ಚಿಕ್ಕಮಗಳೂರು: ಜನಸಂಪರ್ಕ ಸಭೆ ಹೆಸರಿನಲ್ಲಿ ಪಕ್ಷದ ಕಾರ್ಯಕ್ರಮ ನಡೆಸುತ್ತಿರುವ ಶಾಸಕ ಸಿ.ಟಿ.ರವಿ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಳೆದ 6 ತಿಂಗಳಿನಿಂದ ಶಾಸಕ ಸಿ.ಟಿ.ರವಿ ಸರ್ಕಾರದ ಖರ್ಚಿನಲ್ಲಿ ಗ್ರಾಮೀಣ ಪ್ರದೇಶಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ಆದರೆ ಸಭೆ ನಡೆಯುವ ಸ್ಥಳಗಳಲ್ಲಿ ಪಕ್ಷದ ಬ್ಯಾನರ್ ಹಾಗೂ ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಪಕ್ಷದ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ದೂರಿದರು. ಜನಸಂಪರ್ಕ ಸಭೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಜನಸಂಪರ್ಕ ಸಭೆಗೆ ತಗುಲುವ ವೆಚ್ಚವನ್ನು ನಗರಸಭೆ ಹಾಗೂ ಇನ್ನಿತರೆ ಸರ್ಕಾರಿ ಇಲಾಖೆಗಳು ಭರಿಸುತ್ತಿವೆ. ಸರ್ಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಪಕ್ಷದ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಹಾಗೂ ಜನಸಂಪರ್ಕ ಸಭೆಗೆ ವೆಚ್ಚವಾಗಿರುವ ಹಣವನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಕಾನೂನು ಉಲ್ಲಂಘನೆ : ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆ ಅನಿಲ ಭಾಗ್ಯ ಯೋಜನೆಯ ತಿಳುವಳಿಕೆ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮ್ಮ ಭಾವಚಿತ್ರಗಳನ್ನು ಹಾಕುವ ಮೂಲಕ ಶಾಸಕ ಸಿ.ಟಿ.ರವಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿದರು. ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವಿದೆ. ಈಗಾಗಲೆ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಚುನಾವಣಾ ಸಂದರ್ಭವಾಗಿರುವುದರಿಂದ ಶಾಸಕ ಸಿ.ಟಿ.ರವಿ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ಎಂದು ಕೊಡುತ್ತಿದ್ದು, ಅದರಲ್ಲಿ ಪ್ರಧಾನಿ ಮೋದಿ ಹಾಗೂ ಶಾಸಕರ ಭಾವಚಿತ್ರ ಹಾಕಿದ್ದಾರೆ. ಆದರೆ ಈ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕದಿರುವುದು ಖಂಡನೀಯ ಎಂದರು. ತಮ್ಮ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಮಾಡಿಲ್ಲ. ನೀರಾವರಿ ಯೋಜನೆಯ ಬಗ್ಗೆ ತಮ್ಮ ಅವಧಿಯಲ್ಲಿ ನಿರ್ಲಕ್ಷ ಧೋರಣೆ ತಾಳಿದ್ದಾರೆ. ಇತ್ತೀಚೆಗೆ ಹೆಬ್ಬೆ ಜಲಪಾತದಿಂದ ಅಯ್ಯನ ಕೆರೆ ಹಾಗೂ ಮದಗದ ಕೆರೆಗೆ ನೀರು ತರುವ ಯೋಜನೆಗೆ ತಕರಾರು ಎತ್ತಿದ ಶಾಸಕರು, ಬಯಲು ಸೀಮೆ ಭಾಗಗಳಿಗೆ ನೀರು ಹರಿಸುವ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ರೈತರ ಬಗ್ಗೆ ಕಾಳಜಿ ಇಲ್ಲದ ಶಾಸಕರು ಬಯಲು ಸೀಮೆ ಭಾಗದ ಜನ ತಮ್ಮನ್ನು ತಿರಸ್ಕರಿಸುತ್ತಾರೆ ಹಾಗೂ ಸೋಲಿನ ಭಯದಿಂದ ದಿನಕ್ಕೊಂದು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಜನರು ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದರು.
ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಬಯಲು ಭಾಗದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೆಬ್ಬೆ ಜಲಪಾತದಿಂದ ನೀರು ತರುವ ಯೋಜನೆ ಡಿಪಿಆರ್ ಆಗಿ ಸರ್ಕಾರದ ಮಟ್ಟದಲ್ಲಿದ್ದು, ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡುವ ಹಂತದಲ್ಲಿದೆ. ಆದರೆ ಶಾಸಕರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಶಾಸಕ ಸಿ.ಟಿ.ರವಿ ಭದ್ರಾ ನೀರು ತರುವ ಯೋಜನೆಯಲ್ಲಿ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ, ಈ ಯೋಜನೆ ತರುವಲ್ಲಿ ಸ್ವಲ್ಪಮಟ್ಟಿಗೆ ವೈಎಸ್‌ವಿ ದತ್ತರವರು ಶ್ರಮಿಸಿದ್ದಾರೆ ಎಂದ ಅವರು, ಈ ಬಾರಿ ಚುನಾವಣೆಯಲ್ಲಿ ಶಾಸಕ ಸಿ.ಟಿ.ರವಿಯವರನ್ನು ಬಯಲುಸೀಮೆ ಜನರು ಮನೆಗೆ ಕಳಿಸುವ ಕೆಲಸ ಮಾಡುತ್ತಾರೆ ಎಂದರು. ನಗರಸಭೆ ಸದಸ್ಯರಾದ ರೂಬಿನ್ ಮೋಸೆಸ್, ಹಿರೇಮಗಳೂರು ಪುಟ್ಟಸ್ವಾಮಿ, ಕಾಂಗ್ರೆಸ್ ಮುಖಂಡ ಸಂದೇಶ್ ಇದ್ದರು.