Advertisement

ಬರದ ನಡುವೆಯೂ ಸಂಕ್ರಾಂತಿಗೆ ಸಜ್ಜು

07:51 AM Jan 15, 2019 | |

ದಾವಣಗೆರೆ: ಜಿಲ್ಲೆಯಾದ್ಯಂತ ತೀವ್ರ ಬರಗಾಲದ ನಡುವೆಯೂ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾತಿ ಸಿದ್ಧತೆ ನಗರದಲ್ಲಿ ಸೋಮವಾರ ಕಳೆಗಟ್ಟಿತ್ತು.

Advertisement

ಸಮೃದ್ಧಿಯ ಸಂಕೇತವಾಗಿರುವ ಸಂಕ್ರಾತಿ, ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬವಾಗಿದ್ದು, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲೂ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.

ಹಬ್ಬದ ಪ್ರಯುಕ್ತ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಗೊಂಬೆ, ಹಣ್ಣು, ಹೂವು, ಪೂಜಿಸಲು ಕಬ್ಬನ್ನು ಮಹಿಳೆಯರು, ಹಿರಿಯರು, ಯುವತಿಯರು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ನಡುವೆಯೂ ಅನುಕೂಲಕ್ಕೆ ತಕ್ಕಷ್ಟು ಖರೀದಿ ಮಾಡಿದರು.

ಗಡಿಯಾರ ಕಂಬ, ಚಾಮರಾಜಪೇಟೆಯ ಮಾರುಕಟ್ಟೆಗಳಲ್ಲಿ ಹಳ್ಳಿ ಹಾಗೂ ನಗರದ ಜನರು ಸಂಕ್ರಾತಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಆದರೂ ಮಾರುಕಟ್ಟೆಯಲ್ಲಿ ಕೆಲಮಟ್ಟಿಗೆ ವ್ಯಾಪಾರ ಕುಂಠಿತವಾಗಿತ್ತು.

ಮಾರುಕಟ್ಟೆಯಲ್ಲಿ ಕೆ.ಜಿ ಸೇಬು 200 ರೂ, ಕಿತ್ತಲೆಹಣ್ಣು 50 ರೂ., ದಾಳಿಂಬೆ 60 ರೂ, ಪಪ್ಪಾಯಿ 30 ರೂ., ಕರಿದ್ರಾಕ್ಷಿ 100 ರೂ, ಹಸಿರು ದ್ರಾಕ್ಷಿ 60 ರೂ, ಅಂಜೂರ ಒಂದಕ್ಕೆ 10ರೂ., ಒಂದು ಸಣ್ಣ ಕಲ್ಲಂಗಡಿ 20 ರೂ., ಮಾರು ಸೇವಂತಿಗೆ ಹೂವು 30 ರೂ. ನಂತೆ ಮಾರಾಟ ಮಾಡಲಾಗುತ್ತಿತ್ತು. ಮಾರುಕಟ್ಟೆಗೆ ಬಂದಂತಹ ಜನರು ಸಹ ಅಷ್ಟೇ ಉತ್ಸುಕರಾಗಿ ಖರೀದಿ ಮಾಡಿದರು.

Advertisement

ಪ್ರತಿ ವರ್ಷ 15 ರಿಂದ 20ರೂ.ಗೆ ಮಾರಾಟವಾಗುತ್ತಿದ್ದ ಒಂದು ಕಬ್ಬಿನ ಕೋಲು ಈ ಬಾರಿ 40 ರೂ.ಗೆ ಮಾರಾಟವಾದವು. ಮಾಮೂಲಿಯಾಗಿ ಜಿಲ್ಲೆಯಲ್ಲಿ ಸಿಗುವ ಕಬ್ಬು ಇದಲ್ಲ. ಮೈಸೂರು, ಮಂಡ್ಯ, ಶಿವಮೊಗ್ಗ ಭಾಗದಿಂದ ತರಿಸುತ್ತೇವೆ. ಹಾಗಾಗಿ ಸಾಗಾಣಿಕೆ ವೆಚ್ಚ ಹೆಚ್ಚಿದ್ದು, ಬೆಲೆ ಏರಿಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಕಬ್ಬು ವ್ಯಾಪಾರಿ ಚಾನ್‌.

ಮಾರುಕಟ್ಟೆಯಲ್ಲಿ ಹೂವು, ಹಣ್ಣು ಇತರೆ ಬೆಲೆ ಏನೇ ಹೆಚ್ಚಿದರೂ ಕೂಡ ವರ್ಷದ ಮೊದಲ ಸುಗ್ಗಿ ಹಬ್ಬವನ್ನು ಮಾಡದೇ ಬಿಡುವಂತಿಲ್ಲ. ಕಬ್ಬು, ಹಣ್ಣು, ಎಳ್ಳು ಬೆಲ್ಲವಿಟ್ಟು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ಹಬ್ಬಕ್ಕೆ ಸಾರ್ವಜನಿಕ ರಜೆ ಇರುವುದರಿಂದ ರೊಟ್ಟಿ, ಬುತ್ತಿ, ಪಲ್ಯ, ಚಟ್ನಿಪುಡಿ, ಮೊಸರು ಹೀಗೆ ಬಗೆ ಬಗೆಯ ಅಡುಗೆ ಖಾದ್ಯ ಮಾಡಿಕೊಂಡು ಹೊಳೆ ಇಲ್ಲವೇ ಉದ್ಯಾನಗಳಿಗೆ ಕುಟುಂಬ ಸಮೇತರಾಗಿ ಹೋಗಿ ಭೋಜನ ಸವಿಯುತ್ತೇವೆ. ಆ ಮೂಲಕ ಹಬ್ಬವನ್ನು ಸಂತಸದಿಂದ ಆಚರಣೆ ಮಾಡುತ್ತೇವೆ ಎಂದು ನಗರದ ಶಿವಕುಮಾರ್‌ ಬಡಾವಣೆಯ ಗೃಹಿಣಿ ಗಾಯಿತ್ರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next