Advertisement

ನ.10ರ ಜಿಎಸ್‌ಟಿ ಸಭೆಯಲ್ಲಿ ಸರಕುಗಳ ತೆರಿಗೆ ಇಳಿಕೆ ಸಾಧ್ಯತೆ 

06:40 AM Oct 29, 2017 | Team Udayavani |

ಬೆಂಗಳೂರು: “ಮುಂದಿನ ತಿಂಗಳ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಆಯ್ದ ಸರಕು ಸೇವೆಗಳ ತೆರಿಗೆ ಪ್ರಮಾಣ ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಜಿಎಸ್‌ಟಿ ನೆಟ್‌ವರ್ಕ್‌ಅನ್ನು ಬಳಕೆದಾರ ಸ್ನೇಹಿಯನ್ನಾಗಿಸಿ ಸರಳಗೊಳಿಸುವಂತೆ ಇನ್ಫೋಸಿಸ್‌ ಸಂಸ್ಥೆಗೆ ಸೂಚಿಸಲಾಗಿದೆ’ ಎಂದು ಜಿಎಸ್‌ಟಿ ನೆಟ್‌ವರ್ಕ್‌ನ ಸಚಿವರ ತಂಡದ ಮುಖ್ಯಸ್ಥರಾದ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದರು.

Advertisement

ಶನಿವಾರ ಸಮಿತಿಯ 3ನೇ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, “ಜಿಎಸ್‌ಟಿಯಡಿ ವ್ಯವಹರಿಸುವಲ್ಲಿ ಎದುರಾಗಿರುವ ಸಮಸ್ಯೆ, ತಾಂತ್ರಿಕ ಸವಾಲು, ಅನುಷ್ಠಾನದಲ್ಲಿನ ದೋಷಗಳ ಬಗ್ಗೆ ಸಲ್ಲಿಕೆಯಾಗುವ ಮಾಹಿತಿ, ಸಲಹೆಗಳನ್ನು ಜಿಎಸ್‌ಟಿ ಮಂಡಳಿ ಸಭೆಯ ಗಮನಕ್ಕೆ ತರಲಾಗುತ್ತಿದೆ. ಅ.6ರ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಹಲವು ಸರಕುಗಳ ತೆರಿಗೆ ಪ್ರಮಾಣ ಇಳಿಕೆ ಮಾಡಲಾಗಿದೆ. ಅದೇ ರೀತಿ ನ.10ರಂದು ನಡೆಯಲಿರುವ ಸಭೆಯಲ್ಲಿ ಆಯ್ದ ಸರಕು, ಸೇವೆಗಳ ತೆರಿಗೆ ಪ್ರಮಾಣ ಶೇ.28ರಿಂದ ಶೇ.18ಕ್ಕೆ ಇಳಿಕೆ ಸೇರಿ ನಾನಾ ಹಂತದ ತೆರಿಗೆ ಪರಿಷ್ಕರಣೆ ಸಾಧ್ಯತೆ ಇದೆ ಎಂದು ಹೇಳಿದರು.

ಈ ಹಿಂದೆ ಜಾರಿಯಲ್ಲಿದ್ದ ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿ ತೆರಿಗೆ ವ್ಯವಸ್ಥೆಯಡಿ ಏಕರೂಪದಲ್ಲಿ ಒಗ್ಗೂಡಿಸುವ ಕೆಲಸ ಸಾಕಷ್ಟು ಸವಾಲಿನದ್ದಾಗಿದೆ. ಹಾಗಾಗಿ ನೆಟ್‌ ವರ್ಕ್‌ಗೆ ಸಂಬಂಧಪಟ್ಟಂತೆ ಸಮಸ್ಯೆ, ಸವಾಲು ವ್ಯಾಪಕವಾಗಿವೆ. ಪ್ರಮುಖವಾದ 47 ತಾಂತ್ರಿಕ ಸವಾಲು, ಸಮಸ್ಯೆಗಳನ್ನು ಗುರುತಿಸಿ ಇದರಲ್ಲಿ 27 ಸವಾಲುಗಳ ನ್ನು ಅ.31ರೊಳಗೆ ಬಗೆಹರಿಸುವಂತೆ ಇನ್ಫೋಸಿಸ್‌ ಸಂಸ್ಥೆಗೆ ಗಡುವು ನೀಡಲಾಗಿತ್ತು. ಆದರೆ ಅ.28ರವರೆಗೆ 18 ಮಾತ್ರ ಬಗೆಹರಿದಿದ್ದು, ಶೇ.67.7ರಷ್ಟು ಗುರಿ ಸಾಧನೆಯಾದಂತಾಗಿದೆ. ಬಾಕಿಯಿರುವ ತಾಂತ್ರಿಕ ಸವಾಲುಗಳ ಜತೆಗೆ ಇನ್ನೂ ಕೆಲವು ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸುವಂತೆಯೂ ಸೂಚಿಸಲಾಗಿದೆ ಎಂದು ವಿವರಿಸಿದರು.ಸಮಿತಿಯಲ್ಲಿರುವ ಸಚಿವ ಕೃಷ್ಣ ಬೈರೇಗೌಡ, ತೆಲಂಗಾಣ ಸಚಿವ ಚೆಲ್ಲಂ ರಾಜೇಂದ್ರ, ಜಿಎಸ್‌ಟಿ ನೆಟ್‌ವರ್ಕ್‌ನ
ಎ.ಬಿ.ಪಾಂಡೆ ಇತರರು ಉಪಸ್ಥಿತರಿದ್ದರು.

ತೆರಿಗೆ ಪಾವತಿಸಿದವರ ಸಂಖ್ಯೆ ಇಳಿಕೆ
ಜುಲೈ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ 56 ಲಕ್ಷ ಮಂದಿ ಜಿಎಸ್‌ಟಿ ತೆರಿಗೆ ಪಾವತಿಸಿದ್ದರೆ, ಆಗಸ್ಟ್‌ ವಹಿವಾಟಿಗೆ ಸಂಬಂಧಪಟ್ಟಂತೆ 53 ಲಕ್ಷ ಮಂದಿ ತೆರಿಗೆ ಪಾವತಿಸಿದ್ದಾರೆ. ಆದರೆ ಸೆಪ್ಟೆಂಬರ್‌ ವಹಿವಾಟು ಕುರಿತಂತೆ 45.84 ಲಕ್ಷ ಮಂದಿಯಷ್ಟೇ ತೆರಿಗೆ ಪಾವತಿಸಿದ್ದಾರೆ. ತೆರಿಗೆದಾರರ ಸಂಖ್ಯೆ ಇಳಿಕೆಗೆ ಕಾರಣವಾದ ಅಂಶಗಳನ್ನು ಗುರುತಿಸಿ ಪರಿಶೀಲಿಸುವ ಕಾರ್ಯ ನಡೆದಿದೆ ಎಂದು ಸುಶೀಲ್  ಕುಮಾರ್‌ ಮೋದಿ ತಿಳಿಸಿದರು. ಜುಲೈ, ಆಗಸ್ಟ್‌ನಲ್ಲಿ ಜಿಎಸ್‌ಟಿ ತೆರಿಗೆಯಿಂದ 15,060 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ಅರುಣಾಚಲ ಪ್ರದೇಶ, ರಾಜಸ್ತಾನ ಹೊರತುಪಡಿಸಿ ಉಳಿದ ರಾಜ್ಯಗಳಿಗೆ ಜುಲೈ, ಆಗಸ್ಟ್‌ ತಿಂಗಳ ಪರಿಹಾರವಾಗಿ 8698 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ತಿಂಗಳ ತೆರಿಗೆ ವಿಳಂಬ ಪಾವತಿಗೆ ದಂಡ ವಿಧಿಸುವುದನ್ನು ಈಗಾಗಲೇ ಕೈಬಿಡಲಾಗಿದೆ. 6 ತಿಂಗಳ ನಂತರ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಲಾಗುವುದು.
– ಸುಶೀಲ್‌ ಕುಮಾರ್‌ ಮೋದಿ,
ಜಿಎಸ್‌ಟಿ ನೆಟ್‌ವರ್ಕ್‌ ಸಚಿವರ ತಂಡದ ಮುಖ್ಯಸ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next