Advertisement
ವಿರಸವೆಂಬ ವಿಷಕೆ, ಬಲಿಯಾದೆ ಏತಕೆ?- ಈ ಹಾಡು ಕೇಳುವಾಗ, ನಾನು ಚಿಕ್ಕಮಗಳೂರಿನ ಸನಿಹವಿದ್ದೆ. ಅದು “ಬೂತಯ್ಯನ ಮಗ ಅಯ್ಯು’ ಚಿತ್ರದ ಹಾಡು. ಆ ಸಿನಿಮಾದ ಚಿತ್ರೀಕರಣವಾಗಿದ್ದು, ಅಲ್ಲಿಯೇ ಚಿಕ್ಕಮಗಳೂರಿನ ಸನಿಹದ ಕಳಸಾಪುರ ಅನ್ನೋ ಪುಟ್ಟ ಹಳ್ಳಿಯಲ್ಲಿ. ಬೂತಯ್ಯನ ಅಟ್ಟಹಾಸವನ್ನು ತೆರೆ ಮೇಲೆ ಹತ್ತಾರು ಬಾರಿ ನೋಡಿದ್ದ ನನಗೆ, ಸಿನಿಮಾದ ಶೂಟಿಂಗ್ ನಡೆದ ಪ್ರತಿ ತಾಣಗಳೂ, ಮನದೊಳಗೆ ಕಾಡುತ್ತಲೇ ಇದ್ದವು.
Related Articles
Advertisement
ಹೋಟೆಲ್ ದೃಶ್ಯ ಚಿತ್ರೀಕರಿಸಿದ ತಾಣದ ಪಕ್ಕದಲ್ಲಿಯೇ ಇರೋದು ಬೂತಯ್ಯನ ಮನೆ. ಆ ಚಿತ್ರದಲ್ಲಿ ಬೂತಯ್ಯನ ಮನೆ, ಊರಿನವರ ಕೋಪಕ್ಕೆ ಸಿಲುಕಿ, ಬೆಂಕಿಗೆ ಆಹುತಿಯಾಗುತ್ತದೆ. ಶೂಟಿಂಗ್ ವೇಳೆ ಮನೆಯ ಮಾಲೀಕನ ಅನುಮತಿ ಪಡೆದು, ನಿಜವಾಗಿಯೂ ಆ ಮನೆಯನ್ನು ಸುಟ್ಟಿದ್ದರಂತೆ. ಸರಿಯಾಗಿ ಬೆಂಕಿ ಹೊತ್ತಿಕೊಳ್ಳಲಿಲ್ಲ ಎಂಬ ಕಾರಣಕ್ಕೆ, ಮತ್ತೆರಡು ಸಲ ಬೆಂಕಿ ಕೊಟ್ಟು, ಮಾಡನ್ನು ಉರುಳಿಸಿದ್ದರಂತೆ.
ಅದ್ಭುತವಾಗಿ ಕಟ್ಟಿದ್ದ ಆ ಮನೆಗೆ ನಿಜವಾಗಿಯೂ ಬೆಂಕಿಯಿಟ್ಟ ಕತೆಯನ್ನು ಊರಿನವರಿಂದ ಕೇಳಿ, ನನಗೇ “ಅಯ್ಯೋ’ ಅಂತನ್ನಿಸಿತು. ಇಂದು ಅದೇ ಜಾಗದಲ್ಲಿ ಹೊಸ ಮನೆ ಎದ್ದುನಿಂತಿದೆ. “ಬೂತಯ್ಯನ ಮನೆ’ ಅಂತಲೇ ಅದಕ್ಕೂ ಕರೆಯುತ್ತಾರೆ. ಊರಿನ ಸರ್ಕಲ್‌ಗೂ “ಬೂತಯ್ಯನ ವೃತ್ತ’ ಅಂತಲೇ ಇಟ್ಟಿದ್ದಾರೆ. ಬೂತಯ್ಯನ ಮನೆಯ ಹಿಂಭಾಗದಲ್ಲಿ ಚಿತ್ರದಲ್ಲಿ ತೋರಿಸಿದ್ದ ಕೊಟ್ಟಿಗೆ, ಈಗಲೂ ಹಾಗೆಯೇ ಇದೆ. ಸ್ವಲ್ಪವೂ ಬದಲಾದಂತೆ ಕಾಣಲಿಲ್ಲ.
ಅದರಾಚೆಗಿರುವ ಗುಳ್ಳನ ಮನೆಯನ್ನು ಸ್ವಲ್ಪ ಮಾರ್ಪಾಡು ಮಾಡಿದ್ದನ್ನು ಕಂಡೆ. ಗುಳ್ಳನ ಮನೆ ರಸ್ತೆಯಲ್ಲಿಯೇ ವಾದಿರಾಜ ಸ್ವಾಮಿ ದೇವಸ್ಥಾನವಿದೆ. ಚಿತ್ರದಲ್ಲಿ ಬರುವ ಗಾಡಿ ಓಡಿಸುವ ಸ್ಪರ್ಧೆ ಮುಕ್ತಾಯ ಕಾಣುವುದು ಇದೇ ದೇವಸ್ಥಾನದ ಮುಂದೆ. ಅಂದು ಪ್ರತಿ ಮನೆಯಲ್ಲೂ ಎತ್ತುಗಳನ್ನು ಸಾಕುತ್ತಿದ್ದರು. ಎತ್ತಿನಗಾಡಿಗಳೂ ಇದ್ದವು. ಈಗ ಹಲವರ ಮನೆಗೆ ಟ್ರ್ಯಾಕ್ಟರ್, ಟಿಲ್ಲರ್‌ಗಳು ಬಂದಿವೆ.
ಅಯ್ಯು, ತನ್ನ ಅಪ್ಪ ಬೂತಯ್ಯನ ಹೆಣವನ್ನು ಗಾಡಿಯಲ್ಲಿ ತುಂಬಿಕೊಂಡು ಹೋದ ರಸ್ತೆಯಲ್ಲಿ ನಡೆದಾಡಿದಾಗ, ಈ ಊರು ಈಗಲೂ, ಹಿಂದೆಯೂ ಎಷ್ಟೊಂದು ಚೆಂದವಿತ್ತು ಅಂತನ್ನಿಸಿತು. ಗುಳ್ಳನ ಅಪ್ಪ ದೇವಯ್ಯ ನೇಣು ಹಾಕಿಕೊಂಡ ಆಲದ ಮರ, ತಂಪು ಗಾಳಿ ಬೀಸುತ್ತಿತ್ತು. ಅಂದು ಶೂಟಿಂಗ್ ಅನ್ನು ಕಣ್ಣರಳಿಸಿಕೊಂಡು ನೋಡಿದ್ದ ಚಿಣ್ಣರು, ಈಗ ಹಣ್ಣುಗೂದಲಿನ ಅಜ್ಜ- ಅಜ್ಜಿಯರು. ಅವರ ಕಂಗಳಲ್ಲಿ ಇನ್ನೂ ಚಿತ್ರದ “ನೆನಪುಗಳ ಶೋ’ ನಡೆಯುತ್ತಿತ್ತು. ಊರಿನ ಹಲವರು ಸಿನಿಮಾದಲ್ಲಿ ಜೂನಿಯರ್ ಕಲಾವಿದರಾಗಿ ನಟಿಸಿದ್ದರಂತೆ.
ಬೂತಯ್ಯನ ಮನೆ ಲೂಟಿ ಆಗುವಾಗ, ಎತ್ತಿನ ಸ್ಪರ್ಧೆ ನೋಡುವಾಗ, ಮದುವೆ ದಿಬ್ಬಣಕ್ಕೆ ಸಾಕ್ಷಿಯಾಗುವಾಗ, ಅನೇಕರು ಕಾಣಿಸಿಕೊಂಡಿದ್ದಾರೆ. ದುಡ್ಡೇ ಎಲ್ಲವೂ ಅಲ್ಲ. ಪ್ರೀತಿ- ನಂಬಿಕೆ- ಮಾನವೀಯತೆಯೇ ಶಾಶ್ವತ ಎಂಬ ಜೀವನದ ಸರಳಸೂತ್ರ ಹೇಳಿದ “ಬೂತಯ್ಯನ ಮಗ ಅಯ್ಯು’ ತೆರೆಮೇಲೆ ಮೂಡಿ, ಈಗ 45 ವರ್ಷಗಳು. ಅಲ್ಲಿ ಗುಳ್ಳ ಆಗಿದ್ದ ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿ, ನಾಡಿದ್ದಿಗೆ (ಡಿ.30) ಭರ್ತಿ 10 ವರ್ಷಗಳು. ಈ ಸಂಗತಿಗಳನ್ನೆಲ್ಲ ಜೀವಂತವಾಗಿಟ್ಟ ಕಳಸಾಪುರ ಮಾತ್ರ ಕಣ್ಣಿನ ಮುಂದೆ ಹಾಗೆಯೇ, ಅಂದಿನ ಚೆಲುವು ತುಂಬಿಕೊಂಡೇ, ಹಳೇ ಹಾಡು ಹಾಡುತ್ತಿದೆ.
ಟೆಂಟ್‌ನಲ್ಲಿ ಊರಿನವರಿಗೆ ಸ್ಪೆಷಲ್ ಶೋ!: ಬೂತಯ್ಯನ ಚಿತ್ರ ತೆರೆಕಂಡ ಮೇಲೆ, ಊರಿನವರಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಆಗ ಕಳಸಾಪುರದಲ್ಲಿದ್ದ ಬೀರಲಿಂಗೇಶ್ವರ ಎಂಬ ಟೆಂಟ್ ಚಿತ್ರಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗಿತ್ತು. ಪರದೆ ಮೇಲೆ ಊರನ್ನು ಕಂಡಾಗ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ, ಆ ಹೊತ್ತಿನಲ್ಲಿ ಈ ಊರಿನಲ್ಲಿ ಕರೆಂಟೇ ಇದ್ದಿರಲಿಲ್ಲ. 90ರ ದಶಕದಲ್ಲಿ ವಿದ್ಯುತ್ ಬಂದಾಗ, ಟಿ.ವಿ.ಗಳಲ್ಲಿ ಮತ್ತೆ ಬೂತಯ್ಯನ ದರ್ಶನವಾಯಿತು. ಶೂಟಿಂಗ್ ಆಗುವ ವೇಳೆ 600 ಮನೆಗಳಿದ್ದ ಊರು, ಈಗ 2 ಸಾವಿರ ಮನೆಯ ದೊಡ್ಡ ಊರಾಗಿ ಬೆಳೆದಿದೆ.
“ಬೂತಯ್ಯ…’ ಸಿನಿಮಾದ ಶೂಟಿಂಗ್ ಆಗುವಾಗ ನಾವಿನ್ನೂ ಹುಟ್ಟಿಯೇ ಇರಲಿಲ್ಲ. ಟಿವಿಯಲ್ಲಿ ಚಿತ್ರ ಬಂದಾಗಲೆಲ್ಲ, ನಮ್ಮೂರನ್ನು ನೋಡಿ ಖುಷಿಯಾಗುತ್ತದೆ. ಅಂದು 2 ತಿಂಗಳು ಶೂಟಿಂಗ್ ನಡೆದಿತ್ತು ಎಂದು ಊರಿನ ಹಿರಿಯರು ಹೇಳುತ್ತಾರೆ.-ರಘು ಸಿ., ಕಳಸಾಪುರದ ಯುವಕ * ರೂಪೇಶ್ ರಾಜಣ್ಣ