡೆದು ಮೊದಲನೆ ಬೊಂಬೆಯ ಪಕ್ಕದಲ್ಲಿ ಇರಿಸಿದಳು. ವಾರ ಕಳೆಯಿತು. ಅದೇನು ವಿಚಿತ್ರವೋ ಇಲ್ಲಿಯವರೆಗೂ ಚಂದವಾಗಿ ಕಾಣುತ್ತಿದ್ದ ಎರಡನೇ ಬೊಂಬೆಯಲ್ಲೂ ದೋಷವೊಂದು ಕಣ್ಣಿಗೆ ಬಿತ್ತು. ಮನದಲ್ಲಿ ಮತ್ತದೇ ಕುದಿಕುದಿ.
ತಡಮಾಡದೆ ಬೊಂಬೆಯಲ್ಲಿ ಕಾಣುತ್ತಿದ್ದ ತಂತಿಯನ್ನು ಎಳೆದಳು. ಸಾಧ್ಯವಾಗದೇ ಇದ್ದಾಗ ಇಕ್ಕಳದಿಂದ ಇರಿಯುವ ಪ್ರಯತ್ನ ಮಾಡಿದಳು. ಬಲ ಒಗ್ಗೂಡಿಸಿ ತಂತಿ ಎಳೆದಾಗ ಬೊಂಬೆಯ ಕೊರಳಲ್ಲಿದ್ದ ಮಣಿಸರ ಕೆಳಗೆ ಬಿದ್ದು, ಬೊಂಬೆ ಎರಡು ಭಾಗವಾಯಿತು. ಭಾರೀ ಸಂಕಟಕ್ಕೀಡಾದ ಅನುಭವ. ಮತ್ತೆ ಶಿಲ್ಪಿಯ ಬಳಿಗೆ ಓಡಿದಳು ಬಾಲಕಿ.
ಎಲ್ಲವನ್ನೂ ಆಲಿಸಿದ ಶಿಲ್ಪಿ ಆ ತಂತಿಯೇ ಸರ ಹಾಗೂ ಬೊಂಬೆಯ ದೇಹದ ಭಾಗಗಳಿಗೆ ಆಧಾರವಾಗಿತ್ತು. ಅದನ್ನು ಬದಲಾಯಿಸಲು ಹೋಗಬಾರದು. ಕೆಲವನ್ನು ಬದಲಾಯಿಸಬಾರದು. ಇದ್ದ ಹಾಗೇ ಇರಬೇಕು. ಅದೇ ಚಂದ ಎಂದ. ಅನಂತರ ಬಹಳ ಅನುರೂಪವಾದ ಬೊಂಬೆ ತಂದಿತ್ತ. ಖುಷಿಯಿಂದ ಮೂರು ಬೊಂಬೆಗಳನ್ನು ಒಂದರ ಪಕ್ಕದಲ್ಲಿ ಮತ್ತೂಂದರಂತೆ ತಂದು ಮನೆಯಲ್ಲಿ ಜೋಡಿಸಿಕೊಂಡಳು.
ಸದಾ ಬೊಂಬೆಗಳನ್ನು ನೋಡುವ ಹವ್ಯಾಸವಂತೂ ಮುಂದುವರಿದಿತ್ತು. ಒಂದಷ್ಟು ದಿನಗಳು ಕಳೆದ ಮೇಲೆ ಅದೇನೋ ಬೆನ್ನು ಬಿಡದ ಶಾಪದಂತೆ ಮೂರನೆಯ ಗೊಂಬೆಯಲ್ಲೂ ದೋಷ ಕಾಣಿಸತೊಡಗಿತು. ಅಷ್ಟರಲ್ಲಿ ಶಿಲ್ಪಿಯ ಮಾತು ಕಿವಿಯಲ್ಲಿ ಅನುರಣಿಸಿತು. ನೋಡು ನೋಡುತ್ತಾ ಸೌಂದರ್ಯ ಗೌಣವಾಗಿ ಆ ಮೂರು ಬೊಂಬೆಗಳು ನನ್ನಲ್ಲಿ ಹೊಸ ಆಲೋಚನೆ ಹುಟ್ಟುಹಾಕುತ್ತಿತ್ತು. ಕೆಲವು ಪರಿಸ್ಥಿತಿ ಅಥವಾ ವ್ಯಕ್ತಿಗಳನ್ನು ಬದಲಿಸಬಹುದು. ಮತ್ತೆ ಕೆಲವನ್ನು ಇರುವ ಹಾಗೆಯೇ ಒಪ್ಪಿಕೊಳ್ಳಬೇಕು. ಮೂರನೆಯ ಗೊಂಬೆಯ ರೀತಿ.
ವಿದ್ಯಾ