Advertisement

ಸಣ್ಣ ಪಂಚಾಯಿತಿಯಲ್ಲಿ, ದೊಡ್ಡ ಚುನಾವಣಾ ಕಾವು

09:04 PM May 04, 2019 | Team Udayavani |

ಸಂತೆಮರಹಳ್ಳಿ: ಯಳಂದೂರು ಪಟ್ಟಣ ಹಾಗೂ ತಾಲೂಕು ಇಡೀ ರಾಜ್ಯದಲ್ಲೇ ಅತ್ಯಂತ ಪುಟ್ಟದ್ದು. ಈ ಚಿಕ್ಕ ಪಟ್ಟಣ ಪಂಚಾಯಿತಿಗೆ ಚುನಾವಣಾ ದಿನಾಂಕ ನಿಗದಿಯಾಗಿದೆ. ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಚುನಾವಣೆಯ ಕಾವು ದೊಡ್ಡ ಮಟ್ಟದಲ್ಲಿ ಏರಿಕೆಯಾಗಿ, ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ.

Advertisement

ಚುನಾವಣೆಯಲ್ಲಿ ಸ್ಪರ್ಧಿಸಲು ವಿವಿಧ ಪಕ್ಷಗಳಿಂದ ಆಕಾಂಕ್ಷಿಗಳ ಪಟ್ಟಿ, ಸಿದ್ಧತೆಗಳನ್ನು ಕೈಗೊಳ್ಳುವ ಕಾರ್ಯವು ಭರದಿಂದ ಸಾಗುತ್ತಿದೆ. ಈ ಬಾರಿಯ ಸ್ಥಳೀಯ ಸಂಸ್ಥೆಯ ಚುನಾವಣೆ ಬಹಳ ಮಹತ್ವದ್ದಾಗಿದೆ. ಪಟ್ಟಣದಲ್ಲಿ 11 ವಾರ್ಡ್‌ಗಳಿದ್ದು, 3,548 ಮಹಿಳಾ ಮತದಾರರು, 3,392 ಪುರುಷ ಮತದಾರರು ಸೇರಿದಂತೆ ಒಟ್ಟು 6,940 ಮತದಾರರು ಇದ್ದಾರೆ.

ಕೊಳ್ಳೇಗಾಲ ಮೀಸಲು ವಿಧಾನ ಸಭೆಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಹಾಗೂ ಜೆಡಿಎಸ್‌ ಸೇರಿದಂತೆ 4 ಪಕ್ಷಗಳಿಂದಲೂ ಟಿಕೆಟ್‌ ನೀಡುವಂತೆ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ. ಟಿಕೆಟ್‌ ಹಂಚಿಕೆ ಪಕ್ಷಗಳ ವರಿಷ್ಠರಿಗೆ ತಲೆನೋವು ತಂದಿಡುವ ಸಂದರ್ಭಗಳೇ ಹೆಚ್ಚಾಗಿವೆ.

ಕಳೆದ ಬಾರಿಯ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ – 5, ಬಿಜೆಪಿ – 4, ಜೆಡಿಎಸ್‌- 1, ಒಬ್ಬ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.

ಈ ಬಾರಿಯ ಮೀಸಲಾತಿ: ಈ ಬಾರಿಯ ಚುನಾವಣೆಯಲ್ಲಿ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. 1ನೇ ವಾರ್ಡ್‌ ಸಾಮಾನ್ಯ, 2ನೇ ವಾರ್ಡ್‌ ಸಾಮಾನ್ಯ, 3ನೇ ವಾರ್ಡ್‌ ಪರಿಶಿಷ್ಟ ಪಂಗಡ, 4ನೆ ವಾರ್ಡ್‌ ಸಾಮಾನ್ಯ (ಮಹಿಳೆ), 5ನೇ ವಾರ್ಡ್‌ ಪರಿಶಿಷ್ಟ ಜಾತಿ, 6ನೇ ವಾರ್ಡ್‌ ಪರಿಶಿಷ್ಟ ಪಂಗಡ, 7 ನೇ ವಾರ್ಡ್‌ ಪರಿಶಿಷ್ಟ ಪಂಗಡ (ಮಹಿಳೆ),

Advertisement

8ನೇ ವಾರ್ಡ್‌ ಸಾಮಾನ್ಯ, 9 ನೇ ವಾರ್ಡ್‌ ಪರಿಶಿಷ್ಟ ಜಾತಿ (ಮಹಿಳೆ), 10 ನೇ ವಾರ್ಡ್‌ ಸಾಮಾನ್ಯ (ಮಹಿಳೆ), 11 ನೇ ವಾರ್ಡ್‌ ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ. ಹಾಗಾಗಿ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ತಮ್ಮ ಪಕ್ಷದಿಂದ ಟಿಕೆಟ್‌ ಕೊಡಿಸುವಂತೆ ಪಕ್ಷದ ನಾಯಕರನ್ನು ಓಲೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಬಾರಿ ಬಿಎಸ್‌ಪಿ ಖಾತೆ ತೆರೆಯುವುದೇ?: ಕೊಳ್ಳೇಗಾಲ ಮೀಸಲು ವಿಧಾನ ಸಭೆಯಲ್ಲಿ ಈ ಬಾರಿ ಬಿಎಸ್‌ಪಿ ಪಕ್ಷದಿಂದ ಪ್ರಥಮ ಶಾಸಕರಾಗಿ ಎನ್‌.ಮಹೇಶ್‌ ಆಯ್ಕೆಯಾಗಿದ್ದಾರೆ. ಈ ಪಕ್ಷ ಪಟ್ಟಣ ಪಂಚಾಯಿತಿಯಲ್ಲಿ ಇದುವರೆಗೂ ಗೆದ್ದಿಲ್ಲ.

ಎನ್‌. ಮಹೇಶ್‌ ಅವರು ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಖಾತೆಯನ್ನು ತೆರೆಯುತ್ತಾರೋ ಇಲ್ಲವೋ, ಎಷ್ಟು ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಜೊತೆಗೆ ಶಾಸಕರು ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಬೇಕಾದರೆ ಪಕ್ಷದ ಕಾರ್ಯಕರ್ತರನ್ನು ಈ ಬಾರಿ ಹೇಗೆ ಗೆಲ್ಲಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ: ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಪಟ್ಟಣ ಪಂಚಾಯಿತಿಯು ಕಳೆದ ಬಾರಿ ಅಧಿಕಾರವನ್ನು ಹಿಡಿದಿತ್ತು. ಆದರೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆೆ ಬಿಟ್ಟುಕೊಟ್ಟಿತ್ತು. ಈ ಬಾರಿ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ಈ ಹಿಂದೆಯೇ ಹಲವು ಬಾರಿ ಸಭೆಯನ್ನು ನಡೆಸಿದ್ದಾರೆ. ಅಲ್ಲದೆ ಯಾವ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಗೆಲುವು ಸುಲಭವಾಗುತ್ತದೆ ಎಂಬುದರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಅಸ್ತಿತ್ವ ಉಳಿಸಿಕೊಳ್ಳುವುದೇ ಬಿಜೆಪಿ: ಕಳೆದ ಬಾರಿ ಬಿಜೆಪಿ ಪಕ್ಷದ 4 ಸದಸ್ಯರು ಆಯ್ಕೆಯಾಗಿದ್ದರು. ಆದ್ದರಿಂದ ಈ ಬಾರಿಯು ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡು ಇನ್ನೂ ಹೆಚ್ಚಿನ ಸದಸ್ಯರನ್ನು ಗೆಲ್ಲುಸುವ ಮೂಲಕ ಈ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದೇ ಕಾದು ನೋಡಬೇಕಿದೆ. ಜೊತೆಗೆ ಜೆಡಿಎಸ್‌ ಯಾವ ರೀತಿ ರಣತಂತ್ರ ರೂಪಿಸುವುದೋ ಕಾದು ನೋಡಬೇಕಿದೆ.

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next