ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ 2019ರ ಆಗಸ್ಟ್ 5ರಂದು ರದ್ದುಗೊಳಿಸಿ, ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತ್ತು. ಇದಾದ ಬಳಿಕ ಈ ಎರಡೂ ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಕಳೆದ ಐದು ವರ್ಷಗಳಿಂದ ರಾಜಕೀಯ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿದ್ದವು. ಈಗ ಲೋಕಸಭಾ ಚುನಾವಣೆಯ ಘೋಷಣೆಯ ಬಳಿಕ ಜಮ್ಮು- ಕಾಶ್ಮೀರ ಹಾಗೂ ಲಡಾಖ್‌ನ ಜನರು ಸಾರ್ವತ್ರಿಕ ಚುನಾವಣೆ ಯಲ್ಲಿ ತಮ್ಮ ಹಕ್ಕು ಚಲಾಯಿಸಲು ಸನ್ನದ್ಧರಾಗಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶ, ಮುಂದೆ ನಡೆಯಲಿರುವ ಜಮ್ಮು- ಕಾಶ್ಮೀರ ವಿಧಾನಸಭೆ ಚುನಾ ವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆ ಇಡೀ ದೇಶದ ಚಿತ್ತವನ್ನು ತನ್ನತ್ತ ಸೆಳೆದಿದೆ.
ಇಲ್ಲಿನ 6 ಕ್ಷೇತ್ರಗಳ ಫಲಿತಾಂಶ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ಗೆ ತಮ್ಮ ಸ್ಥಾನಗಳ ವೃದ್ಧಿಗೆ ಮಾತ್ರವಲ್ಲದೆ ಸೈದ್ಧಾಂತಿಕ ನೆಲೆಯಲ್ಲಿಯೂ ಹೆಚ್ಚಿನ ಪ್ರಾಮುಖ್ಯ ವನ್ನು ಪಡೆದಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳಾದ ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ), ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಜೆಕೆಪಿಡಿಪಿ), ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಪರೆನ್ಸ್ (ಜೆಕೆಪಿಸಿ), ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ), ಬಿಎಸ್‌ಪಿ, ಸಿಪಿಐ ಚುನಾವಣ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ.
ಪ್ರಾಬಲ್ಯ ಮೆರೆಯಲು ಪೈಪೋಟಿ: 2019ರ ಚುನಾವಣೆ ಯಲ್ಲಿ ಬಿಜೆಪಿ, ಜಮ್ಮುವಿನ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಕೆಎನ್‌ಸಿ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಸದ್ಯ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಂಡಿರುವ ಆಗಿನ ಲಡಾಖ್ ಕ್ಷೇತ್ರವನ್ನು ಬಿಜೆಪಿ ತನ್ನ ಬಗಲಿಗೆ ಹಾಕಿಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯಕ್ಕೆ ಸೀಮಿತವಾದರೆ, ನ್ಯಾಶನಲ್ ಕಾನ್ಫರೆನ್ಸ್ ಕಾಶ್ಮೀರ ಕಣಿವೆಯಲ್ಲಿನ ಮೂರೂ ಸ್ಥಾನಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಮಹತ್ತರ ಸಾಧನೆಗೈದಿತ್ತು.
2014ಕ್ಕೂ ಮುನ್ನ ಜಮ್ಮು ಮತ್ತು ಲಡಾಖ್ ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಆ ಬಳಿಕ ತನ್ನ ಹಿಡಿತ ಕಳೆದುಕೊಂಡಿತ್ತು. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ನೆಲೆಯೂರುವ ಮೂಲಕ ಕಾಂಗ್ರೆಸ್‌ನ್ನು ಬದಿಗೆ ಸರಿಸಿತ್ತು. ಈ ಬಾರಿ ಕೂಡ ಇಲ್ಲಿನ ಮೂರೂ ಕ್ಷೇತ್ರಗಳಲ್ಲಿ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಇದೇ ವೇಳೆ ಬಿಜೆಪಿ, ಜಮ್ಮು ಪ್ರದೇಶದ ಈ ಹಿಂದಿನ ತನ್ನ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಯಲ್ಲಿ ಎನ್‌ಸಿ ಹಿಡಿತದ ಲ್ಲಿರುವ ಕಣಿವೆ ಪ್ರದೇಶದ ಮೂರು ಕ್ಷೇತ್ರಗಳತ್ತಲೂ ದೃಷ್ಟಿ ನೆಟ್ಟಿದೆ. ಈ ಬಾರಿ ಎನ್‌ಸಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟಿದೆ ಯಾದರೂ ಕೊನೇ ಕ್ಷಣದಲ್ಲಿ ಪಿಡಿಪಿ ಕಾಶ್ಮೀರ ಕಣಿವೆಯ ಮೂರು ಕ್ಷೇತ್ರಗಳಲ್ಲಿ ಏಕಾಂಗಿ ಕಣಕ್ಕಿಳಿಯುವ ನಿರ್ಧಾರ ಕೈಗೊಂಡಿರುವುದರಿಂದ ಇದು ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ. ಕ್ಷೇತ್ರಗಳ ಪುನರ್ವಿಂಗಡಣೆಯೂ ಬಿಜೆಪಿಗೆ ಅನುಕೂಲಕರವಾಗಿದೆ ಎಂದು ವಿಶ್ಲೇಷಿಸಲಾಗಿದ್ದು, ಬಿಜೆಪಿ ಒಟ್ಟಾರೆಯಾಗಿ ಕಣಿವೆ ರಾಜ್ಯದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಗುಲಾಂ ನಬಿ ಆಜಾದ್ ಅವರ ರಾಜಕೀಯ ನಡೆ ಒಂದಿಷ್ಟು ಕೌತುಕಕ್ಕೆ ಕಾರಣವಾಗಿದೆ.
ಅನಂತನಾಗ್-ರಜೌರಿ ಕ್ಷೇತ್ರದ ಹಣಾಹಣಿ ತೀವ್ರ ಕುತೂ ಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿಪಿಎಪಿ ನಾಯಕ ಗುಲಾಂ ನಬಿ ಆಜಾದ್, ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಮತ್ತು ಪ್ರಭಾವಿ ಬುಡಕಟ್ಟು ನಾಯಕ ನ್ಯಾಶನಲ್ ಕಾನ್ಪರೆನ್ಸ್‌ನ ಮಿಯಾನ್ ಅಲ್ತಾಫ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಕ್ಷೇತ್ರದಲ್ಲಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ಗುಲಾಂ ನಬಿ ಆಜಾದ್ ಗೆಲುವಿಗೆ ಸಹಕರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಾರಾಮುಲ್ಲ ಕ್ಷೇತ್ರದಿಂದ ನ್ಯಾಶನಲ್ ಕಾನ್ಪರೆನ್ಸ್ ಉಪಾಧ್ಯಕ್ಷ, ಒಮರ್ ಅಬ್ದುಲ್ಲಾ ಕಣಕ್ಕಿಳಿಯಲಿದ್ದಾರೆ.
ವಿಪಕ್ಷಗಳ ಆಂಶಿಕ ಮೈತ್ರಿ: ವಿಪಕ್ಷ ಮೈತ್ರಿಕೂಟ ಇಂಡಿಯಾದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಕೆಎನ್‌ಸಿ ಹಾಲಿ ಲೋಕಸಭೆ ಚುನಾವಣೆಯನ್ನು ಜಂಟಿಯಾಗಿ ಎದುರಿಸಲು ನಿರ್ಧರಿಸಿವೆ. ಜಮ್ಮು ಮತ್ತು ಕಾಶ್ಮೀರದ ಮತ್ತು ಲಡಾಖ್‌ನ ಒಟ್ಟು ಆರು ಸ್ಥಾನಗಳ ಪೈಕಿ ತಲಾ ಮೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಅದರಂತೆ ಅನಂತನಾಗ್, ಶ್ರೀನಗರ ಮತ್ತು ಬಾರಾಮುಲ್ಲ ಕ್ಷೇತ್ರಗಳಲ್ಲಿ ನ್ಯಾಶನಲ್ ಕಾನ್ಫರೆನ್ಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದರೆ, ಉಧಂಪುರ, ಜಮ್ಮು ಮತ್ತು ಲಡಾಖ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಇನ್ನು ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಕಾಶ್ಮೀರ ಕಣಿವೆಯಲ್ಲಿನ 3 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಜಮ್ಮು ಮತ್ತು ಉಧಂಪುರದಲ್ಲಿ ವಿಪಕ್ಷ ಒಕ್ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆ. ಇಲ್ಲಿ ಮುಸ್ಲಿಂ ಜನಸಂಖ್ಯೆ ಶೇ. 68ರಷ್ಟಿದ್ದರೆ, ಹಿಂದೂಗಳು ಶೇ. 28, ಸಿಕ್ಖರು ಶೇ. 2, ಬೌದ್ಧರ ಸಂಖ್ಯೆ ಶೇ. 1ರಷ್ಟಿದೆ. ಬಿಜೆಪಿ ಹಿಂದೂ, ಬೌದ್ಧ, ಬುಡಕಟ್ಟು ಮತ್ತು ದಲಿತ ಮತಗಳನ್ನು ಅವಲಂಬಿಸಿದ್ದರೆ, ವಿಪಕ್ಷಗಳ ಪಾಲಿಗೆ ಮುಸ್ಲಿಂ ಮತಗಳೇ ಓಟ್ ಬ್ಯಾಂಕ್. ವಿಪಕ್ಷಗಳಲ್ಲಿನ ಒಡಕು ಬಿಜೆಪಿಗೆ ಪ್ಲಸ್ ಪಾಯಿಂಟ್.
2019ರ ಲೋಕಸಭೆ ಫಲಿತಾಂಶ
ಒಟ್ಟು 06-JKNC 03 BJP 03
ಮತದಾನ ಯಾವಾಗ? ಎ.19, ಎ.26, ಮೇ 7, ಮೇ 13, ಮೇ 20
ಚುನಾವಣ ವಿಷಯಗಳು
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು. 2 ಕೇಂದ್ರಾಡಳಿತ ಪ್ರದೇಶ ಗಳನ್ನಾಗಿ ವಿಭಜನೆ
ವಿಶೇಷ ಸ್ಥಾನ ಮಾನ ರದ್ದಾದ ಅನಂತರ ಉಗ್ರರ ಉಪಟಳ ಇಳಿಕೆ, ಶಾಂತಿ ವಾಪಸ್. ವೇಗದ ಅಭಿವೃದ್ಧಿ , ಉದ್ಯೋಗ ಸೃಷ್ಟಿ
ವಲಸಿಗ ಕಾರ್ಮಿಕರ ಮೇಲೆ ಮತ್ತೆ ನಡೆಯುತ್ತಿ ರುವ ಉಗ್ರರ ಹಿಂಸಾಚಾರ.
ಪಹಾಡಿ ಸಮುದಾಯಕ್ಕೆ ಮೀಸಲಾತಿ ಭರವಸೆ
ರಾಜ್ಯದ ಸ್ಥಾನಮಾನ ಕಳೆದುಕೊಂಡಿ ರುವುದು
ಹರೀಶ್ ಕೆ.