Advertisement
ಮಗು ಹುಟ್ಟಿದ ತಕ್ಷಣ ಅದಕ್ಕೊಂದು ಹೆಸರಿಟ್ಟು ಹಬ್ಬ ಆಚರಿಸುತ್ತಾರೆ. ನಮ್ಮ ಪೂರ್ವಜರ ಕಾಲದಲ್ಲಿ ಮಗು ಹುಟ್ಟಿದ ನಂತರ ಗಂಡೋ-ಹೆಣ್ಣೋ ಖಚಿತವಾದ ಮೇಲೆ ಹೆಸರು ಹುಡುಕುತ್ತಿದ್ದರು. ಈಗ ಮಗು ಹುಟ್ಟುವ ಮೊದಲೇ ಇಂಟರ್‌ನೆಟ್‌ನಲ್ಲಿ ಅನೇಕ ಹೆಸರುಗಳನ್ನು ಹುಡುಕಿ, ಮನೆಯವರಿಗೆ ಆ ಹೆಸರು ಇಷ್ಟ ಆಗಲಿ ಬಿಡಲಿ ಬಲವಂತ ಮಾಡಿಯಾದರೂ ಒಪ್ಪಿಸುತ್ತಾರೆ.
Related Articles
Advertisement
ಜನರ ಗುಂಪಿನಲ್ಲಿ ನಿಮ್ಮ ಪ್ರೇಮಿಯ ಹೆಸರಿರುವ ಮತ್ತೂಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ನಿಮ್ಮ ಪ್ರೇಮಿಯ ಹೆಸರನ್ನು ಯಾರೋ ಕರೆದಾಗ ನಿಮ್ಮ ಕಿವಿ ಚುರುಕಾಗುತ್ತದೆ. ಮನಸ್ಸು ಮುಗುಳ್ನಗುತ್ತದೆ. ಹಾಗೆ ನಿಮ್ಮ ಪ್ರೇಮಿ ನಿಮ್ಮನ್ನು ಚಿನ್ನ, ಮುದ್ದು, ಬಂಗಾರ ಇದೆಲ್ಲ ಬಿಟ್ಟು ಅಪರೂಪಕ್ಕಾದರೂ ಒಂದು ಸಲ ನಿಮ್ಮ ಕಿವಿ ಬಳಿ ಬಂದು ನಿಮ್ಮ ಹೆಸರನ್ನು ಪಿಸುಗುಟ್ಟಿದರೆ, ನಿಮ್ಮ ಮನಸ್ಸಿಗೆ ಆಗುವ ಉನ್ಮಾದ, ಸಿಗುವ ಸುಖ ಯಾರಿಗೂ ವಿವರಿಸಿ ಹೇಳಲಾಗದು ಅಲ್ಲವೇ! ಆಗ, ಇನ್ನೊಂದ್ಸಲ ಹೇಳು, ಇನ್ನೊಂದ್ಸಲ ಹೇಳು ಅಂತ ನೀವೇ ಅವರನ್ನು ಕೇಳುವುದುಂಟು.
ಮದುವೆಯಾದ ಮೇಲೆ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ ಹುಡುಗಿಯ ಹೆಸರಿನ ಜೊತೆ ಹುಡುಗನ ಹೆಸರನ್ನು ಸೇರಿಸುತ್ತಾರೆ ಅಥವಾ ಅವರ ಜನಾಂಗದ ಹೆಸರು, ಗೋತ್ರದ ಹೆಸರು, ಇವತ್ತಿನ ಪೀಳಿಗೆಯ ಹುಡುಗಿಯರು ಈ ವಿಚಾರಕ್ಕೂ ಜಗಳ ಆಡಲು ಪ್ರಾರಂಭಿಸಿದ್ದಾರೆ. ನಾನ್ಯಾಕೆ ನಿನ್ನ ಹೆಸರನ್ನು – ನಿನ್ನ ಫ್ಯಾಮಿಲಿ ಹೆಸರನ್ನು ನನ್ನ ಹೆಸರಿನ ಜೊತೆ ಸೇರಿಸಿಕೊಳ್ಳಬೇಕು ? ನನಗೆ ನನ್ನದೇ ಆದ ಐಡೆಂಟಿಟಿ ಇದೆ ಅಂತ ಮದುವೆಗೆ ಮುಂಚೆಯೇ ಜಗಳ ಶುರು ಮಾಡುತ್ತಾರೆ. ಇವರ ಜಗಳ ಹುಡುಗನ ಜೊತೆ ಮಾತ್ರ. ಅವನ ತಂದೆ ತಾಯಿ ಮುಂದೆ ಅದನ್ನು ಹೇಳುವ ಧೈರ್ಯ ಅವರಿಗಿರಲ್ಲ. ಕೊನೆಗೆ ಗಂಡನ ಮನೆ ಹೆಸರು ಸೇರಿಸಿಕೊಂಡು ಸುಮ್ಮನಾಗುತ್ತಾರೆ. ಆ ಕೆಲಸ ಮೊದಲೇ ಮಾಡಬಹುದಿತ್ತು. ಆದರೂ ಜಗಳ ಮಾಡಲು ಒಂದು ಅವಕಾಶ ಸಿಕ್ಕಿತ್ತಲ್ಲ, ಅದನ್ನು ಬಳಸಿ ಕೊಂಡಿರುತ್ತಾರೆ. ಕೆಲ ಹುಡುಗರು ಅಯ್ಯೋ ಹೆಸರಿನಲ್ಲೇನಿದೆ ನಿನಗಿಷ್ಟ ಬಂದಂತೆ ಮಾಡು ಎನ್ನುತ್ತಾರೆ. ಇನ್ನು ಕೆಲವರು ಹುಡುಗಿಯ ಹೆಸರನ್ನೇ ಬದಲಾಯಿಸುತ್ತಾರೆ.
ಸಂಖ್ಯಾಶಾಸ್ತ್ರಕ್ಕನುಗುಣವಾಗಿ ಹೆಸರಿನ ಅಕ್ಷರಗಳನ್ನು ಬದಲಾಯಿಸಿ ಕೊಳ್ಳುವ ಖಯಾಲಿ ಈಗೀಗ ಹೆಚ್ಚುತ್ತಿದೆ. ಹೀಗೆ ಮಾಡುವುದರಿಂದ ಅದೃಷ್ಟ ಬದಲಾಗುತ್ತದೆ ಎಂಬ ನಂಬಿಕೆ. ನಿಜವಾಗಿಯೂ ಇದರಿಂದ ಎಷ್ಟು ಲಾಭವಿದೆ ಎಂಬುದನ್ನು ಹೆಸರಿನ ಅಕ್ಷರ ಬದಲಿಸಿಕೊಂಡವರೇ ಹೇಳಬೇಕು. ಅಂದಹಾಗೆ, ಹೀಗೆ ಮಾಡುವುದು ಕನ್ನಡದಲ್ಲಿ ಸಾಧ್ಯವಿಲ್ಲ. ಇಂಗ್ಲೀಷ್‌ನಲ್ಲಿ ಮಾತ್ರ ಸಾಧ್ಯ. ಕನ್ನಡದಲ್ಲಿ ಅಕ್ಷರ ಬದಲಾದರೆ ಹೆಸರಿನ ಅರ್ಥವೂ ಬದಲಾಗುತ್ತದೆ. ಆದರೆ ಇಂಗ್ಲೀಷ್‌ನಲ್ಲಿ ಸ್ಪೆಲ್ಲಿಂಗ್ ಬದಲಾದರೂ ಉಚ್ಛಾರ ಹಾಗೂ ಅರ್ಥ ಹಾಗೇ ಇರುತ್ತದೆ. ಏಕೆಂದರೆ ಅದು ಇಂಗ್ಲೀಷ್.
ಹೆಸರಿಗೆಷ್ಟು ಬೆಲೆಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೆಲ ಪ್ರಸಿದ್ಧ ಉತ್ಪನ್ನಗಳ ಹೆಸರನ್ನು ಗಮನಿಸಿ, ಅದಕ್ಕೆ ಬ್ರಾಂಡ್ ಎನ್ನುತ್ತಾರೆ. ಆ ಬ್ರಾಂಡ್‌ನ ಬೆಲೆಯೇ ನೂರಾರು ಕೋಟಿ ರೂಪಾಯಿ. ಬಹಳ ಪ್ರಸಿದ್ಧವಾದ ಉತ್ಪನ್ನದ ಹೆಸರನ್ನು ನೂರಾರು ಕೋಟಿ ರೂ. ನೀಡಿ ಖರೀದಿಸುವ ವ್ಯವಹಾರ ಕಾರ್ಪೋರೇಟ್ ವಲಯದಲ್ಲಿ ನಡೆಯುತ್ತಿರುತ್ತದೆ. ಇತ್ತೀಚೆಗೆ ಪ್ರಸಿದ್ಧ ವ್ಯಕ್ತಿಗಳ ಹೆಸರು ಕೂಡ ದೊಡ್ಡ ಬ್ರಾಂಡ್ ಆಗುತ್ತದೆ. ಉದಾಹರಣೆಗೆ ನಟ ಶಾರುಖ್‌ಖಾನ್ ಹೆಸರು. ಅದೊಂದು ಜನಪ್ರಿಯ ಬ್ರಾಂಡ್. ಆ ಹೆಸರಿನ ಜೊತೆಗೆ ನಡೆಸುವ ಎಲ್ಲಾ ವ್ಯವಹಾರಗಳೂ ಸಾಕಷ್ಟು ದುಡ್ಡು ಮಾಡುತ್ತವೆ. ತನ್ನ ಹೆಸರನ್ನು ನೀಡಿದ್ದಕ್ಕಾಗಿ ಶಾರುಖ್ ಕೂಡ ದುಡ್ಡು ಬಾಚುತ್ತಾನೆ.
ಎಲ್ಲಾ ವಸ್ತುಗಳಿಗೂ ಹೆಸರಿದೆ, ವ್ಯವಸ್ಥೆಗಳಿಗೂ ಹೆಸರಿದೆ, ಕೆಲಸಗಳಿಗೂ ಹೆಸರಿದೆ. ಜೀವನದ ಪ್ರತಿಯೊಂದು ಹಂತಕ್ಕೂ ಹೆಸರಿದೆ ಆದರೆ ಮನುಷ್ಯನ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಮಮತೆ, ಒಲವು, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ ನಾವು ಸತ್ತಾಗ, ನಮ್ಮ ದೇಹವನ್ನು ತೋರಿಸುವಾಗ ಯಾರೂ ಹೆಸರಿನ ಮೂಲಕ ಅದನ್ನು ಗುರುತಿಸುವುದಿಲ್ಲ. ರೂಪನ್ನ ಎಲ್ಲಿ ಮಲಗಿಸಿದ್ದೀರಾ ಅಂತ ಯಾರೂ ಕೇಳುವುದಿಲ್ಲ. ಬಾಡಿ ಎಲ್ಲಿದೆ ಅಂತಲೇ ಕೇಳುತ್ತಾರೆ. ನಾವು ಸತ್ತ ದಿನ ನಮ್ಮ ಹೆಸರು ನಮ್ಮ ಜೊತೆಗಿಲ್ಲದಿದ್ದರೂ ಜನರ ನೆನಪಿನಲ್ಲಿ, ನೆನಪಿನ ಮಾತುಗಳಲ್ಲಿ ಚಿರವಾಗಿರುತ್ತದೆ. ಹಾಗೆ ನಾವು ಬದುಕಿರುವಷ್ಟು ದಿನ ನಮ್ಮ ಜೊತೆ ಜೊತೆಗೇ ಇದ್ದು, ನಮ್ಮನ್ನು ಬೇರೆಯವರು ಗುರುತಿಸುವಂತೆ ಮಾಡುವುದೇ ನಮ್ಮ ಹೆಸರು.